ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಲೆನಾಡಿನ ಹೆಮ್ಮೆಯ ಪ್ರತಿರೂಪವಾಗಿ ಮೂಡಿಬಂದಿರುವ ಕುವೆಂಪು ವಿಶ್ವವಿದ್ಯಾನಿಲಯದ #Kuvempu University ಸ್ಥಾಪನೆ, ಬೆಳವಣಿಗೆ ಹಾಗೂ ಯಶಸ್ಸಿನ ಹಿಂದೆ ನೂರಾರು ಹಿರಿಯರ ಪರಿಶ್ರಮ ಮತ್ತು ತ್ಯಾಗವಿದ್ದು, ಈ ವಿಶ್ವವಿದ್ಯಾನಿಲಯದ ಸ್ಥಾಪನೆಯ ಮೂಲಕ ಮಲೆನಾಡಿನ ಮತ್ತು ಸುತ್ತಮುತ್ತಲಿನ ಜಿಲ್ಲೆಯ ವಿದ್ಯಾರ್ಥಿಗಳಿಗೆ, ವಿಶೇಷವಾಗಿ ಹಿಂದುಳಿದ ಹಾಗೂ ರೈತಾಪಿ ಮೂಲದ ಕುಟುಂಬಗಳ ಮಕ್ಕಳಿಗೆ ಉನ್ನತ ಶಿಕ್ಷಣದ ಅವಕಾಶ ದೊರೆತಿರುವುದು ಹೆಮ್ಮೆಯಾಗಿದ್ದು, ಜುಲೈ 2 ರಂದು ಕುವೆಂಪು ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನವಾಗಿದ್ದು, ಇದರ ಅಭಿವೃದ್ಧಿಗೆ ಕಾರಣರಾದ ಎಲ್ಲರಿಗೂ ನಮಿಸುತ್ತಾ ವಿವಿ ಕುಲಪತಿಗಳಿಗೆ ಶಾಸಕ ಡಿ.ಎಸ್. ಅರುಣ್ #D S Arun ಕೆಲವೊಂದು ಪ್ರಶ್ನೆಗಳನ್ನು ಪತ್ರ ಮುಖೇನ ಕೇಳಿದ್ದಾರೆ.
ಎಲ್ಲಾ ವಿಶ್ವವಿದ್ಯಾನಿಲಯಗಳಿಗೆ ಸಾಮಾನ್ಯ ಶೈಕ್ಷಣಿಕ ವೇಳಾಪಟ್ಟಿಯನ್ನು ಅನುಸರಿಸಬೇಕೆಂದು ನಿರ್ಧರಿಸಿ, ಕಳೆದ ಫೆಬ್ರವರಿ 10 ರಂದು ಪ್ರಾರಂಭಗೊಂಡ ಸಮ ಸೆಮಿಸ್ಟರ್‍ಗಳನ್ನು ಕೇವಲ 90 ದಿನಗಳಲ್ಲೇ ಪೂರ್ಣಗೊಳಿಸಿ, ಮೇ 15ರೊಳಗೆ ಶೈಕ್ಷಣಿಕ ವರ್ಷವನ್ನು ಮುಕ್ತಾಯಗೊಳಿಸಲು ತ್ವರಿತ ಕ್ರಮವನ್ನು ತೆಗೆದುಕೊಂಡದ್ದು ಯಾಕೆ ? ಈ ಹಿನ್ನೆಲೆಯಲ್ಲಿ ದಿನಕ್ಕೆ ಮೂರು ಪರೀಕ್ಷೆಗಳಂತೆ ಪ್ರಕಟಿಸಲಾಗಿದ್ದು, ವಿದ್ಯಾರ್ಥಿಗಳು, ಪರೀಕ್ಷಾ ಸಿಬ್ಬಂದಿ ಹಾಗೂ ಮೇಲ್ವಿಚಾರಕರಿಗೆ ಅತಿಯಾದ ಒತ್ತಡವನ್ನು ಹೇರುವ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ವಿಶ್ವವಿದ್ಯಾನಿಲಯದ ಪರೀಕ್ಷಾ ವೇಳಾಪಟ್ಟಿಯು ಇತರ ವಿಶ್ವವಿದ್ಯಾನಿಲಯಗಳ ವೇಳಾಪಟ್ಟಿಯೊಂದಿಗೆ ಹೋಲಿಸಿದರೆ ಈ ಅನಿವಾರ್ಯ ಕ್ರಮದ ಅಗತ್ಯತೆ ಇತ್ತೆ ? ಈ ತ್ವರಿತ ಕ್ರಮದಿಂದ ವಿದ್ಯಾರ್ಥಿಗಳಿಗೆ ಪಾಠ ಪ್ರವಚನಗಳಿಂದ ವಂಚನೆ ಆಗಲಿಲ್ಲವೇ ಅಥವಾ ಪಾಠ ಪ್ರವಚನಗಳನ್ನು ಬೇಗ ಬೇಗ ಮುಗಿಸುವ ಒತ್ತಡಕ್ಕೆ ಅಧ್ಯಾಪಕರು ಒಳಗಾಗಲಿಲ್ಲವೇ?

