ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸರಳ ನ್ಯಾಯದಾನದ ಮೂಲಕ ವ್ಯಾಜ್ಯಗಳನ್ನು ಇತ್ಯರ್ಥ ಮಾಡಿಕೊಳ್ಳುವ ಒಂದು ವ್ಯವಸ್ಥೆ ಖಾಯಂ ಜನತಾ ಅದಾಲತ್ ಆಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ ನಾಯಕ್ ಕರೆ ನೀಡಿದರು.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಿವಮೊಗ್ಗ ಜಿಲ್ಲಾ ನ್ಯಾಯವಾದಿಗಳ ಸಂಘ, ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯ ಹಾಗೂ ಸಹ್ಯಾದ್ರಿ ಕಾಲೇಜು,ಶಿವಮೊಗ್ಗ ಇವರ ಸಹಯೋಗದೊಂದಿಗೆ ಶನಿವಾರ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಖಾಯಂ ಲೋಕ ಆದಾಲತ್ ಕುರಿತು ಜಾಗೃತಿ ಅಭಿಯಾನ ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನ್ಯಾಯಾಂಗ ವ್ಯವಸ್ಥೆ ಎಲ್ಲರಿಗೂ ಅಗತ್ಯವಾಗಿದೆ. ಇಂದು ಪ್ರತಿ ವಿಚಾರಕ್ಕೂ ಸಾರ್ವಜನಿಕರು ನ್ಯಾಯಾಲಕ್ಕೆ ಬರುತ್ತಾರೆ. ಜನರ ಕ್ಲಿಷ್ಟಕರ ಸಮಸ್ಯೆಗಳನಗಳನ್ನು ಇತ್ಯರ್ಥಪಡಿಸುವುದು, ಸುಲಭ ಪ್ರಕ್ರಿಯೆಗಳ ಮೂಲಕ ದಾವೆಗಳನ್ನು ಇತ್ಯರ್ಥಪಡಿಸುವುದು ನ್ಯಾಯಾಂಗದ ಉದ್ದೇಶವಾಗಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಕಾನೂನು ಪ್ರತಿಯೊಬ್ಬರಿಗೂ ಮುಟ್ಟಬೇಕು. ಕಾಲೇಜು ವಿದ್ಯಾರ್ಥಿಗಳ ಮೂಲಕ ಜನರನ್ನು ತಲುಪುವ ಉದ್ದೇಶದಿಂದ ಕಾಲೇಜಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಇಂದಿನ ಕಾಲೇಜುಗಳ ಶಿಕ್ಷಣ ವ್ಯವಸ್ಥೆಯಲ್ಲಿ ಕಾಲೇಜುಗಳು ಅಂಕಗಳ ಫಲಿತಾಂಶದ ಹಿಂದೆ ಬಿದ್ದಿವೆ. ಅಂಕಗಳಿಗೆ ಮಾತ್ರ ಸೀಮೀತವಾಗದೆ ಜೀವನದಲ್ಲಿ ಯಶಸ್ಸುಗಳಿಸುವಂತೆ ವಿದ್ಯಾರ್ಥಿಗಳನ್ನು ರೂಪಿಸಬೇಕು. ರ್ಯಾಂಕ್ ಗಳಿಸಿದವರೆಲ್ಲರಲ್ಲಿ ಯಶಸ್ಸು ಇಲ್ಲ. ಯಶಸ್ಸು ಗಳಿಸಿದವರು ರ್ಯಾಂಕ್ ಪಡೆದುಕೊಂಡಿರುವುದಿಲ್ಲ. ಕಲಿಕೆಯ ವಿಧಾನ ಬದಲಾಗಬೇಕಿದೆ. ಎಷ್ಟೋ ಬಾರಿ ವಿದ್ಯಾವಂತರಲ್ಲೂ ಕಾನೂನು ಅರಿವು ಇರುವುದಿಲ್ಲ. ಎಲ್ಲರೂ ಕಾನೂನು ತಿಳಿಯುವುದು ಅವಶ್ಯಕವಾಗಿದೆ
