ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮುದ್ರಣ ಮಾಧ್ಯಮ ವಿಶ್ವಾರ್ಸಹತೆ ಉಳಿಸಿಕೊಂಡಿದೆ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್‍ಮಟ್ಟು ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ #KWJ ಜಿಲ್ಲಾ ಶಾಖೆ ವತಿಯಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಭಾಗಿತ್ವದಲ್ಲಿ ಇಂದು ನಗರದ ಸರ್ಕಾರಿ ನೌಕರರ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾದಿನಾಚರಣೆಯ, ಪ್ರತಿಭಾ ಪುರಸ್ಕಾರ ಸಾಧಕ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಮಾಧ್ಯಮದ ಬಗ್ಗೆ ಸಮಾಜದಲ್ಲಿ ಒಳ್ಳೆಯ ಅಭಿಪ್ರಾಯವಿಲ್ಲ. ಮಾಧ್ಯಮದ ಬಗ್ಗೆ ಮಾತನಾಡುವ ಸಂದಿಗ್ಧ ಪರಿಸ್ಥಿತಿ ಇದೆ. ವಾಟ್ಸಾಪ್ ಯೂನಿವರ್ಸಿಟಿಗಳಿಂದ ಅನೇಕರಿಗೆ ಧ್ವನಿ ಬಂದಿದೆ ಎಂದರು.
ಪತ್ರಕರ್ತರಿಗೆ ಪೋಲೀಸರಿಗೆ ಕುಟುಂಬದವರೊಂದಿಗೆ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗುವುದಿಲ್ಲ. ಹಬ್ಬ ಹರಿದಿನಗಳಲ್ಲಿಯೂ ದೂರವಿರಬೇಕಾಗುತ್ತದೆ. ಪತ್ರಕರ್ತರು ಎಲ್ಲರ ಕಾರ್ಯಕ್ರಮಗಳಲ್ಲೂ ಭಾಗಿಯಾಗುತ್ತಾರೆ. ಆದರೆ ಅವರ ಕಾರ್ಯಕ್ರಮಕ್ಕೆ ಯಾರೂ ಬರುವುದಿಲ್ಲ. ಪ್ರಸ್ತುತ ದೇಶದಲ್ಲಿ ಈಗ ಸುಮಾರು 80 ಸಾವಿರ ಪತ್ರಿಕೆಗಳು, 800ಕ್ಕೂ ಅಧಿಕ ಟಿವಿ ಚಾನಲ್‍ಗಳು ಇವೆ. ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲವಾಗಿದೆ. ರಾಜಕಾರಣಿಗಳು, ಉದ್ಯಮಿಗಳು, ಧರ್ಮಗುರುಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. ಮತದಾರರು , ಕಾರ್ಮಿಕರು, ರೈತರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲ. ಧ್ವನಿಎತ್ತಿದವರನ್ನು ದಮನ ಮಾಡಲಾಗುತ್ತಿದೆ ಎಂದು ಹೇಳಿದರು.
ಮಾಧ್ಯಮ ಕ್ಷೇತ್ರದ ದೊಡ್ಡ ಶತ್ರುಗಳು ರಾಜಕಾರಣಿಗಳು, ಆದರೆ ರಾಜಕಾರಣಿಗಳನ್ನು ಬೈದು ದಕ್ಕಿಸಿಕೊಳ್ಳಬಹುದು. ಧರ್ಮಗುರುಗಳನ್ನು ಬೈದರೆ ನೋಟೀಸ್ ಕೊಡುತ್ತಾರೆ. ಇದುವರೆಗೂ ಯಡಿಯೂರಪ್ಪ, ಸಿದ್ದರಾಮಯ್ಯ, ದೇವೇಗೌಡರು ನೋಟೀಸ್ ನೀಡಿದ ಉದಾಹರಣೆಗಳು ಇಲ್ಲ. ಆದರೆ ಧರ್ಮಗುರುಗಳ ಬಗ್ಗೆ ಮಾತನಾಡಿದರೆ, ತಲೆ ಹೋಗುತ್ತದೆ ಎಂದರು.
