ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಲ್ಲಿನ ಸರ್ ಎಂ.ವಿಶ್ವೇಶ್ವರಯ್ಯ ಕೋ-ಆಪರೇಟಿವ್ ಸೊಸೈಟಿಯ ವತಿಯಿಂದ ಸೆ.13ರಂದು ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮದಿನಾಚರಣೆ #Sir M Vishveshwaraiah ಪ್ರಯುಕ್ತ ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಹಾಗೂ ಸೆ.14ರಂದು ಸೊಸೈಟಿಯ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ನಡೆಯಲಿದೆ ಎಂದು ಸೊಸೈಟಿಯ ಅಧ್ಯಕ್ಷ ಡಾ. ಎಸ್. ಶ್ರೀಧರ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 1983ರಲ್ಲಿ 813 ಸದಸ್ಯರೊಂದಿಗೆ ಆರಂಭವಾದ ಸೊಸೈಟಿ 500 ರೂ. ಸ್ವಂತ ಸಾಲ ಹಾಗೂ 2000 ರೂ. ಜಾಮೀನು ಸಾಲ ನೀಡುವುದರೊಂದಿಗೆ ಪ್ರಸ್ತುತ 10 ಸಾವಿರ ಸದಸ್ಯರನ್ನು ಹೊಂದಿದ್ದು, ಸದಸ್ಯರಿಗೆ ಹಲವಾರು ರೀತಿಯ ಸಾಲ ನೀಡಲಾಗುತ್ತಿದೆ ಎಂದರು.
2025ರ ಮಾರ್ಚ್ ಅಂತ್ಯಕ್ಕೆ ಸದಸ್ಯರಿಂದ 36 ಕೋಟಿ ರೂ. ಠೇವಣಿ ಸಂಗ್ರಹಿಸಿದ್ದು, ಸದಸ್ಯರಿಗೆ 30 ಕೋಟಿ ರೂ. ಸಾಲ ನೀಡಲಾಗಿದೆ. ಸಾಲ ವಸೂಲಾತಿ ಪ್ರಮಾಣವು ಶೇ.96ರಷ್ಟಿದ್ದು ಪ್ರಸಕ್ತ ಸಾಲಿನಲ್ಲಿ 4.68 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಹಣಕಾಸು ವಹಿವಾಟಿನ ವಿಚಾರದಲ್ಲಿ ತನ್ನದೇ ಆದಂತಹ ಛಾಪು ಮೂಡಿಸಿದೆ ಎಂದರು.
ಇದೀಗ ಡಿಜಿಟಲ್ ಯುಗದಲ್ಲಿ ಸದಸ್ಯರ ಅನುಕೂಲಕ್ಕಾಗಿ ಕ್ಲೌಡ್ ಬೇಸ್ಡ್ ಸಿಸ್ಟಮ್ ಮೂಲಕ ಮೊಬೈಲ್ ಅಪ್ಲಿಕೇಷನ್ ಅನ್ನು ಪರಿಚಯಿಸುತ್ತಿದೆ. ಈ ಆ್ಯಪ್‍ನಲ್ಲಿ ಟ್ರಾನ್ಸಾಕ್ಷನ್, ಸ್ಟೇಟ್ಮೆಂಟ್, ಇಂಟರೆಸ್ಟ್ ರಿಪೋರ್ಟ್, ಲೋನ್ ಬ್ಯಾಲೆನ್ಸ್, ವಿವಿಧ ಬ್ಯಾಂಕಿಂಗ್ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಫೋನ್ ಪೇ ಹಾಗೂ ಗೂಗಲ್ ಪೇ ಮೂಲಕ ಸೊಸೈಟಿಯ ಸಾಲದ ಖಾತೆಗೆ ಸದಸ್ಯರು ಸಾಲ ಮರುಪಾವತಿಸಲು ವಿಶೇಷವಾಗಿ ಹಾಗೂ ರಾಜ್ಯದಲ್ಲೇ ಪ್ರಥಮ ಬಾರಿಗೆ ಅಭಿವೃದ್ಧಿಪಡಿಸಿರುವ ಆ್ಯಪ್ ಇದಾಗಿದೆ. ಏಕತ್ವ ಇನ್ನೋವೇಷನ್ ಪ್ರೈವೇಟ್ ಲಿ., ಎಂಬ ಸಂಸ್ಥೆ ಹಾಗೂ ಸಿಲಿಕಾನ್ ಸಾಫ್ಟ್‌ವೇರ್ ಅವರ ಸಹಯೋಗದಲ್ಲಿ ಈ ಮೊಬೈಲ್ ಅಪ್ಲಿಕೇಷನ್ ಆ್ಯಪ್‍ನ್ನು ಅಭಿವೃದ್ಧಿಪಡಿಸಿದೆ. ಸೆ.14ರಂದು ಬೆಳಿಗ್ಗೆ 10 ಗಂಟೆಗೆ ನಡೆಯುವ ವಾರ್ಷಿಕ ಮಹಾಸಭೆಯಲ್ಲಿ ಲೋಕಾರ್ಪಣೆಗೊಳಿಸಲಾಗುವುದು ಎಂದರು.
