ಕಲ್ಪ ಮೀಡಿಯಾ ಹೌಸ್ | ಮೈಸೂರು |
ಕ್ರಿಸ್ತಶಕ 1188ರಲ್ಲಿ ಹೊಯ್ಸಳ ರಾಜ ವೀರ ಬಲ್ಲಾಳ II ನಿರ್ಮಿಸಿದ ಶ್ರೀ ಮಹಾಲಿಂಗೇಶ್ವರ ದೇಗುಲ, ಕೆ. ಹೆಮ್ಮನಹಳ್ಳಿ ಮೈಸೂರಿನ ಇತಿಹಾಸ ಪ್ರಸಿದ್ಧ ದೇಗುಲಗಳಲ್ಲೊಂದು. ನಗರದ ಗದ್ದಿಗೆ ರಸ್ತೆಯಲ್ಲಿರುವ ಈ ದೇಗುಲ 1994ರಲ್ಲಿ ಜೀರ್ಣೋದ್ಧಾರಗೊಂಡಿತು.
ಶ್ರೀ ಮಹಾಶಿವರಾತ್ರಿ #Mahashivaratri ಸಂಭ್ರಮಾಚರಣೆಗೆ ಈ ದೇಗುಲ ನಾಡಿನ ಉದ್ದಗಲಕ್ಕೂ ಪ್ರಸಿದ್ಧ. ಧಾರ್ಮಿಕ, ಸಾಂಸ್ಕೃತಿಕ, ಜಾನಪದ ಆಚರಣೆಗಳೊಂದಿಗೆ ಆಚರಿಸಲಾಗುವ ಇಲ್ಲಿನ ಶ್ರೀ ಮಹಾಶಿವರಾತ್ರಿ ಹಬ್ಬ ಈ ಬಾರಿ ಇನ್ನಷ್ಟು ವಿಶಿಷ್ಟವಾಗಿರಲಿದೆ. ಕಾರಣ ಶಿವರಾತ್ರಿಯ ಜೊತೆಗೆ ಕೆರೆ ಹಬ್ಬ ಆಚರಣೆ.
ಮೈಸೂರು ನಗರವೆಂದರೆ ಅದು ಕೆರೆಗಳ ತವರಿದ್ದಂತೆ. ನಗರದ ಒಳಗೆ ಹಾಗು ಹೊರಗೆ, ಕುಡಿಯುವ ನೀರು ಹಾಗು ಕೃಷಿ ಹಾಗು ಸಂಬಂಧಪಟ್ಟ ಉದ್ದೇಶಗಳಿಗಾಗಿ ಇಲ್ಲಿ ನೂರಾರು ಕೆರೆಗಳು ನಿರ್ಮಾಣಗೊಂಡಿದ್ದವು. ಆದರೆ ಆಧುನಿಕ ದಿನಗಳಲ್ಲಿ ಒತ್ತುವರಿ, ಮಾಲಿನ್ಯ ಮತ್ತಿತರ ಕಾರಣಗಳಿಂದಾಗಿ ಈ ಪೈಕಿ ಬಹುತೇಕ ತಮ್ಮ ಅಸ್ತಿತ್ವ ಕಳೆದುಕೊಂಡಿವೆ. ಈ ಹಿನ್ನಲೆಯಲ್ಲಿ ಈ ದೇಗುಲದಲ್ಲಿ ಕೆರೆಗಳ ಪ್ರಾಮುಖ್ಯತೆ ಬಗ್ಗೆ ಜನಜಾಗೃತಿ ಮೂಡಿಸಲು, ಮಹಾ ಶಿವರಾತ್ರಿ ಹಬ್ಬದ ದಿನ ಧಾರ್ಮಿಕ-ಸಾಂಸ್ಕೃತಿಕ-ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಕೆರೆ ಹಬ್ಬ ಅನ್ನುವ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ಬಾರಿ ದೇಗುಲದಲ್ಲಿ ಮಹಾಶಿವರಾತ್ರಿ ಆಚರಣೆ ಹಾಗು ಜಾತ್ರಾ ಮಹೋತ್ಸವ ಬುಧವಾರ ಫೆಬ್ರವರಿ 26ರಂದು ನಡೆಯಲಿದೆ. ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಮೈಸೂರು ನಗರಕ್ಕೆ ಶುದ್ದ ಕುಡಿಯುವ ನೀರು ಒದಗಿಸಲು ನಿರ್ಮಾಣಗೊಂಡ ಕೆರೆ ಕೃಷ್ಣರಾಜ ದೊಡ್ಡ ಕೆರೆ. ಸುಮಾರು 37 ಎಕರೆ ವಿಸ್ತೀರ್ಣದ ಈ ಕೆರೆ ಸಾಹುಕಾರ್ ಹುಂಡಿ ಹಾಗು ಮಾದಗಳ್ಳಿ ಹಳ್ಳಿಗಳಲ್ಲಿ ಹರಡಿಕೊಂಡಿದೆ. ಒಂದು ಕಾಲದಲ್ಲಿ ನಗರದ ಜೀವನಾಡಿಯಾಗಿದ್ದ ನಗರದ ಕುಕ್ಕರಹಳ್ಳಿ ಕೆರೆಗೆ ಜಲಮೂಲವಾಗಿರುವ ಪೂರ್ಣಯ್ಯ ನಾಲೆ ಇಲ್ಲಿಂದಲೇ ಆರಂಭಗೊಳ್ಳುತ್ತದೆ. ಇದು ಈ ಕೆರೆಯ ಪ್ರಾಮುಖ್ಯತೆಗೆ ಸಾಕ್ಷಿ.