ಮಾಧ್ಯಮ ಉದ್ಯಮವಾದರೆ ತೊಂದರೆ ನಿಜ. ಸಮಾಜ ಸೇವೆಗಾಗಿ ಯಾರೂ ಪತ್ರಿಕೆ ಚಾನಲ್ ಮಾಡುವುದಿಲ್ಲ. ಉದ್ಯಮ ಲಾಭಗಳಿಕೆಯ ಉದ್ದೇಶವಾಗಿರುತ್ತದೆ. ಕರ್ನಾಟಕದ ಬಜೆಟ್ 4ಲಕ್ಷ ಕೋಟಿ ರೂ. ಆದರೆ, ಅಂಬಾನಿ 8 ಲಕ್ಷ ಕೋಟಿ ರೂ. ಅದಾನಿ 14 ಲಕ್ಷ ಕೋಟಿ ರೂ. ಸಂಪತ್ತು ಹೊಂದಿದ್ದಾರೆ. 4-5 ಅಂಬಾಬಿ ಅದಾನಿ ಸೇರಿದರೆ ದೇಶದ ಸಂಪತ್ತಿನಷ್ಟಾಗುತ್ತದೆ. ಅವರು ಕೂಡ ಮಾಧ್ಯಮ ಕ್ಷೇತ್ರವನ್ನು ವ್ಯಾಪಿಸಿಕೊಳ್ಳುತ್ತಿದ್ದಾರೆ. ಅಂತವರಿಗೆ ಲಾಭ ಗಳಿಕೆಗಿಂತ ಸಾಮ್ರಾಜ್ಯದ ರಕ್ಷಣೆ ಮುಖ್ಯವಾಗಿರುತ್ತದೆ. ಬೇಕಾದರೆ ಪತ್ರಿಕೆಗಳನ್ನು ಉಚಿತವಾಗಿ ಕೊಟ್ಟು ಬಿಡುತ್ತಾರೆ ಎಂದರು.
ಉದ್ಯಮಿಗಳು ಮತ್ತು ಧರ್ಮಗುರುಗಳಿಗೆ ಮಾಧ್ಯಮ ಆಯುಧವಾಗಿದೆ. ಯಾವುದೇ ಧರ್ಮ ಗುರುಗಳ ವಿರುದ್ಧ ಬರೆದು ದಕ್ಕಿಸಿಕೊಳ್ಳುವುದು ಕಷ್ಟ. ದೇವರ ನಡುವೆ ಏಜೆಂಟರ್ ಬೇಕಾಗಿಲ್ಲ. ಜನ ಈಗಲೂ ದಿನಪತ್ರಿಕೆಗಳನ್ನು ನಂಬುತ್ತಾರೆ. ಪತ್ರಿಕೆಗಳ ವಿಶ್ವಾಸರ್ಹತೆಯನ್ನು ಕೊಂದರೆ ಜನ ನಂಬುವುದಿಲ್ಲ ಪತ್ರಿಕೆಗಳು ರದ್ದಿಯಾಗುತ್ತವೆ. ಅದಕ್ಕಾಗಿ ಪತ್ರಿಕೆಗಳ ವಿಶ್ವಾಸರ್ಹತೆ ಕಳೆಯುತ್ತಿದ್ದಾರೆ ಎಂದರು.
ಪ್ರಾಮಾಣಿಕತೆ ಪತ್ರಕರ್ತರಿಗೆ ಮುಖ್ಯ. ಭ್ರಷ್ಟಚಾರ ಹೊಂದಾಣಿಕೆ ಇಲ್ಲದ ಕ್ಷೇತ್ರಗಳು ಈಗ ಇಲ್ಲವಾಗಿವೆ. ಉದ್ಯಮಿಗಳು, ಧರ್ಮಗುರುಗಳ ಬಗ್ಗೆ ಬರೆಯುವುದಿಲ್ಲ. ಸಾಮಾನ್ಯ ಓದುಗರಿಗೆ ಇದು ಅರ್ಥವಾಗುವುದಿಲ್ಲ. ಓದುಗರಿಗೂ ಜವಬ್ದಾರಿ ಇರುತ್ತದೆ. ರೈತರು ತಾವು ಬೆಳೆದ ಉತ್ಪನಗಳಿಗೆ ಬೆಳೆ ನಿರ್ಧಾರ ಮಾಡಲು ಇನ್ನೂ ಸಾಧ್ಯವಾಗಿಲ್ಲ. ಉತ್ಪನಕ್ಕಿಂತ ಕಡಿಮೆ ಬೆಲೆಗೆ ಮಾರಾಟವಾಗುತ್ತಿವುದು ರೈತರ ಬೆಳೆ ಮತ್ತು ಪತ್ರಿಕೆಗಳು ಎಂದರು.
