ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಟ್ಟು ಬೋಲ್ಟ್ ರಿಪೇರಿ ಮಾಡಲು ಬಹಳ ಜನ ಇದ್ದಾರೆ. ರಾಜ್ಯದ ಜನತೆ ಇವರಿಗೆ 135 ಸೀಟು ಕೊಟ್ಟಿರುವುದು ರಿಪೇರಿ ಮಾಡುವುದಕ್ಕಲ್ಲ, ರಾಜ್ಯದ ಜನರ ಸಮಸ್ಯೆ ಆಲಿಸಲಿಕ್ಕೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ #H D Kumaraswamy ಅವರು ಡಿಸಿಎಂ ಡಿ.ಕೆ. ಶಿವಕುಮಾರ್ #D K Shivakumar ಅವರಿಗೆ ಟಾಂಗ್ ಕೊಟ್ಟರು.
ಈ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು; ಡಿಕೆ ಶಿವಕುಮಾರ್ ಅವರು ಬಹುಶಃ ಭೂಮಿ ಮೇಲಿಲ್ಲ ಅನಿಸುತ್ತದೆ. ಅಧಿಕಾರದ ಹಾಗೆ ಮಾತನಾಡಿಸುತ್ತಿದೆ. ಅವರ ಬಗ್ಗೆ ಮಾತನಾಡುವುದಕ್ಕಿಂತ ಮೌನವಾಗಿರುವುದೇ ಒಳ್ಳೆಯದು ಎಂದು ಸಚಿವರು ವ್ಯಂಗ್ಯವಾಡಿದರು.

ನಾನೇ ರಾಜಕೀಯಕ್ಕೆ ಬರುತ್ತೇನೆ ಅಂದುಕೊಂಡಿರಲಿಲ್ಲ:
ರಾಜಕಾರಣಿಗಳ ಮಕ್ಕಳು ಚಲನಚಿತ್ರ ಕ್ಷೇತ್ರದಲ್ಲಿ ಪ್ಲ್ಯಾಪ್ ಆಗಿ ಈಗ ರಾಜಕಾರಣಕ್ಕೆ ಬಂದಿದ್ದಾರೆ ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಮಾತನಾಡಿದ ಸಚಿವರು ; ಜೀವನದಲ್ಲಿ ಅನೇಕ ಬಾರಿ ಸೋಲು, ಗೆಲುವು ಇರುತ್ತದೆ. ಕೆಲವು ಬಾರಿ ಬದಲಾವಣೆ ಆಗುತ್ತದೆ. ನಾನೇ ಒಂದು ಕಾಲದಲ್ಲಿ ಸಿನಿಮಾ ಕ್ಷೇತ್ರದಲ್ಲಿ ಇದ್ದೆ. ಸಿನಿಮಾ ಹಂಚಿಕೆದಾರನಾಗಿದ್ದೆ. ಯಾವುದೇ ಸಂದರ್ಭದಲ್ಲಿಯೂ ರಾಜಕೀಯಕ್ಕೆ ಬರುತ್ತೇನೆ ಎಂದುಕೊಂಡಿರಲಿಲ್ಲ. ನಾನೇ ಅಚಾನಕ್ಕಾಗಿ ರಾಜಕೀಯಕ್ಕೆ ಬಂದೆ. ಏಳು ಬೀಳು ಎನ್ನುವುದು ಎಲ್ಲರಿಗೂ ಇರುತ್ತದೆ. ಅವರ ಹೇಳಿಕೆಗೆ ಅಷ್ಟೇನೂ ಪ್ರಾಮುಖ್ಯತೆ ಕೊಡಬೇಕಿಲ್ಲ ಎಂದು ತಿಳಿಸಿದರು.

ಕ್ಷೇತ್ರ ಮರು ವಿಂಗಡಣೆ ಬಗ್ಗೆ ಈಗಲೇ ಚರ್ಚೆ ಅನಗತ್ಯ:
ಲೋಕಸಭೆ ಕ್ಷೇತ್ರಗಳ ಮರು ವಿಂಗಡಣೆ ಬಗ್ಗೆ ಈಗಲೇ ಚರ್ಚೆ ಮಾಡುವ ಅಗತ್ಯ ಇಲ್ಲ. ಇನ್ನು ಸಮಯಾವಕಾಶ ಇದೆ. ಒಕ್ಕೂಟ ವ್ಯವಸ್ಥೆಯಲ್ಲಿ ಯಾವುದೇ ರಾಜ್ಯಕ್ಕೆ ಅನ್ಯಾಯ ಆಗಬಾರದು. ಸ್ವಾತಂತ್ರ್ಯ ಬಂದ ಬಳಿಕ ಕಾಂಗ್ರೆಸ್ ನವರೇ ಆಡಳಿತ ಮಾಡಿಕೊಂಡು ಬಂದಿದ್ದಾರೆ. ಎಲ್ಲಾ ಸೀಟುಗಳೂ ಕಾಂಗ್ರೆಸ್ ಪಕ್ಷಕ್ಕೇ ಇದ್ದವು. ಈಗ ಅವರು ನಿರಂತರವಾಗಿ ಸೋಲುತ್ತಿದ್ದಾರೆ. ಹೀಗಾಗಿ ತಪ್ಪು ಹುಡುಕುತ್ತಿದ್ದಾರೆ. ಯಾವ ಆಧಾರದ ಮೇಲೆ ಕ್ಷೇತ್ರ ವಿಂಗಡಣೆ ಆಗಲಿದೆ ಎಂದು ನೋಡೋಣ ಎಂದು ಅವರು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post