ಕಲ್ಪ ಮೀಡಿಯಾ ಹೌಸ್ | ಲೇಖನ : ಶಿವಮೊಗ್ಗ ರಾಮ್ |
ಬೆಂಗಳೂರು ನಗರದ ಸಾಯಿ ಆರ್ಟ್ಸ್ ಇಂಟರ್ ನ್ಯಾಷನಲ್ ಸಂಸ್ಥೆಯ ಗುರು ಶ್ವೇತಾ ವೆಂಕಟೇಶ್ ಶಿಷ್ಯೆ ಅದಿತಿ. ವಿ. ರಾವ್ ಅ. 10ರ ಸಂಜೆ ಕಥಕ್ ರಂಗಮಂಚ ಪ್ರವೇಶ ಮಾಡಲಿದ್ದಾರೆ.
ಅಂದು ಸಂಜೆ 6ಕ್ಕೆ ಜಯನಗರ 8ನೇ ಬಡಾವಣೆಯ ಜೆಎಸ್‌ಎಸ್ ಸಭಾಂಗಣದಲ್ಲಿ ನೃತ್ಯ ಪ್ರಸ್ತುತಿ ಸಂಪನ್ನಗೊಳ್ಳಲಿದೆ. ಈ ವಿಶೇಷ ಸಂದರ್ಭದಲ್ಲಿ ಭರತನಾಟ್ಯ- ಕಥಕ್ ಉಭಯ ನೃತ್ಯದಲ್ಲಿ ಉದಯೋನ್ಮುಖರಾಗುತ್ತಿರುವ ಅದಿತಿ ವಿ. ರಾವ್ ಕಲಾಪಯಣ ಮತ್ತು ಕನಸುಗಳ ಕುರಿತ ವಿಶೇಷ ಲೇಖನ.
ಸಾಮಾನ್ಯವಾಗಿ ಎಲ್ಲ ಮಕ್ಕಳೂ ಬಾಲ್ಯದಲ್ಲಿ ನೃತ್ಯ ಮಾಡಲು ಬಯಸುತ್ತಾರೆ. ನನ್ನ ಮಗಳಿಗೂ ಹಾಗೆಯೇ ಡಾನ್ಸ್ ಮಾಡುವುದು ಎಂದರೆ ಬಲು ಇಷ್ಟದ ಹವ್ಯಾಸವಾಗಿತ್ತು. ಹಾಗಾಗಿ ನಾನು ಈಕೆಯನ್ನು ನೃತ್ಯ ಶಾಲೆಗೆ ಸೇರಿಸಿದೆ. ಇದರಲ್ಲೇನೂ ವಿಶೇಷ ಇರಲಿಲ್ಲ. ವಿದುಷಿ ಸುಪರ್ಣಾ ವೆಂಕಟೇಶ ಎಂಬ ಉತ್ತಮವಾದ ಗುರುಗಳು ದೊರೆತರು ಎಂಬುದು ನನಗೆ ತೃಪ್ತಿ ಇತ್ತು. ಆದರೆ ಒಂದು ದಶಕದ ನಂತರ ಮಗಳು ಇಷ್ಟೊಂದು ಮೈಲಿಗಲ್ಲುಗಳನ್ನು ದಾಟಿ ಭರತನಾಟ್ಯ- ಕಥಕ್ ಉಭಯ ನಾಟ್ಯದಲ್ಲೂ ಹಲವರ ಪ್ರಶಂಸೆಗೆ ಪಾತ್ರವಾಗುವಷ್ಟು ಎತ್ತರಕ್ಕೆ ಬೆಳೆಯುತ್ತಾಳೆ ಎಂದುಕೊಂಡಿರಲಿಲ್ಲ. ನರ್ತನವನ್ನೇ ಉಸಿರಾಗಿ ಮಾಡಿಕೊಳ್ಳ್ಳುತ್ತಾಳೆ ಎಂಬ ಬಗ್ಗೆ ನನಗಂತೂ ಕನಸು ಇರಲಿಲ್ಲ. ಆದರೆ ಇಂದು ನನಗೆ ಅಚ್ಚರಿ ಮತ್ತೆ ಅದ್ಭುತ ಎರಡೂ ಆಗಿದೆ. ಎಲ್ಲವೂ ಗುರುಗಳ ಕೃಪೆ ಮತ್ತು ಮಗಳ ಶ್ರದ್ಧೆಯ ಫಲ ಎನ್ನುತ್ತಾರೆ ಗೃಹಿಣಿ ಅಪರ್ಣಾ.
