ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ದೇಶಕಟ್ಟುವಲ್ಲಿ ಅಪಾರ ಕೊಡುಗೆ ನೀಡಿರುವ ಮತ್ತು ತಮ್ಮ ಏಳಿಗೆ ಲೆಕ್ಕಿಸದೆ ತಮ್ಮನ್ನು ನಂಬಿದವರ ಸರ್ವತೋಮುಖ ಏಳಿಗೆಗೆ ಅಹರ್ನಿಷ ದುಡಿಯುವ ಸ್ವಾಭಿಮಾನಿ ವಿಪ್ರರು, ಇನ್ನು ಮುಂದೆ ಕೇವಲ ‘ಕಿಂಗ್ ಮೇಕರ್’ ಆಗಿ ಉಳಿಯದೆ ‘ಕಿಂಗ್’ಗಳಾಗಬೇಕು ಎಂದು ಜಯನಗರ ವಿಧಾನಸಭಾಕ್ಷೇತ್ರದ ಶಾಸಕ ಸಿ.ಕೆ. ರಾಮಮೂರ್ತಿ ಅವರು ಮಹತ್ವದ ಕರೆ ನೀಡಿದರು.
ಬೆಂಗಳೂರಿನ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಗಾಯತ್ರಿ ಭವನದಲ್ಲಿ, ವಿಪ್ರ ಸಮಾಜದ ರಾಜಕೀಯ ಆಸಕ್ತ ಅಭ್ಯರ್ಥಿಗಳಿಗೆ ಹಮ್ಮಿಕೊಂಡ ‘ರಾಜತಂತ್ರ’ ಎನ್ನುವ ಒಂದು ದಿನದ ವಿಶೇಷ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬ್ರಾಹ್ಮಣ ರಾಜಕೀಯ ವೇದಿಕೆ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಹಾಗೂ ವಿಕಾಸ ಸಮಾನ ಮನಸ್ಕ ಮಾಧ್ಯಮ ಪ್ರತಿನಿಧಿಗಳ ಸಂಘಟನೆ ಜಂಟಿಯಾಗಿ ಈ ಕಾರ್ಯಾಗಾರವನ್ನು ಆಯೋಜಿಸಿದ್ದವು. ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ ಸುಮಾರು 70ಕ್ಕೂ ಹೆಚ್ಚು ಮಂದಿ ರಾಜಕೀಯ ಆಸಕ್ತರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಮೂಲಭೂತ ಕರ್ತವ್ಯ, ಜವಾಬ್ದಾರಿ, ಜನರ ಮಧ್ಯೆ ತಮ್ಮನ್ನು ಗುರುತಿಸಿಕೊಳ್ಳುವುದು, ಮತ್ತು ಸಮಾಜಮುಖಿಯಾಗಿ ಇರುವುದು ಹೇಗೆ ಎಂಬುದರ ಕುರಿತು ಕಾರ್ಯಾಗಾರದಲ್ಲಿ ತಿಳಿಸಿಕೊಡಲಾಯಿತು. ಯಾವುದೇ ಪಕ್ಷದಿಂದ ಸ್ಪರ್ಧಿಸಿದರೂ ಜನಪರ ಕಾರ್ಯಗಳನ್ನು ಮಾಡುವ ಹಾಗೂ ಸದ್ಗುಣ ರಾಜಕಾರಣಿಯೆಂದು ಗುರುತಿಸಿಕೊಳ್ಳುವ ನಿಟ್ಟಿನಲ್ಲಿ, ರಾಜಕೀಯದ ಆಳವಾದ ಅಧ್ಯಯನ ಮತ್ತು ‘ಹೋಮ್ ವರ್ಕ್’ ಮಾದರಿಯ ಯೋಜನೆಗಳನ್ನು ಸಿದ್ಧಪಡಿಸಿಕೊಳ್ಳುವಂತೆ ಸಿ.ಕೆ. ರಾಮಮೂರ್ತಿ ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮತ್ತು ಪ್ರಮುಖ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷರಾದ ಎಸ್. ದತ್ತಾತ್ರಿ ಅವರು, ಸಾಮಾಜಿಕ ಸಮಸ್ಯೆಗಳು ಮತ್ತು ರಾಜಕೀಯದ ಪರಿಣಾಮಗಳು ಎನ್ನುವ ವಿಷಯದ ಕುರಿತು ಮಾತನಾಡಿದರು.
