ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪ್ರಜ್ಞಾ ಬುಕ್ ಗ್ಯಾಲರಿಯ 2ನೇಯ ನೂತನ ಪ್ರಜ್ಞಾ-2 ಮಳಿಗೆಯ ಉದ್ಘಾಟನೆ ಅ.11ರಂದು ಬೆಳಿಗ್ಗೆ 10.30ಕ್ಕೆ ಸರ್ಕಾರಿ ನೌಕರರ ಭವನದ ಹಿಂಭಾಗದ ನೆಲಮಾಳಿಗೆಯಲ್ಲಿ ಶುಭಾರಂಭಗೊಳ್ಳಲಿದೆ ಎಂದು ಪ್ರಜ್ಞಾ ಬುಕ್ ಗ್ಯಾಲರಿಯ ಮುಖ್ಯಸ್ಥೆ ಸೌಮ್ಯ ಕೃಷ್ಣಮೂರ್ತಿ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ವಿವರಣೆ ನೀಡಿ, ಶಿವಮೊಗ್ಗದಲ್ಲಿ ಪ್ರಜ್ಞಾಬುಕ್ ಗ್ಯಾಲರಿ ತನ್ನದೇ ಆದ ವಿಶೇಷತೆಯನ್ನು ಹೊಂದಿದ್ದು, ನಾಲ್ಕನೇ ವರ್ಷಕ್ಕೆ ಕಾಲಿಡುತ್ತಿದೆ. ಬರಹಗಾರರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಹಲವರು ಕಾರ್ಯಕ್ರಮಗಳನ್ನು ಕೂಡ ನಡೆಸುತ್ತಾ ಬಂದಿದೆ. ಲೇಖಕರೊಂದಿಗೆ ಸಂವಾದ, ಪುಸ್ತಕ ಬಿಡುಗಡೆ, ವಿವಿಧ ಪುಸ್ತಕಗಳ ಮಾರಾಟ ಹೀಗೆ ಸಾಹಿತ್ಯಿಕ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುತ್ತಾ ಬಂದಿದೆ ಎಂದರು.
ಮಲ್ಲಿಕಾರ್ಜುನ ಟಾಕೀಸ್ ಪಕ್ಕದಲ್ಲೇ ಪ್ರಜ್ಞಾ ಬುಕ್ ಗ್ಯಾಲರಿ ಇದ್ದು, ಸಾಹಿತ್ಯಿಕ ಕಾರ್ಯಕ್ರಮ, ಚಟುವಟಿಕೆಗಳನ್ನು ನಡೆಸಲು ಅಲ್ಲಿ ಸ್ಥಳದ ಕೊರತೆ ಇದ್ದುದರಿಂದ ಇದೀಗ ಆರ್.ಟಿ.ಓ. ಕಛೇರಿ ರಸ್ತೆಯ ಸರ್ಕಾರಿ ನೌಕರರ ಸಂಘದ ಹಿಂಭಾಗದಲ್ಲಿ ನೂತನ ಮಳಿಗೆಯನ್ನು ಆರಂಭಿಸುತ್ತಿದ್ದೇವೆ. ಈ ಮಳಿಗೆಯನ್ನು ಖ್ಯಾತ ಸಾಹಿತಿ ಕುಂ.ವೀರಭದ್ರಪ್ಪ ಮತ್ತು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ, ಕವಯತ್ರಿ, ಸವಿತಾ ನಾಗಭೂಷಣ್, ಸಾಹಿತಿ ವಸುಧೇಂದ್ರ, ಚಿಂತಕ ಡಾ.ರಾಜೇಂದ್ರಚೆನ್ನಿ, ಕಸಾಪ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್. ಮೋಹನ್‍ಕುಮಾರ್, ಬೆಂಗಳೂರಿನ ಅಕ್ಕ ಐಎಎಸ್ ಅಕಾಡೆಮಿ ಸಂಸ್ಥಾಪಕ ಡಾ. ಶಿವಕುಮಾರ್, ಪ್ರಜ್ಞಾ ಬುಕ್‍ಗ್ಯಾಲರಿಯ ಕೃಷ್ಣಮೂರ್ತಿ ಸೇರಿದಂತೆ ಅನೇಕ ಗಣ್ಯರು ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದರು.