ಓದುಗರ ದುಡ್ಡಿನಿಂದ ಪತ್ರಿಕೆಗಳು ನಡೆಯುವುದಿಲ್ಲ. ಜಾಹೀರಾತು, ಸರ್ಕಾರ ಮತ್ತು ಉದ್ಯಮ ಬೆಂಬಲದಿಂದ ನಡೆಯುತ್ತದೆ. ಮಾಧ್ಯಮ ಪ್ರಜಾಪ್ರಭುತ್ವದ 4ನೇ ಅಂಗ ಎನ್ನುತ್ತಾರೆ. ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲರಿಗೂ ಒಂದೇ ಪತ್ರಕರ್ತರಿಗೆ ಬೇರೆ ಏನು ಇಲ್ಲ. ಈಗ ಧರ್ಮಗುರು ಒಬ್ಬರ ಪ್ರಕರಣದಲ್ಲಿ 2 ಸಾವಿರ ಜನರಿಗೆ ನೋಟೀಸ್ ಕೊಟ್ಟಿದ್ದಾರೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಜನರ ತೆರಿಗೆ ಹಣದಲ್ಲಿ ಸಂಬಳ ಪಡೆಯುತ್ತವೆ. ಪತ್ರಕರ್ತರಿಗೆ ಯಾವುದೇ ರಕ್ಷಣೆ ಇಲ್ಲ ಎಂದರು.
ಸಾಮಾಜಿಕ ಜಾಲ ತಾಣಗಳು ಬಂದ ನಂತರ ರೈತರು, ಕಾರ್ಮಿಕರಿಗೆ ಧ್ವನಿ ಬಂದಿದೆ. ಓದುಗನೇ ಪತ್ರಕರ್ತನಾಗಿದ್ದಾನೆ. ಆದರೆ ಇದರಲ್ಲಿಯೂ ದೌರ್ಬಲ್ಯ ದೋಷಗಳೂ ಇವೆ. ಯಾವುದು ಸುಳ್ಳು, ಯಾವುದು ಸತ್ಯ ಗೊತ್ತಾಗುವುದಿಲ್ಲ. ಪತ್ರಕರ್ತರಿಗೆ ಉತ್ತರದಾಯಿತ್ವ ಪಾರದರ್ಶಕತೆ ಇದೆ. ಈಗಲೂ ಮುದ್ರಣ ಮಾಧ್ಯಮ ವಿಶ್ವಾಸರ್ಹತೆ ಉಳಿಸಿಕೊಂಡಿದೆ.
ವಾಟ್ಸಾಪ್ ವಿವಿ ಯಿಂದ ಗುಣಮಟ್ಟ ಕುಸಿತವಾಗುತ್ತಿದೆ. ಭ್ರಷ್ಟಚಾರ ಪತ್ರಿಕೋದ್ಯಮಕ್ಕೆ ಮಾತ್ರವಲ್ಲ, ಇಡೀ ಸಾಮಾಜಕ್ಕೆ ಅಂಟಿದ ರೋಗ. ಎಲ್ಲಾ ಕ್ಷೇತ್ರದಲ್ಲೂ ಸಾಮಾಜ ಸುಧಾರಣೆಯಾಗಬೇಕು. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಕೂಡ ಸುಧಾರಣೆಯಾಗಬೇಕು ಎಂದರು.
ಸಂಸದ ಬಿ.ವೈ.ರಾಘವೇಂದ್ರ ಕಾರ್ಯಕ್ರಮ ಉದ್ಘಾಟಿಸಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಜಿಲ್ಲಾ ಶಾಖೆ ಅಧ್ಯಕ್ಷ ಕೆ.ವಿ.ಶಿವಕುಮಾರ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿ ಜಿಲ್ಲಾಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ಎನ್.ರವಿಕುಮಾರ್, ರಾಷ್ಟ್ರೀಯ ಮಂಡಳಿ ಸದಸ್ಯ ಭಂಡಿಗಡಿ ನಂಜುಡಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಟಿ.ಅರುಣ್, ಕಾರ್ಯದರ್ಶಿ ಕೆ.ಆರ್.ಸೋಮನಾಥ್, ಖಜಾಂಚಿ ರಂಜಿತ್, ಉಪಸ್ಥಿತರಿದ್ದರು. ವೈದ್ಯ ಸ್ವಾಗತಿಸಿದರು, ದೀಪಕ್‍ಸಾಗರ್ ನಿರೂಪಿಸಿದರು, ಹುಮಾಯೂನ್ ಹರ್ಲಾಪುರ್ ಸಂಗಡಿಗರಿಗೆ ವಚನ ಗಾಯನ ಕಾರ್ಯಕ್ರಮ ನಡೆಯಿತು.
ಸನ್ಮಾನಿತರು:
ಇದೇ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರವನ್ನು ಶರಣ್ಯ ನಾಯಕ್, ನವ ಎಸ್. ನಾಯಕ್, ರಘು ಸಮರ್ಥ ನಾಡಿಗ್, ಸಮರ್ಥ ಎಸ್. ಕಿರುವಾಸೆ, ವೈ.ಎಸ್. ಅನಿಕೇತನ್, ವೈ.ಎಸ್.ಆಯುಷ್, ಕೆ.ಎನ್. ಶ್ರೇಯಾ ಇವರಿಗೆ ಸನ್ಮಾನಿಸಲಾಯಿತು.
ವಿವಿಧ ಪ್ರಶಸ್ತಿ ಪುರಸ್ಕೃತ ಆರುಂಡಿ ಶ್ರೀನಿವಾಸ್ (2024ರ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು), ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರ್ತಿ ಕವಿತಾ (ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶ್ರೀಮತಿ ಗಿರಿಜಮ್ಮ ರುದ್ರಪ್ಪ ತಾಳಿಕೋಟೆ ಪ್ರಶಸ್ತಿ ಪುರಸ್ಕೃತರು) ಹಿರಿಯ ಪತ್ರಕರ್ತರಾದ ಗಿರೀಶ್ ಉಮ್ರಾಯ್ (ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಎಸ್. ಹೆಚ್. ರಂಗಸ್ವಾಮಿ ಪ್ರಶಸ್ತಿ ಪುರಸ್ಕೃತರು), ವಿಜಯವಾಣಿ ಪತ್ರಿಕೆಯ ವರದಿಗಾರ ರವಿ ಬಿದನೂರು (ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮಂಡಿಬೆಲೆ ಶಾಮಣ್ಣ ಪ್ರಶಸ್ತಿ ಪುರಸ್ಕೃತರು), ವಿಜಯವಾಣಿ ಪತ್ರಿಕೆಯ ಸ್ಥಾನಿಕ ಸಂಪಾದಕರಾದ ಚಂದ್ರಶೇಖರ ಶೃಂಗೇರಿ (ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮಿಂಚು ಶ್ರೀನಿವಾಸ ಪ್ರಶಸ್ತಿ ಪುರಸ್ಕೃತರು) ಹೆಚ್. ಯು. ವೈದ್ಯನಾಥ್ (ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ತೀರ್ಪುಗಾರರು, ಭಾರತ ಸರ್ಕಾರದ ಪ್ರಾದೇಶಿಕ ಚಲನಚಿತ್ರ ಸೆನ್ಸಾರ್ ಮಂಡಳಿ ಸದಸ್ಯರು) ದೇಶಾದ್ರಿ ಹೊಸ್ಮನೆ (ಕರ್ನಾಟಕ ಚಲನ ಚಿತ್ರ ಅಕಾಡೆಮಿ ಸದಸ್ಯರು)ರವರನ್ನು ಸನ್ಮಾನಿಸಲಾಗುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post