ರಾಜಕೀಯಕ್ಕೆ ಬರುವ ಪ್ರತಿಯೊಬ್ಬರೂ ಯಾವುದೇ ಸಂಕೋಚವಿಲ್ಲದೆ ಜನಸೇವೆಯಲ್ಲಿ ತೊಡಗಿಕೊಳ್ಳಬೇಕು. ಸಮಾಜದಲ್ಲಿ ಇರುವ ಸಾರ್ವತ್ರಿಕ ಸಮಸ್ಯೆಯೇ ಆಗಲಿ, ಖಾಸಗಿ ಸಮಸ್ಯೆಗಳೇ ಆಗಲಿ ಸೂಕ್ತವಾಗಿ ಸ್ಪಂದಿಸುವ ಸೂಕ್ಷ್ಮಮತಿತ್ವವನ್ನು ಹೊಂದಿರಬೇಕು. ಜನಪರ ಕೆಲಸಗಳ ಮೂಲಕ ತಮ್ಮ ಕ್ಷೇತ್ರದ ಜನರ ಮನಸನ್ನು ಗೆಲ್ಲುವ ಕೆಲಸ ಮಾಡಬೇಕಿದೆ. ಸಮಸ್ಯೆಗಳಿಗೆ ಸ್ಪಂದಿಸುವುದರ ಜೊತೆ ಪರಿಹಾರಕ್ಕೂ ಮುಂದಾಗಬೇಕು. ಹಾಗೆ ಮಾಡಿದಾಗ ಮಾತ್ರ ರಾಜಕೀಯವಾಗಿ ಗಟ್ಟಿಯಾಗಿ ಜನರ ಮಧ್ಯ ನಿಲ್ಲುವುದಕ್ಕೆ ಸಾಧ್ಯ ಎಂದರು.
ಹಿರಿಯ ಪತ್ರಕರ್ತ ಹಾಗೂ ನೋಬ್ಲಿ ಕ್ರೀಮ್ ಸಂಸ್ಥೆಯ ಪ್ರಾಜೆಕ್ಟ್ ಮ್ಯಾನೇಜರ್ ಶ್ರೀನಾಥ್ ಜೋಶಿ ಅವರು ರಾಜಕೀಯದಲ್ಲಿ ಡಿಜಿಟಲ್ ತಂತ್ರಜ್ಞಾನದ ಬಳಕೆ ಎನ್ನುವ ವಿಷಯದಲ್ಲಿ ಮಾತನಾಡಿದರು.
ರಾಜಕಾರಣಿಯಾಗುವುದಕ್ಕೆ ಮುಂದಾದವರು ಸದಾ ತೆರೆದ ಪುಸ್ತಕದಂತೆ ಇರಬೇಕು, ಅವರ ಪ್ರತಿ ಹೆಜ್ಜೆಯೂ ಜನರಿಗೆ ತಿಳಿಯುವಂತಿರಬೇಕು. ಸಾಮಾಜಿಕ ಮಾಧ್ಯಮಗಳನ್ನು ಬಳಸುವ ಮೂಲಕ ತಮ್ಮ ಪ್ರಚಾರವನ್ನು ಸೂಕ್ತ ರೀತಿಯಲ್ಲಿ ಮಾಡಿಕೊಳ್ಳಬಹುದು ಎಂದರು.
ಇಂದು ನಾವು ವಿದೇಶಿ ಸಾಮಾಜಿಕ ಜಾಲತಾಣಗಳನ್ನು ನಂಬಿದ್ದೇವೆ ಮತ್ತು ಆ ಮೂಲಕ ನಮ್ಮ ಪ್ರಚಾರಗಳನ್ನು ಮಾಡಿಕೊಳ್ಳುವ ಅನಿವಾರ್ಯತೆ ಇದೆ. ಅದೇ ಪ್ರಮಾಣದಲ್ಲಿ ಸಾಮಾಜಿಕ ಜಾಲಗಳಲ್ಲಿ ಫೇಕ್ ಸುದ್ದಿಗಳ ಹಾವಳಿ ತಪ್ಪಿಸಿಕೊಳ್ಳುವುದು ಅತ್ಯಗತ್ಯ. ಇದಕ್ಕಾಗಿ ನೋಬ್ಲಿ ಕ್ರಿಮ್’ನಂತಹ ಸ್ವದೇಶಿ ತಂತ್ರಜ್ಞಾನವನ್ನು ಬಳಸುವ ಮೂಲಕ ಎಲ್ಲಾ ಸೋಶಿಯಲ್ ಮೀಡಿಯಾಗಳನ್ನು ಯಾವ ರೀತಿಯಲ್ಲಿ ಬಳಸಿಕೊಳ್ಳಬೇಕು ಎನ್ನುವ ಮಾಹಿತಿಯನ್ನು ಅವರು ನೀಡಿದರು.
ಬ್ರಾಹ್ಮಣ ರಾಜಕೀಯ ವೇದಿಕೆಯ ಅಧ್ಯಕ್ಷರಾದ ವಿ. ರಾಘವೇಂದ್ರ ಮಯ್ಯ ಅವರು ಮಾತನಾಡಿ, ನಮ್ಮ ನಾಯಕರು ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯವನ್ನು ಸಮದೃಷ್ಟಿಯಲ್ಲಿ ಇರಿಸಿಕೊಂಡು ಹೊರಬರಬೇಕಿದೆ. ವಿಪ್ರ ಸಮಾಜದ ಅಭ್ಯರ್ಥಿಗಳು ಯಾವುದೇ ಪಕ್ಷದಿಂದ ಚುನಾವಣಾ ಕಣಕ್ಕೆ ಇಳಿದರೂ ನಮ್ಮ ಸಮುದಾಯದವರು ಪಕ್ಷಬೇಧ ಮರೆತು ಬೆಂಬಲಿಸಬೇಕಿದೆ ಎಂದು ಕರೆ ನೀಡಿದರು.