ಅಂತಿಮ ವರ್ಷದ ವಿದ್ಯಾರ್ಥಿಗಳು ಮುಂದಿನ ವಿದ್ಯಾಭ್ಯಾಸ ಅಥವಾ ಉದ್ಯೋಗದ ಆಸೆಯೊಂದಿಗೆ ತಮ್ಮ ಫಲಿತಾಂಶಕ್ಕಾಗಿ ಇನ್ನೆಷ್ಟು ದಿನ ನಿರೀಕ್ಷಿಸುತ್ತಾ ಕೂರಬೇಕು? ಈ ವಿಳಂಬವು ಅವರ ಭವಿಷ್ಯಕ್ಕೆ ದೊಡ್ಡ ತೊಂದರೆಯನ್ನುಂಟುಮಾಡು ವುದಿಲ್ಲವೇ? ವಿದ್ಯಾರ್ಥಿಗಳಿಗೆ ಒಂದೇ ಒಂದು ಸೆಮಿಸ್ಟರ್ ನ ಅಂಕಪಟ್ಟಿಗಳು ಸಿಕ್ಕಿರುವುದಿಲ್ಲ. ಫಲಿತಾಂಶ ಪ್ರಕಟವಾದರೆ ವಿದ್ಯಾರ್ಥಿಗಳಿಗೆ ಕೆಲವು ವಿಷಯಗಳಲ್ಲಿ ವಿನಾಕಾರಣ ಅನುತ್ತೀರ್ಣ ಅಥವಾ ಕೆಲವು ವಿಷಯಗಳ ಫಲಿತಾಂಶವೇ ಪ್ರಕಟವಾಗಿರುವುದಿಲ್ಲ. ಇದಕ್ಕಾಗಿ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯವನ್ನು ಅಲೆಯುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ; ಇದಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳಿಗೆ ಕೇಳಿದರೆ ಸ್ಟೇಟ್ಮೆಂಟ್ ಆಫ್ ಮಾಕ್ರ್ಸ್ ಕೊಡುವುದನ್ನು ನಿಲ್ಲಿಸಿಯೇ ಬಿಡುತ್ತೇವೆಂದು ಪತ್ರಿಕಾ ಹೇಳಿಕೆ ನೀಡುವಷ್ಟು ಅಧಿಕಾರಿಗಳು ದರ್ಪದಿಂದ ನಡೆದುಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಯಾವುದೇ ಕ್ರಮವನ್ನು ನಾವು ಸ್ವಾಗತಿಸುತ್ತೇವೆ ಆದರೆ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನಾನುಕೂಲವನ್ನು ನಾವು ಪ್ರತಿಭಟಿಸದೆ ಬಿಡುವುದಿಲ್ಲ.

ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆಯನ್ನು ಜಾರಿಗೊಳಿಸಿ, ಮೌಲ್ಯಮಾಪಕರಿಗೆ ಎಲ್ಲೆಂದರಲ್ಲಿ ಮತ್ತು ಯಾವಾಗ ಬೇಕಾದರೂ ಮೌಲ್ಯಮಾಪನ ಮಾಡಲು ಅವಕಾಶ ನೀಡಿರುವುದರಿಂದ ಮೌಲ್ಯಮಾಪನದ ಗುಣಮಟ್ಟ, ಗೌಪ್ಯತೆ ಹಾಗೂ ಶ್ರೇಷ್ಠತೆ ಮೇಲೆ ಯಾವುದೇ ಹಾನಿಯಾಗುವುದಿಲ್ಲವೇ? ಈ ರೀತಿಯ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ಇತರ ವಿಶ್ವವಿದ್ಯಾನಿಲಯಗಳ ಉದಾಹರಣೆಗಳನ್ನು ನೀಡಲು ಸಾಧ್ಯವೇ? ಉದಾಹರಣೆಗೆ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದಲ್ಲಿ ಇಂಜಿನಿಯರಿಂಗ್ ಪಠ್ಯ ವಿಷಯಗಳ ಮೌಲ್ಯಮಾಪನವನ್ನು ಶಿಕ್ಷಣ ಕ್ಷೇತ್ರದ ಪರಿಣಿತರನ್ನು ಮೌಲ್ಯಮಾಪನ ಕೇಂದ್ರಗಳಿಗೆ ಕರೆಯುವ ಮೂಲಕ ನೇರವಾಗಿ ನಡೆಸಲಾಗುತ್ತಿದೆ. ಈ ವೇಳೆ, ಮೌಲ್ಯಮಾಪನ ಕೇಂದ್ರಗಳನ್ನೇ ನಿರ್ಲಕ್ಷ್ಯ ಮಾಡಿ ಎಲ್ಲೆಂದರಲ್ಲಿ ಮೌಲ್ಯಮಾಪನ ಮಾಡುವ ನಿಮ್ಮ ಹೊಸ ಕ್ರಮವು ನ್ಯಾಯಸಮ್ಮತವಾಗಿದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post