ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಾಗತಿಕ ತಾಪಮಾನ ಏರುತ್ತಿರುವ ಹಾಗೂ ಪೆಟ್ರೋಲಿಯಂ ಇಂಧನಗಳ ವೆಚ್ಚವು ಹೆಚ್ಚಾಗುತ್ತಿರುವ ಈಗಿನ ಕಾಲದಲ್ಲಿ ಜೈವಿಕ ಇಂಧನಗಳ #Bio-Fuel ಬಳಕೆಯು ಹಾಗೂ ಜೈವಿಕ ಇಂಧನ ತಯಾರಿಕೆಗೆ ಸೂಕ್ತವಾದ ಮರಗಳಾದ ಹಿಪ್ಪೆ, ಹೊಂಗೆ, ಬೇವು, ಕಾಡು ಔಡಲ, ಸೀಮರೂಬ ಹೀಗೆ ಮುಂತಾದ ಮರಗಳನ್ನು ಬೆಳೆಸುವುದು ಅತ್ಯವಶ್ಯಕವಾಗಿದೆ ಎಂದು ಕೃಷಿ ವಿವಿ ಜೈವಿಕ ಇಂಧನ ಉದ್ಯಾನ ಪ್ರಧಾನ ಸಂಶೋಧಕರಾದ ಡಾ.ಹೊನ್ನಪ್ಪ ತಿಳಿಸಿದರು.
ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಸಹಯೋಗದಲ್ಲಿ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಡಿಯಲ್ಲಿ ಹೊಸಗೊದ್ದನಕೊಪ್ಪ ಹಾಗೂ ಹಳೇಮುಗಳಗೆರೆ ಗ್ರಾಮಗಳಲ್ಲಿ ಆಯೋಜಿಸಲಾಗಿದ್ದ ಜೈವಿಕ ಇಂಧನ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜೈವಿಕ ಇಂಧನ ಎಂಬುದು ಸಸ್ಯ ಮತ್ತು ಪ್ರಾಣಿಗಳಿಂದ ನವೀಕರಿಸಬಹುದಾದ ಶಕ್ತಿ ಮೂಲವಾಗಿದೆ. ಇವುಗಳನ್ನು ಪೆಟ್ರೋಲ್ ಮತ್ತು ಡಿಸೇಲ್ ನಂತೆಯೇ ಸಾಂಪ್ರದಾಯಿಕ ಪಳಿಯುಳಿಕೆ ಇಂಧನವಾಗಿ ವಿನ್ಯಾಸ ಮಾಡಲಾಗಿದೆ. ಎಥೆನಾಲ್, ಬಯೋಡಿಸೇಲ್ ಮತ್ತು ಬಯೋಗ್ಯಾಸ್’ನಂತಹ ವಿವಿಧ ಬಗೆಯ ಜೈವಿಕ ಇಂಧನಗಳಿವೆ. ಜೈವಿಕ ಇಂಧನಗಳು ಕಡಿಮೆ ಹಸಿರುಮನೆ ಅನಿಲ ಹೊರಸೂಸುವಿಕೆ, ಅನಿಲ ಆಮದು ಮೇಲಿನ ಅವಲಂಬನೆ ಮತ್ತು ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಉತ್ತೇಜನದಂತಹ ಅನೇಕ ಪ್ರಯೋಜನವನ್ನು ಹೊಂದಿದೆ ಎಂದರು.
ಜೈವಿಕ ಇಂಧನ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆ ನಡೆಯುತ್ತಿದ್ದು, ಈಗಾಗಲೇ ಹಲವು ಜೈವಿಕ ಇಂಧನ ಬಳಕೆಯಲ್ಲಿದೆ. ಈ ಬಗ್ಗೆ ಸಾರ್ವಜನಿಕರಿಗೆ ವ್ಯಾಪಕ ತಿಳುವಳಿಕೆ ಅಗತ್ಯವಿದೆ ಎಂದು ತಿಳಿಸಿದರು.
Also read: ಹಸುವಿನ ಕೆಚ್ಚಲಲ್ಲಿ ಸರಿಯಾಗಿ ಹಾಲು ಕರೆಯುವ ಕ್ರಮ ಹೇಗೆ? ಇಲ್ಲಿದೆ ಮಾಹಿತಿ
ಜೈವಿಕ ಇಂಧನ ಸ್ವರೂಪ, ಜೈವಿಕ ಇಂಧನ ಪಡೆಯಬಹುದಾದ ವೃಕ್ಷಗಳು, ಜೈವಿಕ ಇಂಧನ ಉತ್ಪಾದನೆ ಹಂತಗಳ ಬಗ್ಗೆ ವಿವರಿಸಿದರು. ಜೈವಿಕ ಇಂಧನ ಉಪ ಉತ್ಪನ್ನಗಳ ತಯಾರಿಕೆ ಮತ್ತು ನಿರ್ವಹಣೆ, ಜೈವಿಕ ಇಂಧನ ಉದ್ಯಾನದ ಕಾರ್ಯ ಚಟುವಟಿಕೆಗಳನ್ನು ಮತ್ತು ಜೈವಿಕ ಇಂಧನದಿಂದ ಪರಿಸರಕ್ಕೆ, ರೈತರಿಗೆ ಹಾಗೂ ವಾಹನ ಬಳಕೆ ಮಾಡುವವರಿಗೆ ಆಗುವ ಉಪಯೋಗಗಳ ಕುರಿತು ವಿವರಿಸಿದರು.