ಮಗಳ ಚಿಕ್ಕ ಚಿಕ್ಕ ಹೆಜ್ಜೆಗಳನ್ನು ಗಮನಿಸುತ್ತಿದ್ದ ಅವರಿಗೆ ಇಂದು ನೂರಾರು ಕಲಾ ರಸಿಕರು ಅಕೆಯ ನರ್ತನ ನೋಡಿ ಚಪ್ಪಾಳೆ ಹೊಡೆಯುವುದನ್ನು ಕಂಡಾಗ ಆನಂದ ಅಪರಿಮಿತ ಆಗಲಾರದೇ? ತಾಯಿಗೆ ಇದಕ್ಕಿಂತಾ ಇನ್ನೇನು ಖುಷಿ ಬೇಕು. ನೃತ್ಯ ಕಲಾವಿದೆ ಅದಿತಿ ಬಗ್ಗೆ ಏನು ಅನಿಸುತ್ತದೆ ಅಮ್ಮ? ಎಂದು ಕೇಳಿದಾಗ ಅವರು ಪ್ರತಿಕ್ರಿಯಿಸಿದ ವಾಕ್ಯಗಳು ಕಡಿಮೆ ಆದರೆ ಅಲ್ಲಿದ್ದ ಆತ್ಮಾನಂದ ಅನನ್ಯ. ಅದು ಹಿಮಾಲಯಕ್ಕಿಂತಾ ಎತ್ತರ. ಹೌದಲ್ಲವೇ? ಭರತನಾಟ್ಯ ಸೀನಿಯರ್, ಎಂಎ (ಡಾನ್ಸ್) ಮುಗಿಸಿ ರಂಗ ಪ್ರವೇಶವನ್ನೂ ಮಾಡಿ, ನಂತರ ಕಥಕ್ ಕಲಿತು ಅದರಲ್ಲೂ ರಂಗ ಮಂಚ್ ಪ್ರವೇಶಕ್ಕೆ ಅಣಿಯಾಗಿರುವ ಅದಿತಿ ರಾವ್‌ಗೆ ಕಲಾ ರಂಗದಲ್ಲಿ ನೂರಾರು ಕನಸುಗಳಿವೆ. ಸಾವಿರಾರು ಆಕಾಂಕ್ಷೆಗಳಿವೆ. ಜನಿಸಿದ ಮನೆ, ಗುರುಮನೆ, ಸೇರಿದ ಪತಿಯ ಮನೆ- ಎಲ್ಲ ಕಡೆಯೂ ಈಕೆಯ ಕಲಾಭಿರುಚಿಗೆ ಉತ್ತೇಜನ, ಉತ್ಸಾಹ ಮತ್ತು ಪ್ರೋತ್ಸಾಹ ಕೊಡುವ ವಾತಾವರಣವೇ ದೊರಕಿರುವುದು ಒಂದು ದೊಡ್ಡ ಸುಕೃತವೇ ಸರಿ.
ಕಂಪನಿ ಸಕ್ರೇಟರಿ ವೃತ್ತಿಗೆ ಗುಡ್ ಬೈ
ಬಿಕಾಂ ಪದವಿಯ ನಂತರ ಕಂಪನಿ ಸೆಕ್ರೆಟರಿ ಪರೀಕ್ಷೆಯನ್ನು ಮುಗಿಸಿಕೊಂಡು ಒಂದು ವರ್ಷ ವೃತ್ತಿ ನಿರತರಾಗಿ ಕಾರ್ಯನಿರ್ವಹಿಸಿದ ಅದಿತಿಗೆ ಅದೇಕೋ ಸಂಬಳ ಕೊಡುವ ಕೆಲಸದಲ್ಲಿ ತೃಪ್ತಿ ಸಿಗಲಿಲ್ಲ. ನೃತ್ಯ ರಂಗದಲ್ಲಿ ವಿಶೇಷವಾದ ಕಾಳಜಿ ಮತ್ತು ಕಳಕಳಿಯನ್ನು ಹೊಂದಿದ್ದ ಅವರು ಗುರು ಸುಪರ್ಣಾ ಅವರಲ್ಲಿ ಒಂದು ದಶಕಗಳಿಂದ ಭರತನಾಟ್ಯವನ್ನು ಅಭ್ಯಾಸ ಮಾಡಿ, ಅತ್ಯುನ್ನತ ಶ್ರೇಣಿಯಲ್ಲಿ ಸೀನಿಯರ್ ಪರೀಕ್ಷೆ ಮತ್ತು ಬೆಂಗಳೂರು ವಿವಿಯಿಂದ ಎಂಎ (ಡಾನ್ಸ್) ಸ್ನಾತಕೋತ್ತರ ಪದವಿಯನ್ನೂ ಪೂರ್ಣಗೊಳಿಸಿಕೊಂಡಿದ್ದರು. ಅವರಿಗೆ ನರ್ತನ ರಂಗದಲ್ಲಿಯೇ ಇನ್ನೂ ಅನೇಕ ಸಾಧನೆಗಳನ್ನು ಮಾಡಬೇಕೆಂಬ ಆಸೆಗಳು ಹುಟ್ಟಿಕೊಂಡವು. ಹಾಗಾಗಿ ವೃತ್ತಿ ದೊರಕಿದ್ದರೂ ಅದಕ್ಕೆ ಗುಡ್ ಬೈ ಹೇಳಿ ಸಂಪೂರ್ಣವಾಗಿ ತಮ್ಮನ್ನು ತಾವು ಕಲಾ ಕ್ಷೇತ್ರಕ್ಕೆ ಸಮರ್ಪಣೆ ಮಾಡಿಕೊಂಡರು ಎಂಬುದೇ ಒಂದು ಅಚ್ಚರಿ.
ಪತಿ ಕುಟುಂಬದಿಂದಲೂ ಪ್ರೇರಣೆ
ಪದವಿ, ಪಿಜಿ ಅಧ್ಯಯನದ ನಂತರ ಒಂದು ವೃತ್ತಿ ಪಡೆದ, ಆನಂತರ ವಿವಾಹ ಆದ ಯುವತಿಯರು ಮತ್ತೆ ಕಲಾ ಕ್ಷೇತ್ರಕ್ಕೆ ತಮ್ಮನ್ನು ತಾವು ಸಂಪೂರ್ಣ ಅರ್ಪಿಸಿಕೊಳ್ಳುವುದು ಬಹಳ ಅಪರೂಪ. ಆದರೆ ಅದಿತಿ ಎಲ್ಲರಿಗಿಂತ ಕೊಂಚ ಭಿನ್ನ. ಅವರಿಗೆ ಹುಟ್ಟಿದ ಮನೆ ಮತ್ತು ಸೇರಿದ ಮನೆ ಎರಡೂ ಕಲಾರಾಧನಾ ಕೇಂದ್ರವೇ ಆಗಿಬಿಟ್ಟವು. ಹಿರಿಯ ವಿದುಷಿ ಸುಪರ್ಣಾ ಅವರಲ್ಲಿ ಭರತನಾಟ್ಯ ಕಲಿತು, ಅವರ ಸಲಹೆಯಂತೆ ಗುರು ಶ್ವೇತಾ ವೆಂಕಟೇಶರಲ್ಲಿ ಕಥಕ್ ಅಭ್ಯಾಸ ಮಾಡಿ, ಅದರಲ್ಲಿಯೂ ಶ್ರದ್ಧೆ ತೋರಿದ ಕಾರಣಕ್ಕಾಗಿ ಈಗ ರಂಗಮಂಚ್ ಪ್ರವೇಶದ ಹಂತಕ್ಕೆ ಕಾಲಿರಿಸಿದ್ದಾರೆ.