ಇವರ ಜೊತೆಗೆ ವಿಶೇಷ ಆಹ್ವಾನಿತರಾಗಿ ಪ್ರೊ.ಹೆಚ್.ಕೇಶವ, ಚಂದ್ರಪ್ಪ ಎಸ್. ಗುಂಡಪಲ್ಲಿ, ಮಂಜುನಾಥ್ ಎಸ್.ಆರ್., ಹೆಚ್.ಆರ್. ಕೃಷ್ಣಮೂರ್ತಿ, ನಳಿನಿ, ಡಾ. ನಾಗಭೂಷಣ್, ಎಂ.ಎನ್. ಸುಂದರ್‍ರಾಜ್, ಡಾ. ಮೋಹನ್‍ಚಂದ್ರಗುತ್ತಿ, ಸೂರ್ಯಪ್ರಕಾಶ್ ಡಿ.ಹೆಚ್. ಡಾ. ಹರ್ಷಿತಾ ಕೆ. ಮುಂತಾದವರು ಉಪಸ್ಥಿತರಿರುವರು ಎಂದರು.
ಉದ್ಘಾಟನಾ ಸಮಾರಂಭದ ಹಿನ್ನಲೆಯಲ್ಲಿ ಪ್ರಜ್ಞಾ ಕಥಾ ಸ್ಪರ್ಧೆ-2025-26ನ್ನು ಆಯೋಜಿಸಲಾಗಿತ್ತು. ನಾಡಿನ ಅನೇಕರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅದರಲ್ಲಿ ಕ್ರಮವಾಗಿ 10,000, 5000, 3000 ರೂ.ಗಳ ಬಹುಮಾನವನ್ನು ಘೋಷಿಸಲಾಗಿತ್ತು. ಇದರ ಜೊತೆಗೆ ತೀರ್ಪುಗಾರರ ಆಯ್ಕೆಯ ವಿಶೇಷ 5 ಕಥೆಗಳಿಗೆ 1000 ರೂ. ಬಹುಮಾನ ಘೋಷಿಸಿತ್ತು. ಅದರಂತೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ನೀಡಲಾಗುವುದು, ಕಾರ್ಯಕ್ರಮದಲ್ಲಿ ಕಥಾ ಸಂಕಲನ ಪುಸ್ತಕ ಬಿಡುಗಡೆ ಮಾಡಲಾಗುವುದು ಎಂದರು.
ಇದರ ಜೊತೆಗೆ ಪ್ರಜ್ಞಾ ಬುಕ್‍ಗ್ಯಾಲರಿ 2ರಲ್ಲಿ ಆಧುನಿಕ ವ್ಯವಸ್ಥೆಗೆ ತಕ್ಕಂತೆ ಇ-ಕಾಮರ್ಸ್ ವೆಬ್‍ಸೈಟನ್ನು ಕೂಡ ಬಿಡುಗಡೆ ಮಾಡಲಾಗುವುದು. ಇಲ್ಲಿ ನಿರಂತರವಾಗಿ ಸಾಹಿತ್ಯ ಚಟುವಟಿಕೆಗಳು, ಪುಸ್ತಕ ಬಿಡುಗಡೆಗೆ ಲೇಖಕರೊಂದಿಗೆ ಸಂವಾದ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರಲಾಗುವುದು. ಪುಸ್ತಕ ಪ್ರೇಮಿಗಳು, ಸಾರ್ವಜನಿಕರು, ನಮ್ಮ ಈ ವಿಶೇಷ ಕಾರ್ಯಕ್ರಮಕ್ಕೆ ಆಗಮಿಸುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಡಾ. ನಾಗಭೂಷಣ, ಹರ್ಷಿತಾ, ರಾಘು, ರಂಗಸ್ವಾಮಿ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post