ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪುಸ್ತಕಗಳು ಕೊಡುವ ಕಲ್ಪನಾಶಕ್ತಿಯನ್ನು ನಾವು ಬಳಸುತ್ತಿರುವ ಮೊಬೈಲ್‌ಗಳು ನಾಶಪಡಿಸುತ್ತಿವೆ. ಇಂದಿನ ಮಕ್ಕಳು ಅತಿಯಾದ ಮೊಬೈಲ್ ಬಳಕೆಯಿಂದಾಗಿ ತಮ್ಮ ಕಲ್ಪನಾಶಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಪ್ರಜಾವಾಣಿ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ಹೇಳಿದ್ದಾರೆ.
ಅವರು ಇಂದು ಕನ್ನಡ ಪುಸ್ತಕ ಪ್ರಾಧಿಕಾರ ಆರಂಭಿಸಿರುವ “ಅಂಗಳದಲ್ಲಿ ತಿಂಗಳ ಪುಸ್ತಕ” ನೂತನ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು. ಕನ್ನಡ ಭವನದ ವರ್ಣಗ್ಯಾಲರಿಯಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಸುವರ್ಣ ಸಂಭ್ರಮದ ಅಂಗವಾಗಿ ಪ್ರಕಟಮಾಡಿದ್ದ ಆರು ವಿಶೇಷ ಸಂಪುಟಗಳನ್ನು ಪರಿಚಯ ಮಾಡಿಕೊಡಲಾಯಿತು. ಈ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂದು ಪುಸ್ತಕ ಓದುವ ಅಭಿರುಚಿಯಿಂದ ಮಕ್ಕಳು ವಂಚಿತರಾಗುತ್ತಿದ್ದಾರೆ. ಪೋಷಕರು ಪುಸ್ತಕ ಓದುವ ಅಭ್ಯಾಸ ರೂಢಿಸುವ ಬದಲು ಮಕ್ಕಳನ್ನು ರಮಿಸಲು ಮೊಬೈಲ್ ಕೈಗೆ ಕೊಡುವ ಅಭ್ಯಾಸ ಮಾಡುತ್ತಿದ್ದಾರೆ. ಊಟ ಮಾಡದ ಮಕ್ಕಳನ್ನು ಒಲಿಸಲು, ರಚ್ಚೆ ಹಿಡಿದ ಮಕ್ಕಳನ್ನು ಸುಮ್ಮನಾಗಿಸಲು ಪೋಷಕರು ಮಕ್ಕಳ ಕೈಗೆ ಮೊಬೈಲ್ಗಳನ್ನು ಕೊಡುವ ಅಭ್ಯಾಸ ಮಾಡಿದ್ದಾರೆ. ಅದರ ಬದಲಾಗಿ ಪುಸ್ತಕ ತೋರಿಸುವ, ಪುಸ್ತಕ ಓದುವ ಅಭ್ಯಾಸವನ್ನು ರೂಢಿಸಿದ್ದಲ್ಲಿ ಮಕ್ಕಳ ಕಲ್ಪನಾಶಕ್ತಿ ಹಿಗ್ಗುತ್ತದೆ. ಈಗ ನಾವು ಟಿ.ವಿ., ಸಿನಿಮಾ, ಮೊಬೈಲ್ಗಳಲ್ಲಿ ನೋಡುವ ರಾಮ, ಹನುಮ ಇತ್ಯಾದಿ ವ್ಯಕ್ತಿ ಹಾಗೂ ಚಿತ್ರಗಳ ರೂಪವನ್ನು ಸಿದ್ಧಮಾದರಿಯಲ್ಲಿ ಅವರಿಗೆ ದೃಶ್ಯ ರೂಪದಲ್ಲಿ ನೀಡುತ್ತಿದ್ದೇವೆ. ಆದರೆ ಪುಸ್ತಕಗಳು ಅವರ ರೂಪವನ್ನು ಕಲ್ಪಿಸಿಕೊಳ್ಳಲು ಮಕ್ಕಳಿಗೆ ಅವಕಾಶ ಕೊಡುತ್ತಿದ್ದವು. ಹಾಗಾಗಿ ಇಂದಿನ ಮಕ್ಕಳ ಕಲ್ಪನಾಶಕ್ತಿಯನ್ನು ಪೋಷಕರೇ ಕುಗ್ಗಿಸುತ್ತಿದ್ದಾರೆ ಎಂದು ಅವರು ಹೇಳಿದರು.