ವಿವಿಧೆಡೆ ಕಲಾ ಪ್ರದರ್ಶನ
ಅದಿತಿ ಶ್ರದ್ಧೆಗೆ ಗುರುಕೃಪೆ ದೊರೆತ ಫಲವಾಗಿ ಅವರು ಈಗಾಗಲೇ ಹಲವು ಪ್ರತಿಷ್ಠಿತ ವೇದಿಕೆಗಳಲ್ಲಿ ಹೆಜ್ಜೆ ಹಾಕಿದ್ದಾರೆ. ಕೊಚ್ಚಿನ್, ಮುಂಬೈ, ಪುಣೆ, ಗುರುವಾಯೂರು, ತಿರುಪತಿ ಮುಂತಾದ ಕಡೆಗಳಲ್ಲಿ ನೃತ್ಯ ಪ್ರದರ್ಶನ ನೀಡಿ ಪ್ರೇಕ್ಷಕರಿಂದ ಜನಮನಣೆ ಗಳಿಸಿದ್ದಾರೆ. ಗುರು ಶ್ವೇತಾ ಅವರ ಗರಡಿಯಲ್ಲಿ ಕಥಕ್ ಅನ್ನೂ ಕಲಿತ ಅದಿತಿಗೆ ಕಲಾ ರಂಗದಲ್ಲಿ ಹಲವು ಅವಕಾಶಗಳ ಹೆಬ್ಬಾಗಿಲು ತೆರೆದಿದೆ. ಮಲೇಷ್ಯಾದಲ್ಲಿ ದೊರೆತ ಒಂದು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಮಾಸ್ಕೋದಲ್ಲಿ ನೀಡಿದ ನಾಟ್ಯ ಪ್ರಸ್ತುತಿಗಳು ತಮ್ಮ ಬದುಕಿನ ಗತಿಯನ್ನೇ ಬದಲಿಸಿದವು ಎಂದು ನೆನಪಿಸಿಕೊಳ್ಳುವ ಅದಿತಿ ಅವರು, ಗುರು ಸುಪರ್ಣಾ ಅವರು ನನಗೆ ಎರಡನೇ ತಾಯಿಯಂತಿದ್ದು, ಸದಾ ಪ್ರಗತಿಗೆ ಆಶ್ರಯವಾಗಿದ್ದಾರೆ ಎಂದು ಗೌರವದಿಂದಲೇ ಹೇಳುತ್ತಾರೆ.
ತಂದೆಯ ಬೆಂಬಲವೂ ದೊಡ್ಡದು
ಲೆಕ್ಕಪರಿಶೋಧನಾ ರಂಗದಲ್ಲಿ ತಮ್ಮದೇ ಆದ ಸಂಸ್ಥೆಯನ್ನು ಹೊಂದಿರುವ ತಂದೆ ವಿಶ್ವಾಸ್ ರಾವ್ ಅವರು ಮಗಳು ತಮ್ಮದೇ ಕ್ಷೇತ್ರಕ್ಕೆ ಬರಬೇಕು ಎಂದು ಕನಸು ಕೊಂಡಿದ್ದರೇನೋ ಗೊತ್ತಿಲ್ಲ ಅದಕ್ಕಾಗಿಯೇ ಅವರು ಬಿಕಾಂ ಮತ್ತು ಕಂಪನಿ ಸಕ್ರೇಟರಿವರೆಗೆ ಮಗಳಿಗೆ ಉನ್ನತ ಶಿಕ್ಷಣ ಕೊಡಿಸಿದರು. ಜತೆಗೆ ಕಲಾ ಚಟುವಟಿಕೆಗೂ ಬೆನ್ನೆಲುಬಾಗಿ ನಿಂತರು. ಆದರೆ ಮಗಳ ಆಂತರ್ಯದ ದನಿಗೆ, ಅದಮ್ಯ ಬಯಕೆಗೆ ಇಂಬು ನೀಡಿ ಕಲಾವಿದೆಯಾಗಿ ಬೆಳೆಯಲೂ ಬೆನ್ನು ತಟ್ಟಿದ್ದಾರೆ. ಅದಿತಿಯನ್ನು ವಿವಾಹವಾದ ನಿಹಾಲ್ ಮತ್ತವರ ಕುಟುಂಬದವರೂ ಕಲಾರಸಿಕರಾಗಿದ್ದು, ಅವರೆಲ್ಲರ ಬೆಂಬಲದಿಂದಲೇ ಕಥಕ್ ರಂಗಮಂಜ್ ಪ್ರವೇಶ ಸಾಧ್ಯವಾಗಿದೆ ಎನ್ನುತ್ತಾರೆ ಅದಿತಿ.ಸ್ವಂತ ಸಂಸ್ಥೆ- ಸ್ವಯಂ ಸೇವೆ
ಬೆಂಗಳೂರಿನ ರಾಜಾಜಿನಗರದಲ್ಲಿ ಝೇಂಕಾರ ನೃತ್ಯ ಕುಟೀರ ಎಂಬ ತಮ್ಮದೇ ಆದ ಕಲಾ ಸಂಸ್ಥೆಯನ್ನು ಸ್ಥಾಪಿಸಿಕೊಂಡಿರುವ ಅದಿತಿ, ಇಲ್ಲಿ ಮಕ್ಕಳಿಗೆ ಭರತನಾಟ್ಯ ಪಾಠ ಮಾಡುತ್ತಾರೆ. ಸಂಘ ಪರಿವಾರದ ಬಗ್ಗೆ ಅಪಾರ ಗೌರವ ಇರುವ ಇವರು ರಾಷ್ಟ್ರೋತ್ಥಾನ ಪರಿಷತ್ತಿನ ನಾಗರಬಾವಿ ಮತ್ತು ಚಾಮರಾಜಪೇಟೆ ಕೇಂದ್ರಗಳಲ್ಲಿ ಅನೇಕ ಕಲಾಸಕ್ತರಿಗೆ ನೃತ್ಯದ ಪಾಠ ಮಾಡುತ್ತಿದ್ದಾರೆ. ಇದು ಇವರ ಸ್ವಯಂ ಸೇವಾ ಆಸಕ್ತಿಗೆ ಹಿಡಿದ ಕನ್ನಡಿಯಾಗಿದೆ.
