ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗ್ರಾಮದ ಪರಿಸರಕ್ಕೆ ಮಾರಕವಾಗುವ ಜಲ್ಲಿ ಕ್ರಷರ್ ಹಾಗೂ ಕೃಷಿ ನಡೆಸದೆ ಕೃಷಿಯೇತರ ಚಟುವಟಿಕೆ ಮಂಜೂರಾದ ಭೂಮಿಯನ್ನು ಕ್ರಷರ್ ಗೆ ಲೀಸ್ ಕೊಡುತ್ತಿರುವ ಭೂಮಿಯನ್ನು ವಜಾ ಮಾಡುವ ಬಗ್ಗೆ ಸೊರಬ ತಾಲ್ಲೂಕಿನ ಚಂದ್ರಗುತ್ತಿ ಹೋಬಳಿ ತೋರಣಗೊಂಡಕೊಪ್ಪ ಗ್ರಾಮಸ್ಥರು ಅಪರ ಜಿಲ್ಲಾಧಿಕಾರಿ ಅಭಿಷೇಕ್ ಅವರಿಗೆ ಮನವಿ ಸಲ್ಲಿಸಿದರು.
ತೋರಣಗೊಂಡನಕೊಪ್ಪ ಗ್ರಾಮದ ಸನಂ 8ರಲ್ಲಿ 4:38 ಎಕರೆ ಜಾಗ ಬೇರೆ ಗ್ರಾಮದವರೊಬ್ಬರಿಗೆ 2019ರಲ್ಲಿ ಸರ್ಕಾರದಿಂದ ಮಂಜೂರಾಗಿದ್ದು, ಅಸಲಿ ಆ ವ್ಯಕ್ತಿ ತಮಗೆ ಮಂಜೂರಾದ ಜಾಗೆಯಲ್ಲಿ ಇದುವರೆವಿಗೂ ಯಾವುದೇ ಕೃಷಿ ಚಟುವಟಿಕೆ ನಡೆಸಿಲ್ಲ. ಸಾಲದೆಂಬಂತೆ ಈಗ ಈ ಜಾಗೆಯನ್ನು ಜಲ್ಲಿಕ್ರಷರ್ ಗೆ ಲೀಸ್ ಕೊಡಲು ಹೊರಟಿದ್ದು ಇಲ್ಲಿ ಕ್ರಷರ್ ಆದರೆ ಸನಿಹದಲ್ಲೆ ಇರುವ ವಾಸ ಮನೆಗಳು ಮತ್ತು ಅಕ್ಕಪಕ್ಕದ ಗ್ರಾಮಕ್ಕೆ, ಕೃಷಿ ಚಟುವಟಿಕೆಗಳಿಗೆ, ಕುಡಿಯುವ ನೀರು, ಪಕ್ಕದಲ್ಲೇ ಇರುವ ಅರಣ್ಯ, ಅರಣ್ಯ ಜೀವಿಗಳಿಗೆ ಮಾರಕ ಪರಿಣಾಮ ಬೀರಲಿದೆ ಎಂದು ಗ್ರಾಮ ಪ್ರಮುಖ ದಿನೇಶ್ ಭೂಮಿ ವಜಾಗೊಳಿಸುವಂತೆ ಒತ್ತಾಯಿಸಿದ್ದಾರೆ.
ಕ್ರಷರ್ ಮತ್ತು ಗಣಿಗಾರಿಕೆ ದುಷ್ಪರಿಣಾಮ ದಿಂದ ಸಮೀಪದ ಬಸ್ತಿಕೊಪ್ಪ ಗ್ರಾಮಸ್ಥರು ಸಾಂಕ್ರಮಿಕ ಶ್ವಾಸಕೋಶದ ಕಾಯಿಲೆಗೆ ತುತ್ತಾಗಿದ್ದಲ್ಲದೆ ಇಲ್ಲಿಯವರೆಗೂ ಅನೇಕ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಇದೇ ಸ್ಥಿತಿ ನಮ್ಮ ಗ್ರಾಮಕ್ಕೂ ಬರಲು ನಾವು ಬಿಡುವುದಿಲ್ಲ, ಕೃಷಿ ಚಟುವಟಿಕೆಗಳಿಗೆ, ಗ್ರಾಮ ಪರಿಸರಕ್ಕೆ ಧಕ್ಕೆಯಾಗದ ಇಂತಹ ಯಾವುದೇ ಚಟುವಟಿಕೆ ಇಲ್ಲಿ ನಡೆಯಕೂಡದು. ಕೂಡಲೇ ಗ್ರಾಮದ ಸ್ವಾಸ್ಥ್ಯಕ್ಕಾಗಿ ಸನಂ 8 ವಜಾಗೊಳಿಸಿ ಗ್ರಾಮದ/ಸರ್ಕಾರದ ಸ್ವತ್ತಾಗಿ ಉಳಿಸಿ, ಇದಕ್ಕೂ ಮಿಕ್ಕು ಕ್ರಷರ್ ಗೆ ಅವಕಾಶ ಕೊಟ್ಟಲ್ಲಿ, ಕೃಷಿಯ ಅಗತ್ಯವಿಲ್ಲದವನಿಗೆ ಕೃಷಿ ಭೂಮಿಯಲ್ಲಿ ಮುಂದುವರೆಯಲು ಅವಕಾಶ ನೀಡಿದಲ್ಲಿ ಉಗ್ರ ಹೋರಾಟಕ್ಕೂ ಸಿದ್ಧರಿದ್ದೇವೆ ಎಂದು ಗ್ರಾಮದ ರಾಕೇಶ್ ಎಚ್ಚರಿಸಿದ್ದಾರೆ.
ತೋರಣಗೊಂಡನಕೊಪ್ಪ ಗ್ರಾಮಸ್ಥರಾದ ದಿನೇಶ್, ರಾಕೇಶ್, ಜಗದೀಶ್, ಸಲೀಂ, ಮಂಜುಶೇಟ್, ದೇವರಾಜಗೌಡ, ಲಕ್ಷ್ಮಣ ಮೊದಲಾದವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post