ಕಲ್ಪ ಮೀಡಿಯಾ ಹೌಸ್ | ಹಾವೇರಿ |
ರಸ್ತೆ ಬದಿ ನಿಲ್ಲಿಸಿದ್ದ ಲಾರಿಗೆ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ 6 ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಗ್ರಾಮದ ಬಳಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಗುರುವಾರ ಬೆಳಗ್ಗೆ ಈ ದುರ್ಘಟನೆ ಸಂಭವಿಸಿದ್ದು, ಮೃತರಲ್ಲಿ ನಾಲ್ವರು ರಾಣೆಬೆನ್ನೂರಿನ ಸಿದ್ದೇಶ್ವರ ನಗರದ ನಿವಾಸಿಗಳಾಗಿದ್ದು, ಇಬ್ಬರು ಹರಿಹರ ಹಾಗೂ ಮತ್ತಿಬ್ಬರು ಗೋವಾದವರಾಗಿದ್ದಾರೆ.
ಮೃತರನ್ನು ಫರಾನ್ (27 ವರ್ಷ), ಉಮ್ಮಿಶಿಪಾ (16), ಅಲಿಷಾ (20), ಫೂಲಖಾನ್ (17) ಹಾಗೂ ಫಿರೋಜ್ (42) ಎಂದು ಗುರುತಿಸಲಾಗಿದೆ. ಇನ್ನೊಬ್ಬರಗುರುತು ಪತ್ತೆಯಾಗಿಲ್ಲ. ತಷ್ಕಿನ್ ಹಾಗೂ ಮೆಹಕ್ ಎಂಬಿಬ್ಬರು ಗಾಯಗೊಂಡಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ. ಅವರನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ರಜೆ ಹಿನ್ನೆಲೆಯಲ್ಲಿ ಕುಟುಂಬಸ್ಥರೆಲ್ಲ ಮಕ್ಕಳ ಜೊತೆ ಅಗಡಿ ತೋಟದ ಪಾರ್ಕ್ಗೆ ತೆರಳುತ್ತಿದ್ದರು. ಬಳಿಕ ಅಲ್ಲಿಂದ ಗೋವಾಕ್ಕೆ ಹೋಗುವ ಪ್ಲಾನ್ ಮಾಡಿದ್ದರು. ನಿನ್ನೆ ರಾಣೆಬೆನ್ನೂರಿನ ಫಿರೋಜ್ ಮನೆಯಲ್ಲಿ ಕಾರ್ಯಕ್ರಮ ಮುಗಿಸಿ ಸುತ್ತಾಡಲು ಹೊರಟಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಘಟನಾ ಸ್ಥಳಕ್ಕೆ ಬ್ಯಾಡಗಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ಕೈಗೊಂಡಿದ್ದಾರೆ. ಹಾವೇರಿ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಶವಗಳ ರವಾನಿಸಲಾಗಿದೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post