ಕಲ್ಪ ಮೀಡಿಯಾ ಹೌಸ್ | ಕಾನೂನು ಕಲ್ಪ – ಪ್ರಶ್ನೋತ್ತರ ಅಂಕಣ |ಚೆಕ್ ಬೌನ್ಸ್ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಸುಪ್ರೀಂ ಕೋರ್ಟ್ ನೂತನ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಸಂಜಬಿಜ್ ತರಿ ವಿರುದ್ಧ ಕಿಶೋರ್ ಬೋರ್ಕರ್ ಪ್ರಕರಣದ ವಿಚಾರಣೆಯಲ್ಲಿ, ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳಾದ ಶ್ರೀ ಮನಮೋಹನ್ ಹಾಗು ಶ್ರೀ ಎನ್ ವಿ ಅಂಜಾರಿಯಾ ಅವರನ್ನು ಒಳಗೊಂಡ ನ್ಯಾಯಪೀಠ ದೇಶಾದ್ಯಂತ ಅದರಲ್ಲೂ ಮಹಾನಗರಗಳ ಜಿಲ್ಲಾ ಕೋರ್ಟುಗಳಲ್ಲಿ ಚೆಕ್ ಬೌನ್ಸ್ ಪ್ರಕರಣಗಳು ದೊಡ್ಡ ಸಂಖ್ಯೆಯಲ್ಲಿ ಬಾಕಿ ಉಳಿದಿರುವ ವಿಚಾರವನ್ನು ಪರಿಗಣನೆಗೆ ತೆಗೆದುಕೊಂಡು, ಈ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಆರೋಪಿಗೆ ಸಮನ್ಸ್ ಜಾರಿಯಲ್ಲಿನ ಸಮಸ್ಯೆಗಳೂ ಕೂಡ ಚೆಕ್ ಬೌನ್ಸ್ ಕೇಸುಗಳ ಇತ್ಯರ್ಥದಲ್ಲಿ ಆಗುತ್ತಿರುವ ವಿಳಂಬಕ್ಕೆ ಪ್ರಮುಖ ಕಾರಣ ಎಂದೇ ವಿಶ್ಲೇಷಿಸಲಾಗುತ್ತಿದೆ. ಇದನ್ನು ಪರಿಗಣನೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್, ನೂತನ ಮಾರ್ಗಸೂಚಿಗಳ ಪ್ರಕಾರ, ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಕಾಯಿದೆಯ ಕಲಂ 138ರ ಅಡಿ ದಾಖಲಾಗುವ ಪ್ರಕರಣದಲ್ಲಿ, ಆರೋಪಿಗೆ ಸಾಂಪ್ರದಾಯಿಕ ಮಾದರಿಯ ಸಮನ್ಸ್ ಜಾರಿ ವ್ಯವಸ್ಥೆಯಾದ ರಿಜಿಸ್ಟರ್ಡ್ ಪೋಸ್ಟ್ ಅಲ್ಲದೆ, ದಸ್ತಿ ಸಮನ್ಸ್ ಅಂದರೆ ವೈಯಕ್ತಿಕ ಸಮನ್ಸ್ (hand summons) ಜಾರಿ ಮಾಡಲು ಕೂಡ ವ್ಯವಸ್ಥೆ ಕಲ್ಪಿಸಬೇಕು ಎಂದಿದೆ.
ಅಲ್ಲದೆ, ಇಲೆಕ್ಟ್ರಾನಿಕ್ ಮಾಧ್ಯಮಗಳಾದ ಈ ಮೇಲ್, ವಾಟ್ಸಪ್ಪ್ ಸಂದೇಶಗಳ ಮೂಲಕವೂ ಸಮನ್ಸ್ ಜಾರಿ ಮಾಡಲು ಭಾರತೀಯ ನಾಗರೀಕ ಸುರಕ್ಷಾ ಸಂಹಿತೆಯ ಕಲಂ 64(1), 64(2) ಅಥವಾ 530(1)ರ ಅಡಿಯಲ್ಲಿ ಏನಾದರೂ ನಿಯಮಗಳು ಜಾರಿಯಲ್ಲಿದ್ದರೆ, ವಿಚಾರಣಾ ನ್ಯಾಯಾಲಯ ಇಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಸಮನ್ಸ್ ಜಾರಿಗೆ ಅವಕಾಶ ಕಲ್ಪಿಸಬೇಕು ಎಂದಿದೆ. ಚೆಕ್ ಬೌನ್ಸ್ ಪ್ರಕರಣಗಳ ದೂರಿನಲ್ಲಿ ಆರೋಪಿಯ ಈ ಮೇಲ್, ವಾಟ್ಸಪ್ಪ್ ವಿವರಗಳನ್ನು ನಮೂದಿಸಬೇಕು ಹಾಗು ಈ ನಿಟ್ಟಿನಲ್ಲಿ ಒಂದು ಪ್ರಮಾಣಪತ್ರವನ್ನು ಕೂಡ ಸಲ್ಲಿಸಬೇಕು ಎಂದು ಹೇಳಿದೆ. ಮೇಲೆ ನಮೂದಿಸಿದ ಮಾಧ್ಯಮಗಳ ಮೂಲಕ ಆರೋಪಿಗೆ ಸಮನ್ಸ್ ಜಾರಿಯಾದ ಬಗ್ಗೆ ಕೂಡ ದೂರುದಾರ ಒಂದು ಅಫಿಡವಿಟ್ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.ಕೇಸುಗಳ ತ್ವರಿತ ಇತ್ಯರ್ಥಕ್ಕೆ, ಪ್ರತಿ ಜಿಲ್ಲಾ ಹಾಗು ಸತ್ರ ನ್ಯಾಯಾಲಯ, ಚೆಕ್ ಹಣದ ಸುಲಭ ಮರುಪಾವತಿಗೆ QR code ಹಾಗು UPI payment links ಮೂಲಕ ವ್ಯವಸ್ಥೆ ಮಾಡಬೇಕು. ಸಮನ್ಸ್ ನಲ್ಲಿಯೇ ಆರೋಪಿಗೆ ಸುಲಭ ಮರುಪಾವತಿ ವಿಧಾನಗಳ ಬಗ್ಗೆ ತಿಳಿಸಿ, ಪ್ರಕರಣದ ಶೀಘ್ರ ಮುಕ್ತಾಯಕ್ಕೆ ಪ್ರಯತ್ನಿಸಬೇಕು.
