ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗೋಪಿಶೆಟ್ಟಿಕೊಪ್ಪ ಹಾಗೂ ಗೋವಿಂದಾಪುರದಲ್ಲಿ ಉಳಿದ ಮನೆಗಳನ್ನು ಯಾವಾಗ ನಿರ್ಮಿಸಿಕೊಡುತ್ತೀರಾ? ಅಲ್ಲಿ ಮೂಲಭೂತ ಸೌಲಭ್ಯಗಳನ್ನು ಯಾವಾಗ ಕಲ್ಪಿಸುತ್ತೀರಾ ಎಂದು ರಾಜ್ಯ ಸರ್ಕಾರಕ್ಕೆ ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ಪ್ರಶ್ನೆ ಮಾಡಿದ್ದಾರೆ.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಸತಿ ಸಚಿವ ಜಮೀರ್ ಅವರು ಶಿವಮೊಗ್ಗಕ್ಕೆ ಬಂದು 652 ಮನೆಗಳನ್ನು ಕೊಟ್ಟು ನಮ್ಮ ಸರ್ಕಾರ ಕೊಟ್ಟಿದೆ ಎಂಬ ಹೆಸರಿನೊಂದಿಗೆ ಬರಿಗೈಲಿ ವಾಪಸ್ ಹೋಗಿದ್ದಾರೆ. ಇಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು ಯಾವಾಗ? ವಿದ್ಯುತ್ ಸಂಪರ್ಕಕ್ಕೆ 12 ಕೋಟಿ ರೂ. ಬೇಕು. ಅದನ್ನು ಬಿಡುಗಡೆ ಮಾಡಲು ಸಚಿವ ಸಂಪುಟದ ಒಪ್ಪಿಗೆ ಬೇಕೆ? 3 ಸಾವಿರ ಮನೆಗಳಲ್ಲಿ ನನ್ನ ಕಾಲದ ವಿತರಣೆಯೂ ಸೇರಿದಂತೆ 1272 ಮನೆಗಳ ವಿತರಣೆಯಾಗಿದೆ. ಇನ್ನೂ 1728 ಮನೆಗಳ ನಿರ್ಮಾಣ ಬಾಕಿ ಇದೆ. ಇವುಗಳನ್ನು ಕಟ್ಟುವುದು ಮತ್ತು ವಿತರಿಸುವುದು ಯಾವಾಗ ಎಂದು ಪ್ರಶ್ನಿಸಿದರು.
Also read: ಬಿಜೆಪಿ ಸೇರ್ತಾರ ಡಿಕೆ ಶಿವಕುಮಾರ್? ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದೇನು?

ಡಿ.ಕೆ. ಶಿವಕುಮಾರ್ ನಿಜವಾದ ಹಿಂದೂ
ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಿಜವಾದ ಹಿಂದೂ. ಡಿ.ಕೆ. ಶಿವಕುಮಾರ್ ಯಾರಿಗೂ ಅಂಜದೇ ನಾನು ಹಿಂದೂವಾಗಿಯೇ ಹುಟ್ಟಿರುವೆ. ಹಿಂದೂ ಆಗಿಯೇ ಸಾಯುವೆ. ಎಂದು ಹೇಳುವ ಮೂಲಕ ನಿಜವಾದ ಹಿಂದೂ ಆಗಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಎಲ್ಲಾ ಕಾಂಗ್ರೆಸಿಗರು ನಿಜವಾದ ಹಿಂದೂಗಳೇ ಆಗಿದ್ದರು. ಗಾಂಧೀಜಿಯವರು ಕೂಡ ತಮ್ಮ ಮರಣದ ಸಂದರ್ಭದಲ್ಲೂ ಹೇ ರಾಮ್ ಎಂದು ಉದ್ಘಾರ ಮಾಡಿಯೇ ನಿಧನರಾಗಿದ್ದರು. ಆ ಲಿಸ್ಟ್ ನಲ್ಲಿ ನಮ್ಮ ಡಿಕೆಶಿಯವರೂ ಇರುತ್ತಾರೆ. ಹಾಗಂತ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಅನ್ನು ಬಿಡುವುದಿಲ್ಲ. ಆರ್.ಎಸ್.ಎಸ್. ಅನ್ನು ಅವರು ಹೊಗಳಿಯೂ ಇಲ್ಲ. ಆದರೆ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದಾರೆ. ಖರ್ಗೆಯವರಂತೆ ವಿರೋಧಭಾಸದ ಹೇಳಿಕೆ ನೀಡಿಲ್ಲ. ಇವರದು ನಿಜವಾದ ಹಿಂದುತ್ವ. ಇದು ನನಗೆ ಇಷ್ಟವಾಗಿದೆ. ಬಹುಶಃ ಕಾಂಗ್ರೆಸ್ ನ ಬಹಳಷ್ಟು ಜನರು ಹಿಂದೂಗಳೇ ಆಗಿದ್ದಾರೆ. ಆದರೆ, ರಾಜಕಾರಣಕ್ಕಾಗಿ ಓಲೈಕೆ ಹೇಳಿಕೆಗಳನ್ನು ನೀಡುತ್ತಾರೆ.
– ಕೆ.ಎಸ್. ಈಶ್ವರಪ್ಪ, ರಾಷ್ಟ್ರಭಕ್ತರ ಬಳಗದ ಸಂಚಾಲಕ

ಸಚಿವ ಜಮೀರ್ ಅಹಮ್ಮದ್ ಗುಮಾಸ್ತರ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಆ ಮನೆಗಳನ್ನು ವಿತರಿಸಲು ಅವರು ಇಲ್ಲಿಗೆ ಬರಬೇಕಿತ್ತಾ? ಇಲ್ಲಿ ಅಧಿಕಾರಿಯೊಬ್ಬ ವಿತರಣೆ ಮಾಡುತ್ತಿದ್ದರು. ಯಾವ ಸೌಲಭ್ಯವೂ ಈಗಲೂ ಅಲ್ಲಿ ಇಲ್ಲ. ವಸತಿ ಸಚಿವರ ಕೈಲಿ ಏನೂ ಆಗುವುದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ಮಾತು ನಡೆಯುವುದೂ ಇಲ್ಲ. ಆದ್ದರಿಂದ ಮುಖ್ಯಮಂತ್ರಿಗಳೇ ಈ ಸಮಸ್ಯೆಗೆ ಉತ್ತರ ಕೊಡಬೇಕು. ಅವರೇ ಶಿವಮೊಗ್ಗಕ್ಕೆ ಬಂದು ಆಶ್ರಯ ಮನೆಗಳ ಸಮಸ್ಯೆ ಬಗೆಹರಿಸಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಇ. ವಿಶ್ವಾಸ್, ಮೋಹನ್ ಜಾಧವ್, ರಾಜು, ಶಿವಾಜಿ, ಶಿವು, ಮೋಹನ್, ಮುಂತಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post