ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜ್ಯದಲ್ಲಿ 2028ರ ನಂತರ ಬದಲಾವಣೆ ಅಲೆ ಬೀಸಲಿದೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಭವಿಷ್ಯ ನುಡಿದಿದ್ದಾರೆ.
ನಗರದ ವಿದ್ಯಾನಗರದಲ್ಲಿ ಕೇಸರಿ ಯುವಪಡೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಅವರು ಮಾತನಾಡಿ, 2028ರ ನಂತರ ಜೆಸಿಬಿ ಆಡಳಿತ ರಾಜ್ಯದಲ್ಲಿ ಬರಲಿದೆ. ಯಾವುದೇ ಓಲೈಕೆ ಸರ್ಕಾರಗಳು ಬರುವುದಿಲ್ಲ. 103, 104ರ ಬದಲಾಗಿ 150ಕ್ಕೂ ಹೆಚ್ಚು ಸ್ಥಾನವನ್ನು ಗಳಿಸಲಿರುವ ಪಕ್ಷವೊಂದು ಅಧಿಕಾರ ಹಿಡಿಯಲಿದೆ ಎಂದು ತಿಳಿಸಿದರು.
ಈ ಹಿಂದೆ ನಮ್ಮ ಸರ್ಕಾರವೇ ಅಧಿಕಾರದಲ್ಲಿದ್ದು ಆ ವೇಳೆ ಇಂದು ಸಮಾಜಕ್ಕೆ ಅನ್ಯಾಯವಾದಾಗ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂಬ ಸರ್ಕಾರ ಇತ್ತೇ ವಿನಹ ಯಾವುದೇ ಸಮಾಜಘಾತುಕ ಶಕ್ತಿಗಳನ್ನು ರಕ್ಷಣೆ ಮಾಡುವಂತಹ ಸರ್ಕಾರವಿರಲಿಲ್ಲ. ಈ ಹಿನ್ನೆಲೆಯಲ್ಲಿ 2028ರ ನಂತರ ಹಿಂದೂ ರಕ್ಷಣೆ ಮಾಡುವ ಸರ್ಕಾರ ಅಧಿಕಾರಕ್ಕೆ ಬರಲಿದ್ದು ಪ್ರತಿ ಗ್ರಾಮದಲ್ಲೂ ಹಿಂದೂ ಸಮಾಜೋತ್ಸವವನ್ನು ನಡೆಸಲಾಗುವುದು ಎಂದು ಅವರು ತಿಳಿಸಿದರು.
ನಮ್ಮ ಸರ್ಕಾರ ಬಂದಾಗ ಯಾವುದೇ ಗಣೇಶೋತ್ಸವಕ್ಕೆ ಅನುಮತಿ ಪಡೆಯುವ ಅವಶ್ಯಕತೆ ಇಲ್ಲ. ಯಾವುದೇ ಮಸೀದಿಯ ಮುಂದೆ ಎಷ್ಟು ಹೊತ್ತು ಬೇಕಾದರೂ ಕುಣಿಯುವ ಅವಕಾಶವಿರುತ್ತದೆ. ಈಗಿರುವ ಸರ್ಕಾರ ಸುಪ್ರೀಂ ಕೋರ್ಟ್ ಆದೇಶವಿದ್ದರೂ ಸಹ ಆಜಾದ್ ಕೂಗಲು ನಿಗದಿತ ಸಮಯ ನಿಗದಿಪಡಿಸದೇ ಉಲ್ಲಂಘಿಸುತ್ತಿದೆ. ಇಂತಹ ಸರ್ಕಾರ ಹೆಚ್ಚು ದಿನ ಇರುವುದಿಲ್ಲವೆಂದು ಪುನರುಚ್ಚರಿಸಿದರು.
ನಾನು ಈ ಜಿಲ್ಲೆಗೆ ಬರುತ್ತೇನೆ ಎಂದರೆ ಈ ಹಿಂದೆ ಕೆಲವು ಶಕ್ತಿಗಳು ತಡೆಯುತ್ತಿದ್ದವು. ಆದರೆ ಗಜಾನನ ಮಂಡಳಿಯವರು ವಿದ್ಯಾನಗರದವರೆಗೆ ಕರೆದುಕೊಂಡು ಬಂದಿದ್ದಾರೆ. ಅವರಿಗೆ ನಾನು ಚಿರಋಣಿ. ಅಂತೆಯೇ ಈಶ್ವರಪ್ಪನವರಿಗೂ ಚಿರಋಣಿ ಎಂದು ಬಿಎಸ್‍ವೈ ಕುಟುಂಬದ ಹೆಸರು ಹೇಳದೆ ಚಾಟಿ ಬೀಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post