ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಂಚಾರ ನಿಯಮ ಉಲ್ಲಂಘನೆ ದಂಡ ರಶೀದಿ (ಟ್ರಾಫಿಕ್ ಚಲನ್) #Traffic Challan ಹೆಸರಿನಲ್ಲಿ ನಗರದ ವ್ಯಕ್ತಿಯೊಬ್ಬರಿಗೆ ಆನ್‌ಲೈನ್‌ನಲ್ಲಿ ₹7.42 ಲಕ್ಷ ವಂಚಿಸಲಾಗಿದ್ದು, ಈ ಸಂಬಂಧ ಶಿವಮೊಗ್ಗ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೈಬರ್ ವಂಚಕರು #Cyber Fraudsters ಹೊಸ ಹೊಸ ರೂಪದಲ್ಲಿ ಜನರನ್ನು ಮೋಸದ ಬಲೆಗೆ ಬೀಳಿಸುತ್ತಲೇ ಇದ್ದಾರೆ. ವಾಟ್ಸಪ್‌ಗೆ ಪಿಡಿಎಫ್ ಲಿಂಕ್ ಕಳುಹಿಸಿ ತೆರೆಯುವಂತೆ ಪ್ರಚೋದಿಸುತ್ತಾರೆ. ಸಾರ್ವಜನಿಕರು ಆ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಸಾಕು ಅವರ ಖಾತೆಯಿಂದ ಹಣ ವರ್ಗಾವಣೆಯಾಗುತ್ತದೆ. ಈ ಜಾಲಕ್ಕೆ ನಗರದ ನಿವೃತ್ತ ಉದ್ಯೋಗಿಯೊಬ್ಬರು ಸಿಲುಕಿಕೊಂಡು ಹಣ ಕಳೆದುಕೊಂಡಿದ್ದಾರೆ.
ಏ.2 ರಂದು ವ್ಯಕ್ತಿಯೊಬ್ಬರ ವಾಟ್ಯಪ್‌ಗೆ ₹1,000 ಮೊತ್ತದ ಟ್ರಾಫಿಕ್ ಚಲನ್ ಇರುವ ಪಿಡಿಎಫ್ ಫೈಲ್ ಮಾದರಿಯ ಎಪಿಕೆ ಫೈಲ್ ಬಂದಿದೆ. ಇದರಲ್ಲಿ ಕರ್ನಾಟಕ ಸರ್ಕಾರದ ಚಿಹ್ನೆಯೂ ಕಂಡಿದ್ದರಿಂದ, ಲಿಂಕ್ ನಂಬಿದ ವ್ಯಕ್ತಿ ಅದರ ಮೇಲೆ ಕ್ಲಿಕ್ ಮಾಡಿದ್ದಾರೆ. ಬಳಿಕ ಬ್ಯಾಂಕ್ ಖಾತೆಯಿಂದ ಹಂತ- ಹಂತವಾಗಿ ಹಣ ಕಡಿತಗೊಂಡಿದ್ದರೂ ಅವರ ಗಮನಕ್ಕೆ ಬಂದಿಲ್ಲ.
ಏಪ್ರಿಲ್ 8ರಂದು ಹಣ ಕಳೆದುಕೊಂಡ ವ್ಯಕ್ತಿಗೆ ಕರೆ ಮಾಡಿದ ಅಪರಿಚಿತನೊಬ್ಬ, ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಂಡಿದೆ ಎಂದು ಮಾಹಿತಿ ನೀಡಿದ್ದು. ನಿವೃತ್ತ ಉದ್ಯೋಗಿಯು ಬ್ಯಾಂಕ್‌ಗೆ ತೆರಳಿ ಪರಿಶೀಲಿಸಿದಾಗ ಎಸ್‌ಬಿಐನ ಒಂದು ಖಾತೆಯಿಂದ 7 ಬಾರಿ ಹಣ ಕಡಿತವಾಗಿರುವುದು ಗೊತ್ತಾಗಿದೆ. ಎಸ್‌ಬಿಐನ ಮತ್ತೊಂದು ಖಾತೆಯಿಂದ 9 ಬಾರಿ ಹಣ ಕಡಿತಗೊಂಡಿದೆ. ಕರ್ಣಾಟಕ ಬ್ಯಾಂಕ್‌ನ ಖಾತೆಯಿಂದ ಒಟ್ಟು 6 ಬಾರಿ ಹಣ ಕಡಿತಗೊಂಡಿರುವುದು ಗಮನಕ್ಕೆ ಬಂದಿದೆ.
ಮೂರು ಬ್ಯಾಂಕ್ ಖಾತೆಗಳಿಂದ ಒಟ್ಟು ₹7.42 ಲಕ್ಷ ಹಣ ಕಡಿತವಾಗಿರುವುದು ಗೊತ್ತಾಗಿದೆ. ಈ ಬಗ್ಗೆ ಅವರು ದೂರು ದಾಖಲಿಸಿದ್ದು, ಅಪರಿಚಿತರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಆನ್‌ಲೈನ್ ಮೂಲಕ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ಇತ್ತೀಚೆಗೆ ಟೆಲಿಗ್ರಾಮ್ ಮುಖಾಂತರ ಪರಿಚಯಿಸಿಕೊಂಡ ಸೈಬರ್ ಆರೋಪಿಗಳು ಆನ್‌ಲೈನ್ ಮೂಲಕ ಟಾಸ್ಕ್‌ಗಳನ್ನು ಮುಗಿಸಿದರೆ ಹೆಚ್ಚಿನ ಲಾಭ ಪಡೆಯಬಹುದು ಅಂದು ನಂಬಿಸಿ ಹಣ ದೋಚಿದ್ದಾರೆ. ಇಂತಹ ಜಾಲದಿಂದ ಎಚ್ಚರದಿಂದ ಇರಬೇಕು ಎಂದು ಪೊಲೀಸರು ಸಲಹೆ ನೀಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post