ಕಲ್ಪ ಮೀಡಿಯಾ ಹೌಸ್ | ಸಾಗರ |
ತುಮರಿ ಸೇತುವೆ ಸಂಪರ್ಕಿಸುವ ಅಂಬಾರಗೋಡ್ಲು, ಮತ್ತೊಂದು ಸಂಪರ್ಕ ರಸ್ತೆ ಕಳಸವಳ್ಳಿ ರಸ್ತೆ ನಿರ್ಮಾಣಕ್ಕೆ 600 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ #MP Raghavendra ತಿಳಿಸಿದರು.
ತಾಲ್ಲೂಕಿನ ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ ಕಾಮಗಾರಿಯನ್ನು ಗುರುವಾರ ವೀಕ್ಷಣೆ ಮಾಡಿ, ಸೇತುವೆ ಮೇಲೆ ವಾಹನದ ಮೇಲೆ ಓಡಾಟ ನಡೆಸಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ಎರಡೂ ರಸ್ತೆಯನ್ನೂ ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಣೆ ಮಾಡಿದ್ದು, ಯಾವ ರೀತಿ ರಸ್ತೆ ನಿರ್ಮಾಣ ಮಾಡಬೇಕು ಎನ್ನುವ ಕುರಿತು ಯೋಜನೆ ರೂಪಿಸುತ್ತಿದ್ದು, ಹದಿನೈದು ದಿನಗಳಲ್ಲಿ ಅಂತಿಮ ಸ್ವರೂಪಕ್ಕೆ ಬರುತ್ತದೆ ಎಂದರು.

ಹಿನ್ನೀರಿನ ಜನರ ಅನೇಕ ವರ್ಷಗಳ ಕನಸು ನನಸಾಗುವ ದಿನ ಹತ್ತಿರ ಬಂದಿದೆ. ಜೂನ್ ಕೊನೆವಾರದಲ್ಲಿ ಸೇತುವೆ ಲೋಕಾರ್ಪಣೆಯಾಗಲಿದೆ. ಅನೇಕ ಪ್ರಮುಖರು ಸೇತುವೆ ನಿರ್ಮಾಣಕ್ಕಾಗಿ ಹೋರಾಟ ಸಹ ಮಾಡಿದ್ದಾರೆ. ಬಿ.ಎಸ್.ಯಡಿಯೂರಪ್ಪ ಸಂಸದರಾಗಿದ್ದಾಗ ಸೇತುವೆ ನಿರ್ಮಾಣ ಪ್ರಸ್ತಾಪವನ್ನು ಕೇಂದ್ರಕ್ಕೆ ಸಲ್ಲಿಸಿದ್ದರು. ಕೇಂದ್ರದಿಂದ ಹಣ ತರಿಸುವಲ್ಲಿ ಪ್ರಮುಖಪಾತ್ರ ವಹಿಸಿದ್ದ ಯಡಿಯೂರಪ್ಪ ಅವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇವೆ. ನಾಲ್ಕೂವರೆ ವರ್ಷದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಪ್ರಧಾನ ಮಂತ್ರಿಗಳನ್ನು ಲೋಕಾರ್ಪಣೆಗೆ ಕರೆಸಲಾಗುತ್ತದೆ. ಸುಮಾರು 550 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣಗೊಂಡಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಟಿ.ಡಿ.ಮೇಘರಾಜ್, ಮೈತ್ರಿ ಪಾಟೀಲ್, ಮಲ್ಲಿಕಾರ್ಜುನ ಹಕ್ರೆ, ಪ್ರಸನ್ನ ಕೆರೆಕೈ, ಹೊನಗೋಡು ರತ್ನಾಕರ್, ಭರ್ಮಪ್ಪ ಅಂದಾಸುರ, ರೇವಪ್ಪ ಹೊಸಕೊಪ್ಪ, ಸುವರ್ಣ ಟೀಕಪ್ಪ, ಸಂತೋಷ್ ಶೇಟ್ ಇನ್ನಿತರರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post