ಶಿಕ್ಷಕಿ ಆಗಬೇಕು
ದೂರದರ್ಶನ ಬಿ ಗ್ರೇಡ್ ಕಲಾವಿದೆಯಾಗಿ ಭರತನಾಟ್ಯ ಮತ್ತು ಕಥಕ್ ಗಳನ್ನು ಸಮನ್ವಯ ಮಾಡಿಕೊಂಡಿರುವ ಅದಿತಿಗೆ ತಾನು ಒಬ್ಬ ಉತ್ತಮ ನೃತ್ಯ ಶಿಕ್ಷಕಿ ಆಗಬೇಕು ಮತ್ತು ವೇದಿಕೆ ಕಲಾವಿದೆಯಾಗಿ ಬೆಳೆಯಬೇಖು ಎಂಬ ನೂರಾರು ಕನಸುಗಳಿವೆ. ಅವೆಲ್ಲವುಗಳಿಗೂ ಕಥಕ್ ರಂಗಮಂಜ್ ಪ್ರವೇಶ ಒಂದು ಮಹಾದ್ವಾರ ವಾಗಲಿ ಎಂಬುದು ಸಹೃದಯ ಮನಸುಗಳ ಹಾರೈಕೆ.
ಕಾರ್ಯಕ್ರಮ ವಿವರ
ಅದಿತಿ ರಂಗಮಂಚ್ ಪ್ರವೇಶಕ್ಕೆ ಮುಖ್ಯ ಅತಿಥಿಗಳಾಗಿ ಐಸಿಸಿಆರ್ ಪ್ರಾದೇಶಿಕ ನಿರ್ದೇಶಕ ಪ್ರದೀಪ್ ಕುಮಾರ್, ದ ಡಾನ್ಸ್ ಇಂಡಿಯಾ ಮ್ಯಾಗಜಿನ್ ಪ್ರಧಾನ ಸಂಪಾದಕ ವಿಕ್ರಂ ಕುಮಾರ್, ನೃತ್ಯ ವಿದುಷಿ ಸುಮಾ ಕೃಷ್ಣಮೂರ್ತಿ, ಕಥಕ್ ಕಲಾವಿದೆ ಮತ್ತು ನಟಿ ಮಾನಸ ಜೋಶಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಲೆಕ್ಕಪರಿಶೋಧಕರಾದ ವಿಶ್ವಾಸ ರಾವ್, ಅಪರ್ಣಾ, ತಾಂತ್ರಿಕ ನಿರ್ದೇಶಕ ಸಾಯಿ ವೆಂಕಟೇಶ್ ಇತರರು ಉಪಸ್ಥಿತರಿರಲಿದ್ದಾರೆ. ಗಾಯನದಲ್ಲಿ ವಿದ್ವಾನ್ ಶಂಕರ ಶಾನಭಾಗ್, ಪದಾಂತದಲ್ಲಿ ಗುರು ಶ್ವೇತಾ, ತಬಲಾದಲ್ಲಿ ಕಾರ್ತಿಕ್ ಭಟ್ , ಕೊಳಲು ವಾದನದಲ್ಲಿ ವಿದ್ವಾನ್ ಸಮೀರ ರಾವ್, ಸಿತಾರ್‌ದಲ್ಲಿ ವಿದುಷಿ ಶ್ರುತಿ ಕಾಮತ್ ಹಿಮ್ಮೇಳ ಸಹಕಾರ ನೀಡಲಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post