ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಜಿಲ್ಲೆಯು ಭೌಗೋಳಿಕವಾಗಿ ಮಾತ್ರವಲ್ಲದೆ ಪ್ರಕರಣಗಳ ವರದಿಯಲ್ಲೂ ಸಹ ದೊಡ್ಡ ಜಿಲ್ಲೆಯಾಗಿದ್ದು ಯಾವುದೇ ಒಂದು ಪ್ರದೇಶದಲ್ಲಿ ಜರುಗುವ ಅಪರಾಧ ಕೃತ್ಯಗಳು ಇತರೆ ಕೃತ್ಯಗಳಿಗೆ ದಾರಿ ಮಾಡಿಕೊಡುತ್ತವೆ. ಆದ್ದರಿಂದ ಅಪರಾಧ ಕೃತ್ಯಗಳನ್ನು ಪತ್ತೆ ಹಚ್ಚುವಲ್ಲಿ ಮತ್ತು ಮಟ್ಟ ಹಾಕುವಲ್ಲಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕೆಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಎಂ.ಎ. ಸಲೀಂ ಹೇಳಿದರು.
ಶಿವಮೊಗ್ಗ ನಗರದ ಡಿಎಆರ್ ಪೊಲೀಸ್ ಸಭಾಂಗಣದ ಆವರಣದಲ್ಲಿ ಪೊಲೀಸ್ ಗೌರವ ವಂದನೆಗಳನ್ನು ಸ್ವೀಕರಿಸಿ ಅನಂತರ ಪೊಲೀಸ್ ಸಭಾಂಗಣದಲ್ಲಿ ಶಿವಮೊಗ್ಗ ಜಿಲ್ಲೆಯ ಪೊಲೀಸ್ ನಿರೀಕ್ಷಕರ ಮೇಲ್ಪಟ್ಟ ಅಧಿಕಾರಿಗಳಿಗೆ ವಿಮರ್ಶನ ಸಭೆಯನ್ನು ನಡೆಸಿದರು.

ಶಿವಮೊಗ್ಗ ಜಿಲ್ಲೆಯು ರಾಜ್ಯದಲ್ಲಿ ಎಲ್ಲರ ಗಮನವನ್ನು ಸೆಳೆದಿರುವ ಒಂದು ಮುಖ್ಯವಾದ ಜಿಲ್ಲೆಯಾಗಿದ್ದು, ಶಿವಮೊಗ್ಗದಂತಹ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸಿದರೆ ಎಲ್ಲಾ ಆಯಾಮದ ಅನುಭವ ದೊರೆಯಲಿದೆ. ಆದ್ದರಿಂದ ಎಲ್ಲರೂ ಶ್ರಮವಹಿಸಿ ಕರ್ತವ್ಯ ನಿರ್ವಹಿಸಿ ಎಂದರು.
ಶಿವಮೊಗ್ಗ ಜಿಲ್ಲೆಯು ದೊಡ್ಡ ಜಿಲ್ಲೆಯಾದ ಕಾರಣ ಎಲ್ಲಾ ರೀತಿಯ ಪೊಲೀಸ್ ಘಟಕಗಳು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದು, ನೀವು ನಿರ್ವಹಿಸುವ ಕಾರ್ಯದಿಂದ ನಿಮ್ಮ ಯಶಸ್ಸು ಕಾಣುತ್ತದೆ. ಆದ್ದರಿಂದ ಪೊಲೀಸ್ ಇಲಾಖೆಯ ಅಧಿಕಾರಿಯ ಸಿಬ್ಬಂದಿಗಳನ್ನು ಒಳಗೊಂಡು ಎಲ್ಲರೂ ಕರ್ತವ್ಯದಲ್ಲಿ ಬೆರೆತು ಕೆಲಸಮಾಡಿ ಎಂದು ಸೂಚನೆ ನೀಡಿದರು.

