ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಐಟಿ ಕ್ಷೇತ್ರದಲ್ಲಿ ಸಫಲತೆ ಪಡೆಯಲು ತಾಂತ್ರಿಕ ಕೌಶಲ್ಯಗಳ ಅರಿವಿನ ಅಗತ್ಯವಿದ್ದು ಇವುಗಳನ್ನು ನೀವು ರೂಢಿಸಿಕೊಳ್ಳಿ ಎಂದು ಸ್ವೀಡನ್‌ನ ಸ್ಟಾಕ್‌ಹೋಮ್ ನಗರದ ಕೇಂದ್ರ ಡೇಟಾ ಸಂರಕ್ಷಣಾ ಕಚೇರಿಯ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮತ್ತು ಗೌಪ್ಯತೆ ತಜ್ಞರಾಗಿ ಕಾರ್ಯ ನಿರ್ವಹಿಸುತ್ತಿರುವ ಮ್ಯಾನ್ಯುಯಲ್ ತಿಳಿಸಿದರು.
ನಗರದ ಪಿಇಎಸ್‌ಐಎಎಮ್‌ಎಸ್ ಕಾಲೇಜಿನ ವತಿಯಿಂದ ಆಯೋಜಿಸಲಾಗಿದ್ದ ಆನ್‌ಲೈನ್ ಓರಿಯೆಂಟೇಶನ್ ಕಾರ್ಯಕ್ರಮದ ಆರನೆಯ ದಿನದ ಸಂಪನ್ಮೂಲ ವ್ಯಕ್ತಿಗಳಾಗಿ ಐಟಿ ಕ್ಷೇತ್ರದಲ್ಲಿ ಅಗತ್ಯವಿರುವ ಕೌಶಲ್ಯ ಮತ್ತು ವೃತ್ತಿ ಮಾರ್ಗಗಳು ಎಂಬ ವಿಷಯದ ಕುರಿತು ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ನುಡಿದರು.
ಐಟಿ ಕ್ಷೇತ್ರವು ದಿನದಿಂದ ದಿನಕ್ಕೆ ತಾಂತ್ರಿಕ ಅಭಿವೃದ್ಧಿಯೊಂದಿಗೆ ವಿಸ್ತಾರಗೊಳ್ಳುತ್ತಿದೆ. ನಾವು ಈಗ ಡಿಜಿಟಲ್ ಯುಗದಲ್ಲಿ ಬದುಕುತ್ತಿದ್ದೇವೆ. ಬ್ಲಾಕ್‌ಚೈನ್, ಕ್ಲೌಡ್ ಕಂಪ್ಯೂಟಿಂಗ್, ಸೈಬರ್ ಸೆಕ್ಯುರಿಟಿ, ಯಂತ್ರಮಾನವ ಸಂಶೋಧನೆ, ಡೇಟಾ ವಿಜ್ಞಾನ, ಕೃತಕ ಬುದ್ಧಿಮತ್ತೆ ಇವೆಲ್ಲಾ ನಮ್ಮ ಬದುಕನ್ನು ರೂಪಿಸುತ್ತಿವೆ. ಆದ್ದರಿಂದ ನೀವು ಐಟಿ ಕ್ಷೇತ್ರದಲ್ಲಿ ಸಫಲತೆಯನ್ನು ಪಡೆಯಲು ತಾಂತ್ರಿಕ ಕೌಶಲ್ಯಗಳಾದ ಪ್ರೋಗ್ರಾಮಿಂಗ್ ಭಾಷೆಗಳು, ಡೇಟಾ ವಿಶ್ಲೇಷಣೆ, ಸೈಬರ್ ಸೆಕ್ಯುರಿಟಿ, ಕ್ಲೌಡ್ ತಂತ್ರಜ್ಞಾನ, ಡೇಟಾಬೇಸ್ ನಿರ್ವಹಣೆ ಮತ್ತು ಇತರೆ ಸಾಮಾನ್ಯ ಮತ್ತು ಅಗತ್ಯ ಕೌಶಲ್ಯಗಳಾದ ಸಂವಹನ ಕೌಶಲ್ಯ, ಸಮಯದ ನಿರ್ವಹಣೆ, ನಿರಂತರ ಕಲಿಕೆ, ತಂಡದೊಡನೆ ಕೆಲಸ ಮಾಡುವ ಸಾಮರ್ಥ್ಯ ಹಾಗೂ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವುದು, ಐಟಿ ಕ್ಷೇತ್ರ ಬೆಳೆದು ಬಂದ ಬಗೆ ಮತ್ತು ಈ ಕ್ಷೇತ್ರದಲ್ಲಿ ಆಗುತ್ತಿರುವ ಕ್ರಾಂತಿಕಾರಕ ಬದಲಾವಣೆಗಳ ಕುರಿತು ಮಾಹಿತಿ ನೀಡಿದರು.