Also read: ಮಕ್ಕಳ ದಿನಾಚರಣೆ ಹಿನ್ನೆಲೆ | ಡಿ.1ರಂದು ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ
ನಮ್ಮಲ್ಲಿ ಪುಸ್ತಕಗಳಿಗೆ ಕೊರತೆ ಇಲ್ಲ, ಪ್ರತಿ ವರ್ಷವೂ ಅಸಂಖ್ಯಾತ ಪುಸ್ತಕಗಳು ಪ್ರಕಟವಾಗುತ್ತಿವೆ, ಅವು ಮಾರಾಟವೂ ಆಗುತ್ತವೆ. ಆದರೆ ಅವುಗಳನ್ನು ಜನರು ಓದುತಿದ್ದಾರೆಯೇ ಎಂಬುದೇ ಮೂಲಭೂತ ಪ್ರಶ್ನೆ. ಲೇಖನ ನೋಡಿದೆ, ಪುಸ್ತಕ ನೋಡಿದೆ ಎನ್ನುವವರೇ ಹೆಚ್ಚಾಗಿದ್ದಾರೆಯೇ ಹೊರತು, ಲೇಖನ ಓದಿದೆ ಎಂದು ಹೇಳುವವರು ಕಡಿಮೆ. ಮೊದಲು ನಾವು ನೋಡುವ ಕ್ರಿಯೆಯನ್ನು ತಪ್ಪಿಸಿ ಓದುವ ಕ್ರಿಯೆಗೆ ಮರಳಿ ಬರಬೇಕಾದ ಅವಶ್ಯಕತೆ ಇದೆ. ಅದರಿಂದ ಪುಸ್ತಕ ಸಂಸ್ಕೃತಿ ನಿಜವಾಗಿ ಬೆಳೆಯುತ್ತದೆ ಎಂದು ರವೀಂದ್ರ ಭಟ್ ತಿಳಿಸಿದರು. ಮನಸ್ಸು ಹಾಗೂ ಹೃದಯಕ್ಕೆ ಸಂವೇದನೆಯನ್ನು ಕಲ್ಪಿಸಬಲ್ಲ ಶಕ್ತಿ ಕೇವಲ ಪುಸ್ತಕಗಳಿಗೆ ಮಾತ್ರ ಇದೆ. ಓದು ಮತ್ತು ಬರಹ ನಮ್ಮ ಹೃದಯ ಮತ್ತು ಮನಸ್ಸುಗಳಿಗೆ ಮಿಡಿತವನ್ನು ಕೊಡುತ್ತದೆ. ಆದರೆ ಆಧುನಿಕತೆ ಕೀಲೀಮಣೆಗಳಿಗೆ ನಮ್ಮ ಕೈ ಮತ್ತು ಮನಸ್ಸುಗಳನ್ನು ಹಿಡಿತಕ್ಕೆ ಕೊಟ್ಟುಬಿಟ್ಟಿದೆ. ಅದನ್ನು ಮೀರಿ ಪುಸ್ತಕಗಳು ನಮಗೆ ಮಾನಸಿಕ ಸ್ಥೈರ್ಯ, ಧೈರ್ಯ ಕೊಡುತ್ತವೆ. ಹಾಗಾಗಿ ಪುಸ್ತಕಗಳು ನಮ್ಮ ಬದುಕಿಗೆ ಮುಖ್ಯ ಎಂದು ಅವರು ಹೇಳಿದರು.
ಸಮಾರಂಭದಲ್ಲಿ ಆಶಯ ಭಾಷಣ ಮಾಡಿದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಅವರು ಪುಸ್ತಕ ಪ್ರಾಧಿಕಾರ ಅತ್ಯಂತ ಮಹತ್ವಾಕಾಂಕ್ಷೆಯಿಂದ “ಅಂಗಳದಲ್ಲಿ ತಿಂಗಳ ಪುಸ್ತಕ” ಯೋಜನೆ ರೂಪಿಸಿದೆ. ಪ್ರತೀ ತಿಂಗಳು ಒಂದು ಪ್ರಮುಖ ಪುಸ್ತಕದ ಬಗ್ಗೆ ಲೇಖಕರು ಪರಿಚಯ ಮಾಡಿಕೊಡುತ್ತಾರೆ. ಪುಸ್ತಕ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಮಹತ್ವದ್ದಾಗಿದೆ ಎಂದು ಹೇಳಿದರು.