ಸೆ.13ರಂದು ಸಂಜೆ 6 ಗಂಟೆಗೆ ನಡೆಯುವ ಸಾಧಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರದಲ್ಲಿ ಮುಖ್ಯ ಅತಿಥಿಯಾಗಿ ಹಿರಿಯ ಸಹಕಾರಿ ಹಾಗೂ ಇಂಜಿನಿಯರ್ ಎ.ಆರ್. ಪ್ರಸನ್ನಕುಮಾರ್ ಆಗಮಿಸಲಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಬಿ. ಬಾಲಚಂದ್ರ, ಡಾ. ಹೆಚ್.ಎಸ್. ವಿಶ್ವಭಾರತಿ, ಪ್ರೊ.ಬಿ.ಎಂ. ಕುಮಾರಸ್ವಾಮಿ, ಕೆ.ಜಿ. ಕೃಷ್ಣಾರವರ ಎಸ್.ಜಿ. ಕೃಷ್ಣಮೂರ್ತಿ ಹಾಗೂ ಇಂಧುಮತಿ ಅವರನ್ನು ಸನ್ಮಾನಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಪಡೆದ 50ಕ್ಕೂ ಹೆಚ್ಚು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದರು.
ಸೊಸೈಟಿ ವತಿಯಿಂದ ನೂತನವಾಗಿ ಅಭಿವೃದ್ಧಿಪಡಿಸಿರುವ ಮೊಬೈಲ್ ಆ್ಯಪ್, ಸಾಲಸೌಲಭ್ಯ, ಲಾಕರ್ ಸೌಲಭ್ಯ ಹಾಗೂ ಇತರೆ ಸೌಲಭ್ಯಗಳನ್ನು ಸದಸ್ಯರು ಸದುಪಯೋಗಪಡಿಸಿಕೊಳ್ಳುವಂತೆ ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ಸೊಸೈಟಿಯ ಖಜಾಂಚಿ ಚಂದ್ರಶೇಖರ್, ನಿರ್ದೇಶಕರಾದ ಸೂರ್ಯನಾರಾಯಣ, ಶಶಿಕಾಂತ್ ನಾಡಿಗ್, ಜಿ.ಕೆ. ಮಾಧವಮೂರ್ತಿ, ಶುಭ ರಾಘವೇಂದ್ರ, ಭಾಗ್ಯ ಕೃಷ್ಣಮೂರ್ತಿ, ದೀನದಯಾಳು, ಎಂ.ಎನ್.ಎಸ್. ಮಣಿ, ಸಂತೋಷ್‍ಕುಮಾರ್, ರವಿಕಿರಣ್, ಮುರಳೀಧರ್, ರಾಜು, ಸೊಸೈಟಿಯ ಸಿಇಒ ಮನ್ಮಥ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















