ಕಲ್ಪ ಮೀಡಿಯಾ ಹೌಸ್ | ಗೋಕರ್ಣ |
ಕಾಲಕ್ಕೆ ವಿರುದ್ಧವಾಗಿ ನಾವು ನಡೆದರೆ, ಕಾಲ ನಮ್ಮನ್ನು ಮೃತ್ಯುವಾಗಿ ಕಾಡುತ್ತದೆ. ಕಾಲಧರ್ಮವನ್ನು ಅನುಸರಿಸುವುದೇ ಜೀವನದ ಯಶಸ್ಸಿನ ಗುಟ್ಟು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ #Raghaveshwara Shri ನುಡಿದರು.
ಅಶೋಕೆಯಲ್ಲಿ ಸ್ವಭಾಷಾ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು ಬುಧವಾರ ‘ದಿನಚರಿ’ ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದರು. ಕಾಲವನ್ನು ಅನುಸರಿಸಿ ಜೀವನದಲ್ಲಿ ಮುನ್ನಡೆಯಬೇಕು. ಕಾಲ ಒಂದು ಸೀಮೆಯನ್ನು ನಿಗದಿ ಮಾಡುತ್ತದೆ ಎನ್ನುವುದಕ್ಕೆ ನಮ್ಮ ಆಯುಷ್ಯವೇ ಸಾಕ್ಷಿ. ಅಂತೆಯೇ ಸ್ಥಳ- ವಸ್ತುಗಳಿಗೂ ಒಂದು ಮಿತಿ ಇದೆ. ಆ ಚೌಕಟ್ಟಿನೊಳಗೆ ಬದುಕು ನಡೆಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.

ದಿನಚರ್ಯೆಯನ್ನು ಸರಿಯಾಗಿ ಪಾಲಿಸದಿರುವುದೇ ಬದುಕಿನ ವ್ಯತ್ಯಯಗಳಗೆ ಕಾರಣ. ಹನಿಗೂಡಿ ಹಳ್ಳ; ದಿನಗೂಡಿ ಜೀವನ. ಹೀಗೆ ಒಂದು ದಿನದ ಚರ್ಯೆಯನ್ನು ಬದಲಿಸಿಕೊಂಡರೆ ಇಡೀ ಬದುಕನ್ನೇ ಬದಲಾಯಿಸಿಕೊಳ್ಳಬಹುದು. ದಿನಚರಿಯನ್ನು ತಿದ್ದಿಕೊಂಡರೆ ಬದುಕನ್ನೇ ತಿದ್ದಿಕೊಳ್ಳಬಹುದು. ಸಾವಿರಾರು ಯೋಜನಗಳ ಪಯಣ ಕೂಡಾ ಆರಂಭವಾಗುವುದು ಒಂದು ಹೆಜ್ಜೆಯಿಂದ; ಅಂತೆಯೇ ಬದುಕಿನಲ್ಲೂ ಒಂದೊಂದು ದಿನ ಸರಿಪಡಿಕೊಳ್ಳಬೇಕು. ದಿನಚರ್ಯೆ ಬದಲಿಸಿಕೊಂಡರೆ ಇಡೀ ಬದುಕೇ ಬದಲಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಆತ್ಮ ಪರಮಾತ್ಮನಲ್ಲಿ ಲೀನವಾದಾಗ ಭಗವಂತನಂತೆಯೇ ಕಾಲ, ದೇಶಗಳ ಪರಿದಿಯನ್ನು ಮೀರಲು ಸಾಧ್ಯವಾಗುತ್ತದೆ. ರಾಮಕೃಷ್ಣ ಪರಮಹಂಸ, ಶುಕಮುನಿಯಂಥವರು ಮಾತ್ರ ಇಂಥ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.

ಸೇವೆಯಲ್ಲಿ ನಿವೃತ್ತಿ ಇಲ್ಲ; ಮಠದ ಪ್ರತಿಯೊಬ್ಬ ಶಿಷ್ಯ ಶ್ರೀಪೀಠಕ್ಕೆ ತನ್ನ ಕೈಲಾದ ಸೇವೆ ಸಲ್ಲಿಸಬೇಕು. ಯಾವ ಶಿಷ್ಯನೂ ಸೇವಾಶೂನ್ಯನಾಗಿ ಇರಬಾರದು ಎಂದು ಅಭಿಪ್ರಾಯಪಟ್ಟರು.
ಸಾಗರ ಮಂಡಲದ ಸಾಗರ ಪೂರ್ವ, ಪಶ್ಚಿಮ, ಕ್ಯಾಸನೂರು, ಇಕ್ಕೇರಿ ಮತ್ತು ಉಳವಿ ವಲಯಗಳ ಶಿಷ್ಯರು ಭಿಕ್ಷಾಸೇವೆ ನೆರವೇರಿಸಿದರು. ಶ್ರೀಮಾತೆ ವಿಜಯಲಕ್ಷ್ಮಿ, ಪ್ರಶಾಸನಾಧಿಕಾರಿ ಸಂತೋಷ ಹೆಗಡೆ, ವಿತ್ತಾಧ್ಯಕ್ಷ ಗಣೇಶ್ ಜೆ.ಎಲ್, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ಸಾಗರ ಮಂಡಲ ಅಧ್ಯಕ್ಷ ಮುರಳಿ ಗೀಜಗಾರ್, ವಿವಿವಿ ಆಡಳಿತಾಧಿಕಾರಿ ಡಾ.ಟಿ.ಜಿ.ಪ್ರಸನ್ನಕುಮಾರ್, ಶ್ರೀಕಾರ್ಯದರ್ಶಿ ಮಧು ಜಿ.ಕೆ, ಮುಖ್ಯ ಎಂಜಿನಿಯರ್ ವಿಷ್ಣು ಬನಾರಿ, ಹೊನ್ನಾವರ ಮಂಡಲ ಅಧ್ಯಕ್ಷ ಆರ್.ಜಿ.ಹೆಗಡೆ, ಸತ್ಯನಾರಾಯಣ ಶರ್ಮಾ, ಡಾ.ರವಿ ಪಾಂಡವಪುರ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post