ಬ್ರಾಹ್ಮಣ ನಿರ್ಣಾಯಕ ಮತಗಳಿರುವ ಕ್ಷೇತ್ರಗಳಲ್ಲಿ ಬ್ರಾಹ್ಮಣ ಅಭ್ಯರ್ಥಿಗಳಿಗೆ ಅವಕಾಶ ನೀಡುವಂತೆ ಒತ್ತಡ ತರಲಾಗುವುದು ಎನ್ನುವ ಭರವಸೆ ನೀಡಿದರು.
ಕಾಂಗ್ರೆಸ್ ವಕ್ತಾರೆ ಸ್ವಾತಿ ಚಂದ್ರಶೇಖರ ಮಾತನಾಡಿ, ಪಕ್ಷ ಮತ್ತು ಸಮುದಾಯ ಎರಡು ನಮ್ಮ ಮುಂದೆ ಬಂದಾಗ ಸಮುದಾಯವನ್ನೇ ಆಯ್ಕೆ ಮಾಡಿಕೊಳ್ಳಬೇಕು. ಜಾತಿ ವಿಷಯ ಬಿಟ್ಟು ಇಂದು ರಾಜಕೀಯ ನಡೆಯುವುದೇ ಇಲ್ಲ ಎಂದು ಅಭಿಪ್ರಾಯಪಟ್ಟರು.
ಶ್ರೀಮತಿ ಸತ್ಯವಾಣಿ ಅವರು ಮಾತನಾಡಿ, ತಮ್ಮ ಕ್ಷೇತ್ರದಲ್ಲಿರುವ ಸಮಸ್ಯೆಗಳಿಗೆ ನಿರಂತರ ಸ್ಪಂದಿಸುತ್ತಾ ನ್ಯಾಯಾಲಯದ ಮೆಟ್ಟಿಲು ಏರುವ ಮೂಲಕ ಕೆರೆ ಮತ್ತು ರಾಜಕಾಲುವೆಗಳ ಅಕ್ರಮ ಒತ್ತುವರಿಯನ್ನು ತೆರವುಗೊಳಿಸಿ ಜನರ ಬಳಕೆಗೆ ಯೋಗ್ಯವಾಗಿಸಿದ್ದ ಕುರಿತು ತಮ್ಮ ಅನುಭವ ಹಂಚಿಕೊಂಡರು.
ರಾಜಕೀಯ ವಿಶ್ಲೇಷಕ ಹಾಗೂ ರಾಜಕೀಯ ತರಬೇತುದಾರ ಸುಧೀಂದ್ರ ದೇಶಪಾಂಡೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ರಾಜಕೀಯಕ್ಕೆ ಬರುವವರಿಗೆ ಅಧ್ಯಯನ ಮತ್ತು ದೂರದೃಷ್ಟಿತ್ವ ಇರಬೇಕು. ತರಬೇತಿಗೆ ಹಾಜರಾದವರೊಂದಿಗೆ ಸಂವಾದ ನಡೆಸುತ್ತಾ, ಮುಂದಿನ ದಿನಗಳಲ್ಲಿ ಚುನಾವಣೆಗೆ ಯಾವ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳಬೇಕು ಎನ್ನುವ ಮಹತ್ವದ ಮಾಹಿತಿ ನೀಡಿದರು.
ಮುಂಬರುವ ಗ್ರೇಟರ್ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆ ದೃಷ್ಟಿಯಿಂದ, ವಿಪ್ರ ಅಭ್ಯರ್ಥಿಗಳು ಯಾವೆಲ್ಲಾ ಕ್ಷೇತ್ರದಲ್ಲಿ ಕಣಕ್ಕಿಳಿಸಬೇಕು, ಅವರನ್ನು ಗೆಲ್ಲಿಸಿಕೊಂಡು ಬರುವುದಕ್ಕೆ ಏನೆಲ್ಲಾ ತಂತ್ರಗಾರಿಕೆ ರಚಿಸಬೇಕು ಮತ್ತು ಅಭ್ಯರ್ಥಿಗಳು ಏನೆಲ್ಲಾ ‘ಹೋಮ್ ವರ್ಕ್’ ಮಾಡಬೇಕು ಎನ್ನುವ ಮಹತ್ವದ ನಿರ್ಣಯಗಳನ್ನು ಈ ಕಾರ್ಯಾಗಾರದಲ್ಲಿ ಕೈಗೆತ್ತಿಕೊಳ್ಳಲಾಯಿತು.
ಲಕ್ಷ್ಮಿಶ್ರೀ ಪ್ರಾರ್ಥಿಸಿ, ವಿಕಾಸದ ಪ್ರಧಾನ ಕಾರ್ಯದರ್ಶಿ ಹನುಮೇಶ್ ಯಾವಗಲ್ ಕಾರ್ಯಾಗಾರವನ್ನು ನಡೆಸಿಕೊಟ್ಟರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post