ಜೈವಿಕ ಇಂಧನದ ಮೂಲಗಳು
- ಜೈವಿಕ ಏಥನಾಲ್: ಇದನ್ನು ಸಿಹಿಗೆಣಸು, ಸಿಹಿಬೀಟ್ರೂಟ್, ಸಿಹಿಜೋಳ ಹಾಗೂ ಕೃಷಿ ತ್ಯಾಜ್ಯಗಳಾದ ಕಬ್ಬಿನ ಸಿಪ್ಪೆ, ಭತ್ತದ ಹುಲ್ಲು, ನಿರುಪಯುಕ್ತ ಹಣ್ಣುಗಳಿಂದ ತಯಾರಿಸಲಾಗುತ್ತದೆ.
- ಜೈವಿಕ ಡೀಸಲ್: ಇದನ್ನು ಅಖಾದ್ಯ ತೈಲ ಬೀಜಗಳು ಹಾಗೂ ಪ್ರಾಣಿಗಳ ಕೊಬ್ಬಿನಿಂದ ಮಾಡಲಾಗುತ್ತದೆ.
- ಬಯೋ ಗ್ಯಾಸ್ ಇದನ್ನು ಸಕ್ಕರೆ ಕಾರ್ಖಾನೆಗಳಲ್ಲಿ ದೊರೆಯುವ ತ್ಯಾಜ್ಯ ವಸ್ತುಗಳು ಹಾಗೂ ಅನುಪಯುಕ್ತ ಆಹಾರ ಪದಾರ್ಥಗಳನ್ನು ಬಳಸಿಕೊಂಡು ತಯಾರಿಸಲಾಗುತ್ತದೆ.
ಜೈವಿಕ ಇಂಧನದ ಪ್ರಯೋಜನಗಳು
- ನವೀಕರಿಸಬಹುದಾದ ಜೈವಿಕ ಇಂಧನಗಳಲ್ಲಿ ಗಂಧಕದ ಪ್ರಮಾಣವು ಕಡಿಮೆ ಇರುತ್ತದೆ.
- ರೈತರು ಹಾಗೂ ಕೃಷಿ ಕಾರ್ಮಿಕರಿಗೆ ಎಣ್ಣೆ ಬೀಜಗಳ ಮಾರಾಟದಿಂದ ನೇರ ಆರ್ಥಿಕ ಲಾಭ.
- ಡೀಸಲ್’ನೊಂದಿಗೆ ಬೆರೆಸಿ ಅಥವಾ ಡೀಸೆಲ್ ಗೆ ಬದಲಿಯಾಗಿ ಬಳಸಬಹುದು.
- ಜೈವಿಕ ಇಂಧನ ಬಳಸುವುದರಿಂದ ಸ್ಥಳೀಯ ಸಂಪನ್ಮೂಲಗಳ ಬಳಕೆ ಹಾಗೂ ಇಂಧನ ಸ್ವಾವಲಂಬನೆಯಾಗಿಬಹುದು.
- ಹಲವರಿಗೆ ಉದ್ಯೋಗಾವಕಾಶಗಳು ಸಿಗಲಿದೆ. ಬೀಜ ಸಂಗ್ರಹಣೆ ಹಾಗೂ ಮಾರಾಟದಿಂದ ರೈತರು, ಕೃಷಿ ಕಾರ್ಮಿಕರು ಲಾಭ ಪಡೆಯಬಹುದು.
- ಜೈವಿಕ ಇಂಧನ ಪೆಟ್ರೋಲಿಯಂ ಇಂಧನಕ್ಕಿಂತ ಕಡಿಮೆ ಪ್ರಮಾಣದಲ್ಲಿ ಕಾರ್ಬನ್ ಆಕ್ಸೆಡ್’ಗಳನ್ನು ವಾತಾವರಣಕ್ಕೆ ಬಿಡುತ್ತದೆ ಎಂದು ಸಂಶೋಧನೆಗಳು ಹೇಳಿವೆ. ಜೈವಿಕ ಇಂಧನವು ಪರಿಸರಸ್ನೇಹಿ ಹಾಗೂ ನವೀಕರಿಸಬಹುದಾದ ಇಂಧನವಾಗಿದೆ.
- ಜೈವಿಕ ಇಂಧನದಲ್ಲಿ ಗಂಧಕದ ಪ್ರಮಾಣ ಅತ್ಯಂತ ಕಡಿಮೆಯಾಗಿದೆ. ನಿರ್ವಹಣೆ, ಸಂಗ್ರಹಣೆ ಮತ್ತು ಸಾಗಣೆಯು ಸುರಕ್ಷಿತವಾಗಿರುತ್ತದೆ.
- ಇದರ ಬಳಕೆಯಿಂದ ಇಂಜಿನ್ನ ಕಾರ್ಯಕ್ಷಮತೆ ಹೆಚ್ಚಿಸಿ, ಇಂಜಿನ್ ಬಾಳಿಕೆಯನ್ನು ಹೆಚ್ಚಿಸುತ್ತದೆ.
- ಜೈವಿಕ ಇಂಧನಕ್ಕಾಗಿ ಮರಗಳನ್ನು ಬೆಳೆಯುವುದರಿಂದ ಮಣ್ಣಿನ ಸವಕಳಿಯನ್ನು ತಡೆಯಬಹುದು ಮತ್ತು ಮಣ್ಣಿನ ತೇವಾಂಶ ಕಾಪಾಡುತ್ತದೆ.
- ಈ ತರಬೇತಿ ಕಾರ್ಯಕ್ರಮದಲ್ಲಿ ವಿವಿಧ ಮರಗಳ ಬೀಜಗಳಿಂದ ತಯಾರಿಸಲಾಗಿದ್ದ ಡೀಸೆಲ್ ಗಳನ್ನು ತೋರಿಸಿ, ರೈತರಿಗೆ ಸಸಿಗಳನ್ನು ವಿತರಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post