ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
“ಮುಂದಿನ ಜಗತ್ತು ಜ್ಞಾನ ಮತ್ತು ಕೌಶಲ್ಯಗಳಿಂದ ಕೂಡಿದ್ದು, ವಿದ್ಯಾರ್ಥಿಯ ಜ್ಞಾನ, ಕೌಶಲ್ಯ, ಸೃಜನಶೀಲತೆ ಜೊತೆಗೂಡಿ ರೂಪಿತಗೊಂಡಾಗ ಮಾತ್ರ ಜೀವದಲ್ಲಿ ಸಾಫಲ್ಯ ಪಡೆಯಲು ಸಾಧ್ಯ ಹಾಗೂ ನವ ಭವ್ಯಭಾರತ ನಿಮಾಣ ಮತ್ತು ಅಭಿವೃದ್ಧಿಯಲ್ಲಿ ಯುವ ಜನಾಂಗದ ಪಾತ್ರ ಹಿರಿಯದಾಗಿದೆ” ಎಂದು ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಪ್ರತಿನಿಧಿಗಳಾದ ಡಾ. ಶಿವಕುಮಾರ್ ಹೇಳಿದರು.
ಪಟ್ಟಣದ ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಅಂತರ್ ಕಾಲೇಜು ಸ್ಪರ್ಧೆಗಳ ಉತ್ಸವ ಯುಕ್ತಿ-1.೦, ಉದ್ಘಾಟಿಸಿ ಮಾತನಾಡಿದ ಅವರು “ನಮ್ಮ ಜೀವನವನ್ನು ನಾವೇ ರೂಪಿಸಿಕೊಳ್ಳಬೇಕು. ನಾಳೆಯ ಕನಸ್ಸಿನೊಂದಿಗೆ ಹೆಜ್ಜೆ ಇಡಬೇಕು. ಶೈಕ್ಷಣಿಕ ಕಾರ್ಯಕ್ಷಮತೆ, ಉತ್ತಮ ಸಂವಹನ ಹಾಗೂ ಬದಲಾವಣೆಯೊಂದಿಗೆ ಹೊಂದಿಕೊಳ್ಳುವ ಅರಿವು ವ್ಯಕ್ತಿಯನ್ನು ಬಹು ಎತ್ತರಕ್ಕೆ ಕೊಂಡೊಯ್ಯುತ್ತದೆ” ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಶ್ರೀ ರಮೇಶ ಡಿ ಅವರು ಮಾತನಾಡಿ “ವಿದ್ಯಾರ್ಥಿ ದಿಶೆಯಲ್ಲಿಯೇ ಶಿಸ್ತು ಮತ್ತು ಸಮಯ ಪ್ರಜ್ಞೆಗಳನ್ನು ಮೈಗೂಡಿಸಿಕೊಂಡು ಸಮಾಜದ ಸತ್ಪ್ರಜೆಗಳಾಗಿ ಬೆಳಗಬೇಕು. ಇಂದಿನ ವಿದ್ಯಾರ್ಥಿಗಳು ಸಕರಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಉತ್ತಮ ಬದುಕನ್ನು ರೂಪಿಸಿಕೊಳ್ಳಬೇಕು” ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕುಮದ್ವತಿ ವಿಜ್ಞಾನ ಹಾಗೂ ವಾಣಿಜ್ಯ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಾ. ವೀರೇಂದ್ರ ಎಂ ಮಾತನಾಡಿ “ಇಂದಿನ ಯುವ ಶಕ್ತಿ ಭಾರತದ ಭವ್ಯ ಪರಂಪರೆಯ ಮತ್ತು ಅಸ್ಮಿತೆಯ ಪ್ರತಿನಿಧಿಗಳಾಗಬೇಕು. ಜಗತ್ತೇ ಅವರ ಪ್ರತಿಭೆಯನ್ನು ಪ್ರಶಂಸಿಸಬೇಕು. ಅಂತ ಕನಸ್ಸು ನಿಮ್ಮಲ್ಲಿರಲಿ” ಎಂದರು.
ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದ ಪ್ರಾಚಾರ್ಯರಾದ ಡಾ. ರವೀಂದ್ರ ಕೆ.ಸಿ “ಕುಮದ್ವತಿ ಪ್ರಥಮ ದರ್ಜೆ ಕಾಲೇಜು ಪ್ರತಿ ದಿನವು ಪ್ರಗತಿಯತ್ತಾ ದಾಪುಗಾಲನ್ನು ಹಾಕುತ್ತಾ ಸಾಗಿದ್ದು, ನಮ್ಮ ಶೈಕ್ಷಣಿಕವಾದ ಪ್ರಗತಿ ಶ್ರೇಷ್ಟವಾಗಿದೆ. ಪ್ರತಿವರ್ಷ ನಮ್ಮ ವಿದ್ಯಾರ್ಥಿಗಳು ರ‍್ಯಾಂಕ್‌ಗಳನ್ನು ಗಳಿಸುತ್ತಿದ್ದಾರೆ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ನಮ್ಮ ವಿದ್ಯಾರ್ಥಿಗಳು ಮುಂದಿದ್ದು, ಗ್ರಾಮೀಣ ಭಾಗ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ” ಎಂದರು.
ವೇದಿಕೆಯಲ್ಲಿ ಪ್ರಾಧ್ಯಾಪಕರಾದ ಕೋಟೋಜಿರಾವ್ ಆರ್ ಉಪಸ್ಥಿತರಿದ್ದು, ಕು. ಪ್ರಜ್ಞಾ ಪ್ರಾರ್ಥಿಸಿ ಸುಮಯ್ಯಬಾನು ಸ್ವಾಗತಿಸಿ, ಹನಿಯಾ ನಿರೂಪಿಸಿ ವರ್ಣ ವಂದಿಸಿದರು. ವಿವಿಧ ಪದವಿ ಪೂರ್ವ ಕಾಲೇಜುಗಳಿಂದ ಆಗಮಿಸಿದ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಎಲ್ಲಾ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ವಿವಿಧ ಕಾಲೇಜುಗಳ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















