ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಈ ಬಾರಿಯ ಶ್ರೀ ಭಗವದ್ಗೀತಾ ಅಭಿಯಾನ-ಕರ್ನಾಟಕ 2025ರಲ್ಲಿ #Bhagavathgeetha Abhiyana ರಾಜ್ಯಾದ್ಯಂತ 1,000 ಉಪನ್ಯಾಸಗಳನ್ನು ಏರ್ಪಡಿಸುವ ಗುರಿ ಹೊಂದಲಾಗಿದೆ ಎಂದು ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು #Sonda Swarnavalli Shri ತಿಳಿಸಿದರು.
ಅವರು ಇಂದು ನಗರದ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಆಯೋಜಿಸಿದ್ದ ಭಗವದ್ಗೀತಾ ಅಭಿಯಾನದ ಪೂರ್ವಭಾವಿ ಸಭೆಯ ಸಾನ್ನಿಧ್ಯವಹಿಸಿ ಮಾತನಾಡುತ್ತಿದ್ದರು.
ಅಭಿಯಾನಕ್ಕೆ ಶಿವಮೊಗ್ಗ ಸೇರಿದಂತೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 500 ಕಾರ್ಯಕ್ರಮಗಳು, ರಾಜ್ಯದ ಇತರೆಡೆ 500 ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿವೆ ಎಂದು ಮಾಹಿತಿ ನೀಡಿದರು. ಶಾಲಾ-ಕಾಲೇಜುಗಳು, ಸಂಘ ಸಂಸ್ಥೆಗಳು, ಎಲ್ಲಾ ಸಮಾಜದವರು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಈ ಬಾರಿಯ ಭಗವದ್ಗೀತೆಯ 11ನೇ ಅಧ್ಯಾಯವನ್ನು ಅಧ್ಯಯನ ಮಾಡುತ್ತಿದ್ದಾರೆ ಎಂದರು.
ಅ.25 ರಂದು ಶಿವಮೊಗ್ಗದ ಶುಭಮಂಗಳ ಸಮುದಾಯ ಭವನದಲ್ಲಿ ಅಭಿಯಾನದ ಉದ್ಘಾಟನೆ ಆಗುತ್ತಿದ್ದು, ನ.30ರಂದು ಅಲ್ಲಮಪ್ರಭು ಮೈದಾನದಲ್ಲಿ ರಾಜ್ಯಮಟ್ಟದ ಮಹಾಸಮರ್ಪಣೆ ನಡೆಯುತ್ತದೆ ಎಂದ ಅವರು ವಿಶ್ವವಿದ್ಯಾಲಯಗಳಲ್ಲಿ ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ ಕಾಯ್ದೆಗಳ ಕುರಿತ ವಿಚಾರಸಂಕಿರಣ ಹಮ್ಮಿಕೊಳ್ಳಲಾಗುವುದು. ವಿಶ್ವವಿದ್ಯಾಲಯದ ಆಡಳಿತಗಳು ಸಂತೋಷದಿಂದ ಈ ವಿಚಾರಸಂಕಿರಣಗಳನ್ನು ಆಯೋಜಿಸುತ್ತಾರೆ ಎಂದರು.
ಇಂದಿನಿಂದ ಅ.18ರ ವರೆಗೆ ಶಿವಮೊಗ್ಗದ ವಿವಿಧ ತಾಲೂಕುಗಳು, ಹೋಬಳಿಗಳಲ್ಲಿ ಅಭಿಯಾನದ ಕುರಿತು ಸಭೆ ಹಮ್ಮಿಕೊಳ್ಳಲಾಗುವುದು ಎಂದರು.
ಅಭಿಯಾನದ ಗೌರವಾಧ್ಯಕ್ಷ ಕೆ.ಎಸ್.ಈಶ್ವರಪ್ಪ, ಅಧ್ಯಕ್ಷ ಡಿ.ಎಸ್.ಅರುಣ್, ಕಾರ್ಯಾಧ್ಯಕ್ಷ ಅಶೋಕ್ ಜಿ.ಭಟ್, ಪ್ರಧಾನ ಕಾರ್ಯದರ್ಶಿ ಕೆ.ಇ.ಕಾಂತೇಶ್, ಮಾಜಿ ಎಂಎಲ್‍ಎ ಕೆ.ಬಿ. ಪ್ರಸನ್ನಕುಮಾರ್ ಮೊದಲಾದವರು ಅಭಿಯಾನದ ಯಶಸ್ಸಿಗೆ ಅಮೂಲ್ಯ ಸಲಹೆ ಸೂಚನೆ ನೀಡಿದರು.
ಡಾ.ಬಾಲಕೃಷ್ಣ ಹೆಗಡೆ, ಪಿ.ಪಿ.ಹೆಗಡೆ, ಸಂದೇಶ್ ಉಪಾಧ್ಯ, ಜಿಎಸ್‍ಬಿ ಸಮಾಜದ ಪ್ರಮುಖರಾದ ಭಾಸ್ಕರ ಕಾಮತ್, ರಮೇಶ್ ಶೆಣೈ, ಅನಂತ ಶಾನಭಾಗ ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post