ಕಲ್ಪ ಮೀಡಿಯಾ ಹೌಸ್ | ಮೈಸೂರು |
ಸಕಾಮ ಕರ್ಮಗಳನ್ನು ಮಾಡಿರಿ ಎಂದು ಸಂದೇಶ ನೀಡಿದ ವೇದಗಳನ್ನು ಸಂರಕ್ಷಿಸುವ ಕೆಲಸ ಮಾಡಬೇಕು ಎಂದು ಮುಂಬೈನ ಶ್ರೀ ಸತ್ಯಧ್ಯಾನ ವಿದ್ಯಾಪೀಠದ ಕುಲಪತಿ, ಮಹಾ ಮಹೋಪಾಧ್ಯಾಯ ಡಾ. ಮಾಹುಲಿ ವಿದ್ಯಾಸಿಂಹಾಚಾರ್ಯ ನುಡಿದರು.
ನಗರದ ಶ್ರೀರಾಮಪುರದ ಶ್ರೀ ವೆಂಕಟೇಶ ಧ್ಯಾನ ಕೇಂದ್ರದಲ್ಲಿ ಹಮ್ಮಿಕೊಂಡಿರುವ ಜ್ಞಾನಸತ್ರ ‘ಗೀತಾಭಾಷ್ಯ ಒಂದು ವಿಶೇಷ ಚಿಂತನ’ ಕಾರ್ಯಕ್ರಮದಲ್ಲಿ ಅವರು ಮಂಗಳವಾರ ಉಪನ್ಯಾಸ ನೀಡಿದರು.
ವೇದವನ್ನು ತಿರುಚುವ ಕೆಲಸ ಶತಮಾನಗಳಿಂದ ನಡೆಯುತ್ತಿದೆ. ಇದು ಸಲ್ಲದು. ಸತ್ಯ ಯಾವಾಗಲೂ ಒಂದೇ. ಅದು ಬದಲಾಗದು. ಒಂದು ವಸ್ತುವಿನಲ್ಲಿ ಅನೇಕ ಸತ್ಯಗಳಿರಬಹುದೇ ವಿನಃ ವಿರುದ್ಧವಾದ ಧರ್ಮ ಇರದು ಎಂದರು.
ಅವರ ಉಪನ್ಯಾಸದ ಸಾರಾಂಶ ಇಂತಿದೆ
ಸಂದೇಹಕ್ಕೆ ಆಸ್ಪದವೇ ಇಲ್ಲದಂತೆ ನಿರ್ಣಯ ಮಾಡಿಕೊಳ್ಳುವುದನ್ನು ವ್ಯವಸಾಯ ಎನ್ನುತ್ತಾರೆ. ಸ್ವರ್ಗವೇ ಅಂತಿಮ ಫಲ, ದೇವತೆಗಳಿಗೆ ದೇಹವಿಲ್ಲ, ಅವರನ್ನು ಕರೆಯುವ ಶಬ್ದಗಳೇ ದೇವತೆಗಳು ಎಂಬುದಾಗಿ ಅನ್ಯ ಮತೀಯರು ಹೇಳುತ್ತಾರೆ. ಇವರು ವೇದಗಳ ಆಂತರ್ಯವನ್ನು ತಿಳಿಯದೇ ಕೇವಲ ಮೇಲ್ನೋಟವನ್ನಷ್ಟೇ ನೋಡುತ್ತಾರೆ. ಕಬ್ಬು ಸಿಹಿಯಾಗಿರುತ್ತದೆ ಎನ್ನುವುದು ಕೇವಲ ಕಬ್ಬನ್ನು ನೆಕ್ಕುವುದರಿಂದ ಗೊತ್ತಾಗದು. ಅದನ್ನು ಹಿಂಡಿದಾಗ ಮಾತ್ರ ಒಳಗಿನ ಸಿಹಿ ಸವಿಯಲು ಸಾಧ್ಯ. ವೇದಗಳನ್ನು ಆಳವಾಗಿ ವಿಮರ್ಶೆ ಮಾಡಿದಾಗ ಮಾತ್ರ ಅದರ ಒಳಾರ್ಥ ತಿಳಿಯುತ್ತದೆ ಎಂದರು.

ಹಾವಿನ ಹೆಡೆಯ ಮೇಲೆ ಸಣ್ಣ ಸಾಸುವೆ ಕಾಳು ಇರುವಷ್ಟು ಕಾಲವಾದರೂ ಧ್ಯಾನ ಮಾಡಿದರೂ ಅದು ಬಹುದೊಡ್ಡ ಸೌಭಾಗ್ಯ. ಇದೂ ಕೂಡ ದೊಡ್ಡ ಸಾಧನೆಯೇ ಸರಿ. ಸ್ವಪ್ನದಲ್ಲಿ ಕಾಣಿಸುವ ಸುಖಗಳು ಹೇಗೆ ಕ್ಷಣಿಕವೋ ಹಾಗೇ ಸಂಸಾರದ ಸುಖ ಭೋಗಗಳನ್ನು ಕ್ಷಣಿಕ ಎಂದು ಯಾರು ತಿಳಿಯುತ್ತಾರೋ ಅಂತಹವರಿಗೆ ವೇದಗಳ ಅರ್ಥ ಆಗಲು ಸಾಧ್ಯ. ಸಂಸಾರದಲ್ಲಿ ಪೂರ್ಣ ವೈರಾಗ್ಯ ಇದ್ದವರಿಗೆ ಮಾತ್ರ ಅಪರೋಕ್ಷ ಜ್ಞಾನ ಆಗುವ ಸಾಧ್ಯತೆ ಇದೆ ಎಂದರು.
ನಮ್ಮ ಮನಸ್ಸಿನಲ್ಲಿ ಪರಮಾತ್ಮನ ಸ್ಮರಣೆ ಸದಾ ಇರಬೇಕು – ಬರಬೇಕು. ನಮ್ಮ ಪ್ರಾರಬ್ಧ ಕರ್ಮ ಪೂರ್ಣ ಮುಗಿದಿರಬೇಕು. ಅಂದರೆ ಮಾತ್ರ ಮರಣದ ಸಮಯದಲ್ಲಿ ಭಗವಂತನ ಸ್ಮರಣೆ ಬರುತ್ತದೆ. ಯಾವುದೇ ವಿಹಿತ ಕರ್ಮವನ್ನು ಭಗವಂತನ ಪ್ರೀತಿಗಾಗಿ ಎಂದು ನಿಶ್ಚಯಿಸಬೇಕು. ನಾವು ಮಾಡುವ ವ್ರತ, ಏಕಾದಶಿ, ದಾನ, ಧರ್ಮ, ಯಾತ್ರೆ, ಕ್ಷೇತ್ರ ದರ್ಶನ ಇತ್ಯಾದಿ ಕರ್ಮಗಳಿಂದ ಭಗವಂತನಿಗೆ ಪ್ರೀತಿ ಆಗುತ್ತದೆ ಎಂದು ಡಾ. ಮಾಹುಲಿ ವಿದ್ಯಾಸಿಂಹಾಚಾರ್ಯ ಹೇಳಿದರು.
ಪಂಡಿತರಾದ ಬಾದರಾಯಣಾಚಾರ್ಯ, ವ್ಯಾಸತೀರ್ಥಾಚಾರ್ಯ, ಹೇಮಂತ ಆಚಾರ್ಯ ಗುಡಿ ಇತರರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post