ಒಂದು ಪ್ರಬುದ್ಧ ಮಸ್ತಕ ಹಲವು ಪ್ರಬುದ್ಧ ಪುಸ್ತಕಗಳ ರಚನೆಗೆ ಕಾರಣವಾಗುತ್ತದೆ ಹಾಗೆಯೇ ಒಂದು ಪ್ರಬುದ್ಧ ಪುಸ್ತಕ ಪ್ರಬುದ್ಧ ಮಸ್ತಕದ ಬೆಳವಣಿಗೆಗೆ ಪೂರಕವಾಗುತ್ತದೆ ಇವೆರಡೂ ಪರಸ್ಪರ ಸಂಬಂಧವಿರುವ ಕ್ರಿಯೆಗಳು. ಇಂದು ಪುಸ್ತಕ ಹಿಡಿಯುವ ಕೈಗಳನ್ನು ಮೊಬಲ್ಗಳು ಆಕ್ರಮಿಸಿದೆ. ನಾವು ಆ ಕೈಗಳಲ್ಲಿ ಮತ್ತೆ ಪುಸ್ತಕ ಹಿಡಿಯುವಂತೆ ಮಾಡಬೇಕಿದೆ ಎಂದರು. ಪುಸ್ತಕವನ್ನು ಪ್ರೀತಿಸಿದರೆ ನಾವು ನಮ್ಮನ್ನು ನಾವೇ ಪ್ರೀತಿಸಿದಂತೆ. ಹಾಗಾಗಿ ಪುಸ್ತಕ ಸಂಸ್ಕೃತಿಯ ಬೆಳವಣಿಗೆಗೆ ನಾವೆಲ್ಲರು ಪ್ರಯತ್ನಿಸಬೇಕಿದೆ ಎಂದರು. ಮನೆಗೊಂದು ಗ್ರಂಥಾಲಯ ಎಂಬ ಪರಿಕಲ್ಪನೆ ಇದಕ್ಕೆ ಪೂರಕವಾಗಿಯೇ ರೂಪಿಸಲಾಗಿದೆ ಎಂದು ಅವರು ತಿಳಿಸಿದರು.
ಸಮಾರಂಭದಲ್ಲಿ ಕಲೆ ಕುರಿತ ಪುಸ್ತಕವನ್ನು ಕೆ.ವಿ. ಸುಬ್ರಹ್ಮಣ್ಯಂ ಪರಿಚಯಿಸಿದರು. ಸಾಹಿತ್ಯ ಕುರಿತಾದ ಸಂಪುಟದ ಬಗ್ಗೆ ಲಕ್ಷ್ಮಣ ಕೊಡಸೆ ಅವರು ಮಾತನಾಡಿದರು. ಕೃಷಿ ಹಾಗೂ ತೋಟಗಾರಿಕೆ ಬಗ್ಗೆ ರೂಪುಗೊಂಡ ಸಂಪುಟದ ಬಗ್ಗೆ ಶಿವಾನಂದ ಕಳವೆಯವರು ವಿವರಿಸಿದರು. ಹಾಗೆಯೇ ವಿಜ್ಞಾನ-ತಂತ್ರಜ್ಞಾನ- ಕೈಗಾರಿಕೆ ಕುರಿತ ಸಂಪುಟದ ಬಗ್ಗೆ ಇಂಡಸ್ ಕೆ. ಜಯರಾಂ ಅವರು ವಿಶ್ಲೇಷಿಸಿದರು. ಸುವರ್ಣ ಸಂಭ್ರಮ ಅಭಿಯಾನವನ್ನು ಕುರಿತಂತೆ ರೂಪುಗೊಂಡ ಸ್ಮರಣ ಸಂಚಿಕೆ ರೂಪಗೊಂಡ ಬಗೆಯನ್ನು ಅದರ ಸಂಪಾಕರಾದ ಬಿ.ಎಸ್. ವಿದ್ಯಾರಣ್ಯ ವಿವರಿಸಿದರು.
ಸಮಾರಂಭದಲ್ಲಿ ಈ ಐದು ಜನ ಸಂಪಾದಕರನ್ನು ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಗೌರವಿಸಲಾಯಿತು. ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾದ ಡಾ. ಕುಶಾಲ ಬರಗೂರು ಹಾಗೂ ಬಿ.ಹೆಚ್. ನಿರಗುಡಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷರಾದ ಪ.ಸ. ಕುಮಾರ್, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ಎಂ.ಸಿ. ರಮೇಶ್ ಹಾಗೂ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಗೋವಿಂದಸ್ವಾಮಿ ಹಾಜರಿದ್ದರು. ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ. ಕಿರಣ್ ಸಿಂಗ್ ಸ್ವಾಗತಿಸಿದರು. ಸಹಾಯಕ ನಿರ್ದೇಶಕರಾದ ಶ್ರೀಮತಿ ಸೌಭಾಗ್ಯ ವಂದನಾರ್ಪಣೆ ಸಲ್ಲಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post