ಈಗ ಈ ಕೆರೆ ಭಾಗಶಃ ಪುನರುಜ್ಜೀವನಗೊಂಡಿದ್ದರೂ, ಸಮುದಾಯದ ಭಾಗವಹಿಸುವಿಕೆ ಇಲ್ಲದೆ ಇದರ ಜೀವಂತಿಕೆ ಉಳಿಸುವುದು ಕಷ್ಟ ಎಂದರಿತು ಈ ಶಿವರಾತ್ರಿ ಸಂದರ್ಭದಲ್ಲಿ ಕೆರೆ ಹಬ್ಬ ಆಚರಿಸಲು ನಿರ್ಧರಿಸಲಾಗಿದೆ. ಈ ಹಬ್ಬದ ಆಚರಣೆ ಅಂಗವಾಗಿ, ದೇಗುಲಕ್ಕೆ ಆಗಮಿಸುವ ಭಕ್ತರು ಈ ಕೆರೆ ಅಂಗಳಕ್ಕೆ ಕಾಲ್ನಡಿಗೆಯಲ್ಲಿ ಭೇಟಿ ನೀಡಿ, ಕೆರೆಗೊಂದು ಪ್ರದಕ್ಷಿಣೆ ಹಾಕಲು ಪ್ರೇರೇಪಿಸಲಾಗವುದು. ಸ್ಥಳೀಯರು ಭಕ್ತರಿಗೆ ಈ ನಿಟ್ಟಿನಲ್ಲಿ ಮಾರ್ಗದರ್ಶನ ನೀಡಲಿದ್ದಾರೆ.
Also read: 7 ತಿಂಗಳ ಮಗುವಿನ ಮೇಲೆ ದೌರ್ಜನ್ಯವೆಸಗಿದ ಕಾಮುಕನಿಗೆ ಗಲ್ಲು ಶಿಕ್ಷೆ | ಕೋರ್ಟ್ ತೀರ್ಪು
ಸ್ವಚ್ಛ ಕೆರೆ ಒಂದು ಊರಿನ ಆರೋಗ್ಯಕರ ಪರಿಸರ ವ್ಯವಸ್ಥೆಯ ಮೂಲ. ಸಮುದಾಯದಲ್ಲಿ ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಿದರೆ ಮಾತ್ರ ನಮ್ಮ ಕೆರೆಗಳನ್ನು ರಕ್ಷಿಸಲು ಸಾಧ್ಯ. ಈ ನಿಟ್ಟಿನಲ್ಲಿ ಈ ವಿಶಿಷ್ಟ ಕಾಲ್ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎನ್ನುತ್ತಾರೆ ದೇಗುಲದ ಧರ್ಮದರ್ಶಿಗಳು. ಶ್ರೀ ಮಹಾಶಿವರಾತ್ರಿಯ ಪ್ರಯುಕ್ತ ಶ್ರೀ ದೇಗುಲದ ಅಶೋಕವನದ ಪುರಾತನ ಶಿವಲಿಂಗಕ್ಕೆ ಭಕ್ತರು ಸ್ವತಃ ಅಭಿಷೇಕ ಮಾಡಬಹುದಾಗಿದೆ. ಹಬ್ಬದ ಪ್ರಯುಕ್ತ ರುದ್ರಾಭಿಷೇಕ, ಅಲಂಕಾರ, ಅನ್ನಸಂತರ್ಪಣೆ ದಿನವಿಡೀ ನಡೆಯುವುದು.
ಬೆಳಿಗ್ಗೆ 10 ಗಂಟೆಯಿಂದ ಆರೋಗ್ಯ ಭಾರತಿ, ಹಾಗು ಸೇವಾ ಭಾರತಿ ಆಶ್ರಯದಲ್ಲಿ ತಜ್ಞ ಆರ್ಯುವೇದ ವೈದ್ಯರಿಂದ ಉಚಿತ ಆರೋಗ್ಯ ಶಿಬಿರ ನಡೆಯಲಿದೆ. ಅಗತ್ಯ ಉಳ್ಳವರಿಗೆ ಉಚಿತವಾಗಿ ಔಷಧ ವಿತರಿಸಲಾಗುವುದು. ಅಲ್ಲದೇ ಭಕ್ತಾದಿಗಳಿಂದ ಹಾಡು, ಭಜನಾ ಕಾರ್ಯಕ್ರಮವೂ ದೇಗುಲದ ಆವರಣದಲ್ಲಿ ನಡೆಯಲಿದೆ.
ಶಿವರಾತ್ರಿ ಜಾಗರಣೆ ಪ್ರಯುಕ್ತ ಸಂಜೆ ೭ ಗಂಟೆಯಿಂದ ಗ್ರಾಮದ ಪ್ರತಿಭೆ ಗಳಿಂದ ಶ್ರೀ ಕೃಷ್ಣಗಾರುಡಿ ಎಂಬ ಪೌರಾಣಿಕ ನಾಟಕವು ಪ್ರದರ್ಶನಗೊಳ್ಳಲಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕ ಎಂ. ಗಣೇಶ 9342336927 ಅನಂತವರ್ಧನ 9449264920
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post