ಲೋಕ ಅದಾಲತ್ ಇರುವುದು ಸಾರ್ವಜಿನಿಕರಿಗಾಗಿ. ಸಾರ್ವಜನಿಕ ಸೇವೆಗಳಿಗೆ ಸಂಬಂಧಿಸಿದ ವಿಷಯಗಳನ್ನು ಇಲ್ಲಿ ಕಾಣಬಹುದಾಗಿದೆ. ಇಲ್ಲಿ ಇತ್ಯರ್ಥವಾದ ಕೇಸುಗಳಿಗೆ ಮೇಲ್ಮನವಿಗೆ ಅವಕಾಶವಿರುವುದಿಲ್ಲ. ಇಲ್ಲಿ ಇತ್ಯರ್ಥಪಡಿಸಿಕೊಳ್ಳಲು ಒಪ್ಪದೆ ಇದ್ದಾಗ ಮಾತ್ರ ಮೇಲಿನ ಕೋರ್ಟ್‌ಗಳಿಗೆ ಹೋಗಬಹುದು, ಇಲ್ಲಿ ತೀರ್ಮಾನವಾದ ನಂತರ ಮುಂದೆ ಹೋಗಲು ಅವಕಾಶವಿರುವುದಿಲ್ಲ ಉಭಯ ಪಕ್ಷಗಳವರು ಒಪ್ಪಿ ವ್ಯಾಜ್ಯಗಳನ್ನು ಇತ್ಯರ್ಥಪಡಿಸಿಕೊಳ್ಳುವ ವ್ಯವಸ್ಥೆ ಇದಾಗಿದೆ. ಈ ಅಭಿಯಾನವು ಒಂದು ತಿಂಗಳು ಕಾಲ ನಡೆಯಲಿದ್ದು ಸಾರ್ವಜನಿಕರು ಜನತಾ ನ್ಯಾಯಾಲಯದ ಉಪಯೋಗವನ್ನು ಬಳಸಿಕೊಳ್ಳಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ
ಸಂತೋಷ್ ಎಂ.ಎಸ್. ಮಾತನಾಡಿ, ೧೯೮೭ ರಿಂದ ಶಾಶ್ವತ ಉಚಿತ ಕಾನೂನು ಯೋಜನೆ ಜಾರಿಯಲ್ಲಿದೆ. ಮಾತುಕತೆ ಮೂಲಕ ಪರಿಹರಿಸಿಕೊಳ್ಳುವ ಕಾನೂನು ವ್ಯವಸ್ಥೆ ಇದಾಗಿದೆ. ಇಬ್ಬರು ಮಾತಾಡಿಕೊಂಡು ವ್ಯಾಜ್ಯವನ್ನು/ಜಗಳವನ್ನು ಬಗೆಹರಿಸಿಕೊಳ್ಳಬಹುದು ಎಂದ ಅವರುಖಾಯಂ ಅದಾಲತ್‌ಗೆ ಬರುವ ವಿಚಾರಗಳನ್ನು ಪ್ರಸ್ತಾಪಿಸಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಜಿ.ಆರ್. ರಾಘವೇಂದ್ರ ಸ್ವಾಮಿ ಮಾತನಾಡಿ, ರಾಜೀ ಸಂಧಾನದ ಮೂಲಕ ಬಗೆಹರಿಸಿಕೊಳ್ಳಬಹುದಾದ ಬ್ಯಾಂಕ್‌ಗಳ ಸಾಲದ ವ್ಯಾಜ್ಯಗಳು ಡಿಫಾಲ್ಟರ್, ಅರಿಯರ್ಸ್ ಇತರ ಸೇವೆಗಳ ಕುರಿತು ಮಾಹಿತಿ ನೀಡಿದರು.
ವಕೀಲರಾದ ಕೆ.ಪಿ. ಶ್ರೀಪಾಲ್ ಮಾತನಾಡಿ, ಜನತಾ ನ್ಯಾಯಾಲಯ ಸಾಮಾನ್ಯ ಪ್ರಕರಣಗಳಿಗೆ, ಜನಸಾಮಾನ್ಯರಿಗೆ ವರದಾನವಾಗಿದೆ. ಇಂದು ಸೇವಾ ಪ್ರಾಧಿಕಾರದ ಮೂಲಕ ಮನೆಮನೆಗೆ ಹೋಗುತ್ತಿದ್ದು, ಕಾನೂನು ಅರಿವು ಯುವಕರಿಗೆ ಅತ್ಯಗತ್ಯವಾಗಿದೆ ಎಂದರು.
ಡಾ. ಸನಾವುಲ್ಲಾ ಪ್ರಾಂಶಪಾಲರು ಸಹ್ಯಾದ್ರಿ ಕಲಾ ಕಾಲೇಜು, ಶಿವಮೊಗ್ಗ ಅಧ್ಯಕ್ಷತೆ ವಹಿಸಿದ್ದರು, ಪ್ರೊ.ಟಿ.ಅವಿನಾಶ್, ರಾಜೇಶ್ವರಿ ಉಪಸ್ಥಿತರಿದ್ದರು.
ಡಾ. ಪ್ರಕಾಶ್ ಮರನಳ್ಳಿ ಸ್ವಾಗತಿಸಿದರು. ಕು.ಪ್ರಣತಿ ಪ್ರಾರ್ಥಿಸಿದರು. ಪ್ರೊ.ಕೆ.ಎನ್.ಮಂಜುನಾಥ್ ವಂದಿಸಿದರು. ಡಾ. ಲವ ಜಿ.ಆರ್. ಆಧ್ಯಾಪಕರು ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post