ಎರಡನೆಯ ಗೋಷ್ಠಿಯಲ್ಲಿ ಧಾರವಾಡದ ಕೃಷಿಕ್ – ಅಗ್ರಿ ಬಿಸಿನೆಸ್ ಇನ್ಕ್ಯುಬೇಟರ್‌ನ ನಾವೀನ್ಯತೆ ಮತ್ತು ನಿರ್ವಹಣೆ ವಿಭಾಗದ ವ್ಯವಸ್ಥಾಪಕ ಕೆ. ಎಸ್. ಮಲ್ಲೇಶ್ ಕುಮಾರ್ ಅವರು ಸ್ಟಾರ್ಟ್‌ಅಪ್ ಮತ್ತು ಉದ್ಯಮಶೀಲತೆಯಲ್ಲಿನ ನಾವೀನ್ಯತೆಯ ಮೂಲಭೂತ ಅಂಶಗಳು ಎಂಬ ವಿಷಯದ ಕುರಿತು ಮಾತನಾಡುತ್ತಾ ಇಂದಿನ ಯುಗವು ನಾವೀನ್ಯತೆಯ ಯುಗವಾಗಿದೆ. ಪ್ರತಿ ಕ್ಷೇತ್ರದಲ್ಲಿಯೂ ಹೊಸತನಕ್ಕೆ ಬಹುಮಟ್ಟಿಗೆ ಒತ್ತು ನೀಡಲಾಗುತ್ತಿದೆ. ಬಿಸಿನೆಸ್ ಆರಂಭಿಸಲು ಈಗ ಕಾರ್ಖಾನೆ ಅಥವಾ ಭಾರಿ ಬಂಡವಾಳ ಅಗತ್ಯವಿಲ್ಲ. ಬೇಕಾದುದು ನವೋದ್ಯಮದ ಆಸೆ, ಐಡಿಯಾ ಮತ್ತು ಅದನ್ನು ಜಾರಿಗೆ ತರುವ ಧೈರ್ಯಗಳು ಪ್ರಮುಖವಾಗಿ ಬೇಕಾಗಿದೆ. ಅಲ್ಲದೆ ನೀವು ತಯಾರು ಮಾಡುವ ಉತ್ಪನ್ನಗಳು ಅತ್ಯಂತ ಶ್ರೇಷ್ಠ ಗುಣಮಟ್ಟದಿಂದ ಕೂಡಿದ್ದು ಜಾಗತಿಕವಾದ ಸ್ಪರ್ಧೆಗೆ ಅನುಗುಣವಾಗಿ ರೂಪಗೊಳ್ಳಬೇಕು. ಹಾಗೆಯೇ ಉದ್ಯಮದಲ್ಲಿ ಬರುವಂತಹ ಎಲ್ಲ ರೀತಿಯ ಸವಾಲುಗಳನ್ನು ಎದುರಿಸಲು ಮಾನಸಿಕವಾಗಿ ಸಿದ್ಧರಾಗಿರಬೇಕು. ನೀವು ಉದ್ಯೋಗಿಗಳಾಗುವುದಕ್ಕಿಂತ ಉದ್ಯಮಿಗಳಾಗಿ ಹಲವಾರು ಜನರಿಗೆ ಉದ್ಯೋಗಳನ್ನು ನೀಡಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಸುದರ್ಶನ್ ಮತ್ತು ನಿರ್ವಹಣಾಶಾಸ್ತ್ರ ವಿಭಾಗದ ಮುಖ್ಯಸ್ಥ ಮೋಹನ್, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ್, ಕಂಪ್ಯೂಟರ್‌ಸೈನ್ಸ್ ವಿಭಾಗದ ಪ್ರಭಾರ ಮುಖ್ಯಸ್ಥ ಸಚ್ಚಿದಾನಂದ ಹಾಗೂ ಪ್ರಥಮ ವರ್ಷದ ಬಿಸಿಎ, ಬಿಎಸ್ಸಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.
ಕಂಪ್ಯೂಟರ್ ಸೈನ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಆಸ್ಮಾ ನೂರಿನ್ ಹಾಗೂ ಕು. ರೂಪಿಕ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post