ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |ಮನೆ ಕೆಲಸ ಮಾಡುವ ಕಾರ್ಮಿಕನೊಬ್ಬನ ವಾಚನ್ನು ಅವನ ಜೊತೆಯವರೇ ಅಪಹರಿಸುತ್ತಾರೆ. ನಂತರ ಅದು ಸಿಕ್ಕ ಮೇಲೆ ಅದರ ಬೆಲೆ ಹಾಗೂ ಮಹತ್ವವನ್ನ ಆತ ತಿಳಿಸುತ್ತಾನೆ. ಅದರಂತೆ ಉದ್ದ ಕೂದಲಿನ ಮೇರಿ ಕೂಡ ಮನೆ ಕೆಲಸ ಮಾಡುವಾಗ ಅಲ್ಲಿ ತಲೆಗೆ ಅಲಂಕಾರದ ವಸ್ತುಗಳನ್ನು ನೋಡಿ ಆಸೆ ಪಡುತ್ತಾಳೆ. ಅದನ್ನು ತನ್ನ ಗಂಡನೇ ತಂದುಕೊಡಬೇಕೆಂಬ ಮಹಾದಾಸೆಯು ಅವಳಿಗಿರುತ್ತದೆ. ಕ್ರಿಸ್ಮಸ್ ಹಬ್ಬ ಬಂದೇ ಬಿಡುತ್ತದೆ. ಇಬ್ಬರೂ ಒಬ್ಬರಿಗೊಬ್ಬರು ಆಸೆಪಡುವ ತಮ್ಮ ಜೀವಗಳಿಗೆ ಉಡುಗೊರೆಯನ್ನು ತರುತ್ತಾರೆ. ಆದರೆ ಅಲ್ಲೊಂದು ಕುತೂಹಲಕಾರಿ ತಿರುವನ್ನು ಕಥೆಗಾರ ಇಟ್ಟಿದ್ದಾನೆ. ಮುಂದೇನಾಗುತ್ತದೆ ಎಂಬುದನ್ನ ಕಿರುಚಿತ್ರ ನೋಡಿಯೇ ನೀವು ತಿಳಿಯಬೇಕು.
ಇಂಗ್ಲೀಷ್ ನ ಕಥೆಯೊಂದು ಕನ್ನಡದಲ್ಲಿ ಕಿರುಚಿತ್ರವಾಗುವುದು ಹೊಸತೇನಲ್ಲವಾದರೂ ಗಮನ ಸೆಳೆದು ಕಾಡಿದ್ದು ಮೊನ್ನೆ ಮೊನ್ನೆಯಷ್ಟೇ ಅರಾಟೆ ಟಾಕೀಸ್ ನಲ್ಲಿ ಬಿಡುಗಡೆಯಾದ ‘ದಿ ಗಿಫ್ಟ್’ ಎನ್ನುವ ಕಿರುಚಿತ್ರ. ಮೂಲ ಇಂಗ್ಲಿಷ್ ನಲ್ಲಿ ಇರುವ ಈ ಕಥೆಯನ್ನು ಬರೆದಿರುವುದು ಓ ಹೆನ್ರಿ. ಈ ಕಥೆ ಮನುಷ್ಯನ ಭಾವನೆಗಳಿಗೆ ಹತ್ತಿರವಾಗುವಂತಿದೆ. ಇಂಗ್ಲಿಷ್ ನ ಕಥೆಯನ್ನು ನಾಗರಾಜ್ ನೀಲ್ ಅವರು ಕಿರುಚಿತ್ರವಾಗಿ ಅಳವಡಿಸಿ ನಿರ್ದೇಶನ ಮಾಡಿರುವುದು ವಿಶೇಷವಾಗಿ ಮೂಡಿ ಬಂದಿದೆ.
