ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗೋವರ್ಧನ ಟ್ರಸ್ಟ್ #Govardhana Trust ಮೂಲಕ ಶಿವಮೊಗ್ಗದಲ್ಲಿ ಆರಂಭವಾಗಿರುವ ಗೋಸೇವೆ ಇಲ್ಲಿಗೆ ಮಾತ್ರ ಸೀಮಿತವಾಗದೇ ರಾಜ್ಯದಾದ್ಯಂತ ವಿಸ್ತಾರವಾಗಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ #K S Eshwarappa ಆಶಿಸಿದರು.
ಗೋವರ್ಧನ ಟ್ರಸ್ಟ್ ವತಿಯಿಂದ ಗೋಂದಿ ಚಟ್ನಹಳ್ಳಿಯಲ್ಲಿ ಗೋಮಾತೆಗಾಗಿ ಮೇವು ಬೆಳೆಯುವ ಕಾರ್ಯಕ್ರಮದ ಭೂಮಿ ಪೂಜೆಯ ನಂತರ ಅವರು ಮಾತನಾಡಿದರು.
ಗುರುಪೂರ್ಣಿಮೆಯಂದು ಈ ವಿಚಾರ ಪ್ರಸ್ತಾಪವಾದಾಗ ಇದು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯುತ್ತದೆ ಎಂದುಕೊಂಡಿರಲಿಲ್ಲ. ಇದನ್ನು ರಾಜಕೀಯಕ್ಕೆ ಮಾಡುತ್ತೇವೆ ಎಂದು ಯಾರು ಏನೇ ಹೇಳಿಕೊಳ್ಳಲಿ ನಮಗೆ ಅದರ ಚಿಂತೆಯಿಲ್ಲ ಎಂದರು.
ಗೋವು ನಮ್ಮ ತಾಯಿ. ಗೋವಿನ ಸೇವೆ ನಮ್ಮ ಕರ್ತವ್ಯ. ಅದಕ್ಕಾಗಿ ನಾವು ಇಂತಹ ಕಾರ್ಯವನ್ನು ಮಾಡಲೇಬೇಕು. ಈ ಪುಣ್ಯ ಕಾರ್ಯ ಒಂದು ತಿಂಗಳು, ಒಂದು ವರ್ಷ ಹೀಗೆ ಒಂದು ನಿಗದಿತ ಅವಧಿಯದ್ದಲ್ಲ. ಬದಲಾಗಿ ನಾವು, ನೀವುಗಳು ಬದುಕಿರುವವರೆಗೂ ಇದನ್ನು ನಡೆಸಿಕೊಂಡು ಹೋಗಬೇಕು ಎಂದರು.
ಶಿವಮೊಗ್ಗದಲ್ಲಿ ಆರಂಭವಾಗಿರುವ ಈ ಕಾರ್ಯ ಇಲ್ಲಿಗೆ ಮಾತ್ರ ಸೀಮಿತವಾಗಬಾರದು. ಬದಲಾಗಿ ರಾಜ್ಯದಾದ್ಯಂತ ಇದು ವಿಸ್ತರಣೆಯಾಗಿ, ಎಲ್ಲೆಡೆಯೂ ಸಹ ಗೋಸೇವಾ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಆಶಿಸಿದರು.
ಮೇವು ಬೆಳೆಯುವ ಕಾರ್ಯಕ್ಕೆ ಭೂಮಿ ಪೂಜೆ ನೆರವೇರಿಸಿ ನಂತರದ ಕಾರ್ಯಕ್ರಮದಲ್ಲಿ ಮಾತನಾಡಿದ ಹೊಂಬುಜ ಶ್ರೀಕ್ಷೇತ್ರದ ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮಿಜಿ, ರಾಜಕೀಯ, ಸಾಮಾಜಿಕ, ಧಾರ್ಮಿಕ ಹೀಗೆ ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಹಿರಿಯರಾದ ಕೆ.ಎಸ್. ಈಶ್ವರಪ್ಪನವರು ಈಗ ಗೋಮಾತೆಯ ಸೇವೆಗಾಗಿ ಇಂತಹ ಒಂದು ಮಹತ್ ಕಾರ್ಯಕ್ಕೆ ಮುಂದಾಗಿರುವುದು ಸಂತೋಷದ ವಿಚಾರ ಎಂದರು.