ಕಾಯಿದೆಯ ಕಲಂ 143ರ ಉದ್ದೇಶ Summary Trial ಅಂದರೆ ಸಂಕ್ಷಿಪ್ತ ವಿಚಾರಣೆಯ ಮೂಲಕ ಪ್ರಕರಣದ ಶೀಘ್ರ ಇತ್ಯರ್ಥ. ಸಂಕ್ಷಿಪ್ತ ವಿಚಾರಣೆಯನ್ನು ಸಮನ್ಸ್ ವಿಚಾರಣೆಯಾಗಿ ಕೈಗೆತ್ತಿಕೊಳ್ಳಲು ವಿಚಾರಣಾ ನ್ಯಾಯಾಲಯ ಇಚ್ಚಿಸಿದಲ್ಲಿ, ಅದಕ್ಕೆ ಕಾರಣಗಳನ್ನು ನೀಡಬೇಕು ಎಂದೂ ಕೂಡ ಸುಪ್ರೀಂ ಕೋರ್ಟ್ ಹೇಳಿದೆ.
ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಕಾಯಿದೆಯಲ್ಲಿ ಚೆಕ್ ಅಮಾನ್ಯಗೊಂಡು ಹಣ ಪಾವತಿಯಾಗದಿದ್ದಾಗ ನೀಡಲಾಗುವ ಶಿಕ್ಷೆ, ಪ್ರತಿಕಾರ ಪಡೆಯುವ ಸಾಧನವಲ್ಲ, ಬದಲಾಗಿ ಹಣ ಮರುಪಾವತಿ ಖಚಿತಪಡಿಸಿಕೊಳ್ಳಲು ಹಾಗು ಹಣಪಾವತಿಯ ಸಾಧನವಾಗಿ ಚೆಕ್ಕುಗಳ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವುದಾಗಿದೆ, ಎಂದೂ ಕೂಡ ಸುಪ್ರೀಂ ಕೋರ್ಟ್ ಹೇಳಿದೆ.
ದೂರಿನೊಟ್ಟಿಗೆ ಪ್ರಕರಣದ ಸಾರಾಂಶ ವರದಿ ಸಲ್ಲಿಸುವುದನ್ನು ಖಡ್ಡಾಯಗೊಳಿಸಬೇಕು ಎಂದು ಕೂಡ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಆತ್ಮೀಯ ಓದುಗರೇ,
ಕಲ್ಪ ಮೀಡಿಯಾ ಹೌಸ್(ರಿ.) ಅಡಿಯಲ್ಲಿ ಪ್ರಕಟವಾಗುತ್ತಿರುನ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದಲ್ಲಿ ನಮ್ಮ ಓದುಗರಿಗಾಗಿ `ಕಾನೂನು ಕಲ್ಪ’ ಎಂಬ ಹೊಸ ಅಂಕಣವನ್ನು ಆರಂಭಿಸಲಾಗಿದ್ದು, ಪ್ರತಿ ಶುಕ್ರವಾರ ಪ್ರಕಟವಾಗಲಿದೆ. ಶಿವಮೊಗ್ಗ-ಭದ್ರಾವತಿಯ ಖ್ಯಾತ ವಕೀಲರು ಹಾಗೂ ಹಿರಿಯ ಪತ್ರಕರ್ತರೂ ಆಗಿರುವ ಶ್ರೀ ವೀರೇಂದ್ರ ಪಿ.ಎಂ. ಅವರು ಯಾವುದೇ ರೀತಿಯ ಕಾನೂನು ಸಮಸ್ಯೆಗಳು, ಕಾನೂನಿನ ಕುರಿತಾಗಿನ ಮಾರ್ಗದರ್ಶನ ಮಾಡಲಿದ್ದಾರೆ. ಸಾರ್ವಜನಿಕರು ತಮಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದರೆ ನಮಗೆ ಕಳುಹಿಸಬಹುದು. ಆ ಪ್ರಶ್ನೆಗಳಿಗೆ ವಕೀಲರಾದ ಶ್ರೀ ವೀರೇಂದ್ರ ಪಿ.ಎಂ. ಅವರು ಉತ್ತರ ನೀಡಲಿದ್ದಾರೆ. ನಿಮ್ಮ ಪ್ರಶ್ನೆಗಳು ಸ್ಪಷ್ಟ, ಸ್ಪುಟ, ನೇರವಾಗಿರಲಿ.
ನಿಮ್ಮ ಪ್ರಶ್ನೆಗಳನ್ನು ಈ ಕೆಳಗಿನ ವಾಟ್ಸಪ್ ಸಂಖ್ಯೆ 9481252093 (ವಾಟ್ಸಪ್ ಮಾತ್ರ) ಅಥವಾ ಇ-ಮೇಲ್ info@kalpa.news ಗೆ ಕಳುಹಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post