ಕಲ್ಪ ಮೀಡಿಯಾ ಹೌಸ್ | ಸೊರಬ |
ಪಟ್ಟಣ ಸೇರಿ ತಾಲೂಕಿನಾದ್ಯಂತ ಸಂಭ್ರಮ– ಸಡಗರದಿಂದ ನಾಗರಪಂಚಮಿ #Nagarapanchami ಆಚರಿಸಲಾಯಿತು. ಹಲವರು ಮನೆಯಲ್ಲಿಯೇ ನಾಗರ ಮೂರ್ತಿಗೆ ವಿಶೇಷ ಪೂಜೆ ಮಾಡಿ ಹಾಲೆರೆದರೆ, ಕೆಲವರು ದೇವಸ್ಥಾನ ಆವರಣದಲ್ಲಿರುವ ಹುತ್ತ, ನಾಗರ ಮೂರ್ತಿಗೆ ಹಾಲೆರೆದರು.
ಮನೆ ಬಾಗಿಲಿಗೆ ಮಾವಿನ ತೋರಣ ಕಟ್ಟಿ, ಮನೆ ಮುಂದೆ ರಂಗೋಲಿ ಹಾಕುವ ಮೂಲಕ ಮಹಿಳೆಯರು ಬೆಳಿಗ್ಗೆಯೇ ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರ ಪಂಚಮಿಯನ್ನು ಸಂಭ್ರಮದಿಂದ ಸ್ವಾಗತಿಸಿದರು. ಶೇಂಗಾ, ಪುಟಾಣಿ, ಕೊಬ್ಬರಿ ಉಂಡಿ ಸೇರಿದಂತೆ ಇತರ ಸಿಹಿ ಪದಾರ್ಥಗಳನ್ನು ದೇವರಿಗೆ ನೈವೇದ್ಯ ಅರ್ಪಿಸಲಾಯಿತು.
ಪಟ್ಟಣದ ದಂಡಾವತಿ ತೀರದ ಅಶ್ವತ್ಥ ಮರದ ಕೆಳಗಿರುವ ನಾಗರ ಮೂರ್ತಿ, ಚಿಕ್ಕಪೇಟೆಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಪಕ್ಕ, ಸೊಪ್ಪಿನ ಕೇರಿಯ ಶ್ರೀ ದುರ್ಗಾಂಬ ದೇವಸ್ಥಾನ ಹಿಂಭಾಗ, ಶ್ರೀ ರಂಗನಾಥ ದೇವಸ್ಥಾನ, ಮರೂರು ರಸ್ತೆ, ಹಿರೇಶಕುನದ ಸಾಗರ ರಸ್ತೆ, ಕಾನುಕೇರಿಯ ನಾಗರ ಕಟ್ಟೆ ಸೇರಿದಂತೆ ವಿವಿಧಡೆ ಇರುವ ಅರಳಿಮರದ ಅಡಿಯಲ್ಲಿರುವ ನಾಗರ ಮೂರ್ತಿಗಳಿಗೆ ಮಹಿಳೆಯರು ಹಾಲೆರೆದು ವಿಶೇಷ ಪೂಜೆ ಸಲ್ಲಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 






