ಹಿಂದಿನ ಕಾಲದಲ್ಲಿ ಗೋವಿನ ಮೇವಿಗಾಗಿ ಗೋಮಾಳಗಳು ಇರುತ್ತಿದ್ದವು. ಆದರೆ, ಈಗ ಅವುಗಳೆಲ್ಲಾ ಮಾಯವಾಗಿ, ಗೋವುಗಳನ್ನು ಕಟ್ಟಿಹಾಕಿ ಮೇವು ಹಾಕುವಂತಹ ಪರಿಸ್ಥಿತಿ ಬಂದಿದೆ. ಆದರೆ, ಎಲ್ಲ ಗೋವುಗಳನ್ನು ಕಟ್ಟಿ ಹಾಕಿ, ಅವುಗಳಿಗೆ ಬೇಕಾದ ಮೇವು ಒದಗಿಸುವುದು ಅಷ್ಟು ಸುಲಭದ ವಿಚಾರವಲ್ಲ. ಮೇವು ಸಂಗ್ರಹಿಸುವುದು ಇಂದಿನ ಪರಿಸ್ಥಿತಿಯಲ್ಲಿ ಕಷ್ಟದ ವಿಚಾರವಾಗಿದೆ ಎಂದರು.
ಈಗಿನ ಪರಿಸ್ಥಿತಿಯಲ್ಲಿ ಮಲೆನಾಡಿನಲ್ಲಿಯೂ ಸಹ ಗೋವಿಗೆ ಮೇವು ಸಿಗುವುದು ಕಷ್ಟವಿದೆ. ನಮ್ಮ ಮಠದಲ್ಲೂ ಸಹ ಗೋವುಗಳಿಗೆ ಮೇವು ಕಷ್ಟವಾಗಿತ್ತು. ಹೀಗಾಗಿ, ಇದಕ್ಕಾಗಿಯೇ ನಾವು 20 ಎಕರೆಯಲ್ಲಿ ಹುಲ್ಲನ್ನು ಬೆಳಸುತ್ತೇವೆ ಎಂದರು.
ಇಂತಹ ಪರಿಸ್ಥಿತಿಯಲ್ಲಿ ಹಲವು ಗೋಶಾಲೆಗಳಲ್ಲಿ ಸಮೀಕ್ಷೆ ಮಾಡಿ, ಇರುವ ಗೋಶಾಲೆಗಳಿಗೆ ಸಹಕಾರ ನೀಡುವ ಸಲುವಾಗಿ ಗೋವರ್ಧನ ಟ್ರಸ್ಟ್ ಮೂಲಕ ಗೋಸೇವೆಗೆ ಮುಂದಾಗಿರುವದು ಸಂತೋಷದ ವಿಚಾರ ಎಂದರು.
ಪ್ರಮುಖರಾದ ಕೆ.ಈ. ಕಾಂತೇಶ್ ಮಾತನಾಡಿ, ಈಗ ಮೂರು ಗೋಶಾಲೆಗಳಿಗೆ ಮೇವು ಪೂರೈಸಲಾಗುತ್ತದೆ. ತಮಗೂ ಸಹ ಮೇವು ಪೂರೈಸುವಂತೆ ಜ್ಞಾನೇಶ್ವರಿ ಗೋಶಾಲೆಯವರು ಕೇಳಿದ್ದಾರೆ. ಮುಂದಿನ ದಿನಗಳಲ್ಲಿ ಈ ಗೋಶಾಲೆಗೂ ಸಹ ಮೇವು ಪೂರೈಕೆ ಮಾಡಲಾಗುವುದು ಎಂದರು.
ಇಂತಹ ಒಂದು ಕಾರ್ಯಕ್ಕೆ ನಮ್ಮ ಜೊತೆ ಕೈಜೋಡಿಸಿರುವ ನಮ್ಮ ಸ್ನೇಹಿತರಾದ ರಮೇಶ್ ಅವರ ಸೇವೆ ದೊಡ್ಡದಿದೆ. ಅದೇ ರೀತಿಯಲ್ಲಿ ಗೋಸೇವೆಯ ಈ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶಿವಶಂಕರ್, ಉಮಾಪತಿ, ಯೋಗ ಗುರು ರುದ್ರರಾಧ್ಯರು, ನಟರಾಜ್ ಭಾಗವತ್, ಉಮೇಶ್ ಆರಾಧ್ಯ, ಶೇಷಾಚಲ, ಗುರುಗುಹ ನಾಗರಾಜ್, ಪಾಂಡೆ, ಶಿವಾನಂದಪ್ಪ, ನವ್ಯಶ್ರೀ ನಾಗೇಶ್, ಕುಬೇರಪ್ಪ, ಸತ್ಯಣ್ಣ, ಸೋಮಣ್ಣ, ಜಾಥವ್, ವಿನೋದ್, ರಮೇಶ್ ಬಾಬು, ವಿರೂಪಾಕ್ಷ, ಅರುಣ್, ಉಮಾಮೂರ್ತಿ, ಶುಭ ರಾಘವೇಂದ್ರ, ಸಂಧ್ಯಾ ಹಾಗೂ ಜ್ಞಾನೇಶ್ವರಿ ಗೋಶಾಲೆಯ ಹಾಗೂ ಗೋವರ್ಧನ ಟ್ರಸ್ಟ್ ಸದ್ಯಸರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post