ಮೂಲ ಕಥೆಯ ಓಘಕ್ಕೆ ಸ್ವಲ್ಪವೂ ಚ್ಯುತಿ ಬಾರದಂತೆ ನಾಗರಾಜ್ ನೀಲ್ ನಿರ್ದೇಶಸಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಸಂಬಂಧ ಹಾಗೂ ಗೆಳೆಯರು ಕೇವಲ ಉಪಯೋಗಕ್ಕಾಗಿ ಎನ್ನುವ ಮಾತುಗಳನ್ನ ಕೇಳುವ ಈ ಮೆಟೀರಿಯಲ್ಸ್ಟಿಕ್ ಪ್ರಪಂಚದ ಜೊತೆಗೆ ನಾವು ಕಳೆದು ಹೋಗಿದ್ದೇವೆ. ಇದರ ನಡುವೆ ಭಾವನಾತ್ಮಕವಾದ ಸಂಬಂಧಗಳನ್ನು ಬೆಸೆಯುವ ಒಂದು ಸೂಕ್ಷ್ಮವಾದ ಕಥಾವಸ್ತುವನ್ನು ಹೊಂದಿರುವಂತಹ ಕಿರು ಚಿತ್ರ ಇದಾಗಿದೆ. ಕವಿ ಅಂದು ಬರೆದ ಕಥೆ ಇಂದಿಗೂ ಕೂಡ ಪ್ರಸ್ತುತವಾಗಿ ನಮ್ಮ ಮನ ಸೆಳೆಯುತ್ತದೆ.
ಕಥೆಯನ್ನು ಮನಮುಟ್ಟುವಂತೆ ಪಾತ್ರಧಾರಿಗಳು ಜೀವಿಸಿ ಅಭಿನಯಿಸಿದ್ದಾರೆ. ತನಗೆ ಇಷ್ಟವಾದವರಿಗೆ ಕೊಡುವ ಉಡುಗೊರೆಗಳಿಗಿಂತಲೂ ಅದಕ್ಕಿಂತ ಮಾಡಿದ ತ್ಯಾಗ ನಮ್ಮ ಮನಸ್ಸಿನೊಳಕ್ಕೆ ಇಳಿದು ಒಮ್ಮೆ ಮೌನ ಆವರಿಸುವಂತಾಗುತ್ತದೆ. ವಿಠಲ್ ರಂಗದೊಳ್ ಸಂಗೀತ ಸೆಳೆಯುತ್ತದೆ. ಸಿನಿಮಾಟೋಗ್ರಫಿಯಲ್ಲಿ ಪ್ರದೀಪ್ ಆರ್ಯನ್ ಗಮನ ಸೆಳೆಯುತ್ತಾರೆ. ಒಟ್ಟಿನಲ್ಲಿ ಸಂಕಲನ, ನಿರ್ದೇಶನ, ಅಭಿನಯ ಎಲ್ಲವುಗಳು ಯಾವ ಸಿನಿಮಾಗಳಿಗೂ ಕಡಿಮೆ ಇಲ್ಲವೆಂಬಂತೆ ಚಿತ್ರ ಬಂದಿದೆ. ನಿಜವಾಗಿಯೂ ಇಯರ್ ಫೋನ್ ಹಾಕಿ ಈ ಸಿನಿಮಾವನ್ನ ಕೇಳಿಸಿಕೊಂಡರಂತೂ ಚಲನಚಿತ್ರ ಮಂದಿರದಲ್ಲಿ ಕುಳಿತು ಬೆಳ್ಳಿ ಪರದೆಯಲ್ಲಿ ನೋಡುತ್ತಿರುವೆ ಏನೋ ಅನ್ನುವಷ್ಟರ ಮಟ್ಟಿಗೆ ಈ ಕಿರು ಚಿತ್ರದ ಶಬ್ದ ವಿನ್ಯಾಸವು ಮೂಡಿಬಂದಿದೆ. ಕಡಿಮೆ ಸಮಯದ ಈ ಚಿತ್ರ ಬಹಳ ಕಾಲ ತನ್ನ ಇರುವಿಕೆಯನ್ನು ಕಾಡುವ ರೀತಿಯಲ್ಲಿ ಮೂಡಿಸುವಂತೆ ಬಂದಿದೆ.
ಈ ಕಿರು ಚಿತ್ರದಲ್ಲಿ ಬರುವಂತಹ ಪ್ರತಿಯೊಂದು ಪಾತ್ರವೂ ಸಹ ಉತ್ತಮ ಅಭಿನಯದಿಂದಲೇ ಆಕರ್ಷಿಸಿ ಅಲ್ಲಿನ ಪಾತ್ರದಾರಿಗಳು ನಮ್ಮನ್ನು ಸೆರೆಹಿಡಿದಿದ್ದಾರೆ. ರಜನೀಶ್ ನಾವುಡರ ಪಳಗಿದ ಅಭಿನಯ ಈ ಕಥೆಗೆ ಇನ್ನಷ್ಟು ಪುಷ್ಟಿ ನೀಡಿದೆ. ಹಾಗೂ ಅವರ ಜೊತೆಯಲ್ಲಿ ನಟಿಸಿದಂತಹ ಸಿಂಧೂ ಕೂಡ ನಟನೆಯ ಮೂಲಕವೇ ಈ ಕಿರುಚಿತ್ರಕ್ಕೆ ಭಾವನಾತ್ಮಕ ಸಂವೇದನೆಯನ್ನು ತಂದು ಕೊಟ್ಟಿದ್ದಾರೆ. ಎಲ್ಲಕ್ಕಿಂತ ಪ್ರೀತಿ ಮಿಗಿಲೆಂಬುದನ್ನು ಸೂಚ್ಯವಾಗಿ ಬಹಳ ಚೆನ್ನಾಗಿ ಈ ಚಿತ್ರದಲ್ಲಿ ತೋರಿಸಿದ್ದಾರೆ. ಈ ಕಿರು ಚಿತ್ರ ಹೃದಯಸ್ಪರ್ಶಿಯಾಗಿದೆ. ಕಥೆ ಮುಂದೇನಾಗಬಹುದು ಎಂಬುದನ್ನು ಹೇಗೆ ಚಿತ್ರೀಕರಿಸಿದ್ದಾರೆ ಎಂಬುದನ್ನು ನೋಡುವ ಕುತೂಹಲ ಮೂಡಿಸುವಂತೆ ಚಿತ್ರಿತವಾಗಿರುವುದು ಇಲ್ಲಿನ ವಿಶೇಷ. ಹಾಗಾಗಿ ಭಾವನೆಗಳಿರುವವರೆಲ್ಲರೂ ಕೂಡ ಒಮ್ಮೆ ನೋಡಲೇಬೇಕಾದಂತಹ ಕಿರು ಚಿತ್ರ ಇದು.
ಅಲ್ಲದೇ ಈ ಕಿರು ಚಿತ್ರವು ಶಿವಮೊಗ್ಗದ ಅಂಬೆಗಾಲು ಕಿರುಚಿತ್ರ ಪ್ರದರ್ಶನ ಸ್ಪರ್ಧೆ ಸೀಸನ್-5 ರಲ್ಲಿ ಉತ್ತಮ ನಟಿ ಅವಾರ್ಡ್ ಪಡೆದುಕೊಂಡಿದೆ ಹಾಗೂ ಪರಿದೃಶ್ಯ ಇಂಟರ್ನ್ಯಾಷನಲ್ ಫೆಸ್ಟಿವಲ್ಸ್ ಆಫ್ ಶಾರ್ಟ್ ಫಿಲಂ ಅಂಡ್ ಡಾಕ್ಯುಮೆಂಟೇರೀಸ್ ಕರ್ನಾಟಕ ಸೀಸನ್-1 (Paridrishya International festivals of Short Films and Documentaries, Karnataka season-1) ಇಲ್ಲಿ ಉತ್ತಮ ಕಥೆ ಮತ್ತು ಉತ್ತಮ ನಟಿ ಅವಾರ್ಡ್ ಪಡೆದುಕೊಂಡಿದೆ. ನಿಮಗೆ ಅರಾಟೆ ಟಾಕೀಸ್ ನ ಈ ಲಿಂಕ್ https://youtube.com/@araatetalkies?si=Od0xjZgmAB0_PcoZ ಕಿರು ಚಿತ್ರ ಲಭ್ಯವಿದೆ. ಎಲ್ಲರು ನೋಡಿ ಆನಂದಿಸಿ. ಮಲೆನಾಡಿನ ಪ್ರತಿಭೆಗಳಿಗೆ ಪ್ರೋತ್ಸಾಹಿಸಿ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post