ನೊಂದವರಿಗೆ ನೆರವು ಹಾಗೂ ಅಪರಾಧಿಗೆ ಶಿಕ್ಷೆ ಎಂಬ ತತ್ವದ ಆಧಾರದ ಮೇಲೆ ಕಾರ್ಯನಿರ್ವಹಿಸಿ, ಈ ನಿಟ್ಟಿನಲ್ಲಿ ಉತ್ತಮ ಗುಣಮಟ್ಟದ ತನಿಖೆಯನ್ನು ಕೈಗೊಂಡು ಆರೋಪಿತರಿಗೆ ಶಿಕ್ಷೆಯಾಗುವಲ್ಲಿ ನಿಮ್ಮ ಪಾತ್ರವೂ ಬಹಳ ಮುಖ್ಯ ವಿದ್ದು, ತನಿಖೆಯಲ್ಲಿ ಲೋಪ ಬರದಂತೆ ಕರ್ತವ್ಯ ನಿರ್ವಹಿಸುವುದು ಸೂಕ್ತ. ನೀವು ನಿರ್ವಹಿಸಬೇಕಾದ ಕರ್ತವ್ಯಗಳ ಮೇಲೆ ಶ್ರದ್ಧೆ ಇರುವುದು ಮುಖ್ಯವಿದ್ದು, ನೀವು ಕೈಗೊಳ್ಳುವಂತಹ ಗುಣಮಟ್ಟದ ತನಿಖೆಯಿಂದ ಮಾತ್ರ ಶಿಕ್ಷೆಯ ಪ್ರಮಾಣವು ಹೆಚ್ಚಾಗುತ್ತದೆ, ಆ ಸಂದರ್ಭದಲ್ಲಿ ಗುಂಪುಗಳು ರೌಡಿ ಹಾಗೂ ಗೂಂಡಾ ಆಸಾಮಿ ಗಳಿಗೆ ಶಿಕ್ಷೆಯಾಗುವ ಸಾಧ್ಯತೆಯೂ ಹೆಚ್ಚಿರುತ್ತದೆ. ಇದರಿಂದ ಸಾರ್ವಜನಿಕರಿಗೆ ಉಪಟಳ ನೀಡುವವರ ವಿರುದ್ಧ ಕ್ರಮ ಕೈಗೊಂಡಂತೆಯೂ ಸಹ ಆಗುತ್ತದೆ ಎಂದರು.
ಪೊಲೀಸ್ ಇಲಾಖೆಯ ಪ್ರಾಥಮಿಕ ಮತ್ತು ನಿಜವಾದ ಕೆಲಸವೆಂದರೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು, ನೊಂದವರಿಗೆ ನೆರವು ನೀಡುವುದು, ಸಾರ್ವಜನಿಕರ ಸೇವೆಗೆ ಸದಾ ಕಾಲ ಲಭ್ಯವಿರುವುದು, ಸಮುದಾಯದ ಕಡೆಗೆ ಪೊಲೀಸ್ ಇಲಾಖೆ ಅನ್ನು ಕೊಂಡೊಯ್ಯುವುದು, ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವುದು ಹಾಗೂ ತಡೆಯುವುದು, ಈ ರೀತಿಯ ಪ್ರಮುಖವಾದ ಕರ್ತವ್ಯಗಳನ್ನು ನಿರ್ವಹಿಸಬೇಕಿರುತ್ತದೆ ಎಂದರು.

ಯಾವುದೇ ಒಂದು ಕೆಲಸ ತನಿಖೆ ಹಾಗೂ ಇತರ ಇಲಾಖೆಗಳೊಂದಿಗೆ ವ್ಯವಹರಿಸುವಾಗ ದಾಖಲಾತಿಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಿ ಆಗ ಮಾತ್ರ ನೀವು ಮಾಡಿದಂತಹ ಕೆಲಸಕ್ಕೆ ಸೂಕ್ತ ನ್ಯಾಯ ತೊರಕಿಸಿದಂತಾಗುತ್ತದೆ. ಮಹಜರುಗಳನ್ನು ನಡೆಸುವಾಗ ಮತ್ತು ಸಾಕ್ಷಿದಾರಗಳನ್ನು ಆಯ್ದುಕೊಳ್ಳುವಾಗ ಸಾಧ್ಯವಾದಷ್ಟು ಮಟ್ಟಿಗೆ ಸರ್ಕಾರಿ ಪಂಚರನ್ನು ಮತ್ತು ಸರ್ಕಾರಿ ಸಾಕ್ಷಿದಾರರನ್ನು ಆಯ್ದುಕೊಳ್ಳಿ, ಇಂತಹ ನಡೆಯಿಂದ ಪ್ರಕರಣಗಳಲ್ಲಿ ಶಿಕ್ಷೆಯಾಗುವ ಪ್ರಮಾಣವು ಹೆಚ್ಚಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದಾವಣಗೆರೆ ಪೂರ್ವವಲಯ ಪೊಲೀಸ್ ಮಹಾನಿರೀಕ್ಷಕ ಬಿ.ಆರ್. ರವಿಕಾಂತ್ ಗೌಡ, ಎಸ್‍ಪಿ ಮಿಥುನ್ ಕುಮಾರ್ ಜಿ.ಕೆ., ಹೆಚ್ಚುವರಿ ಎಸ್ಪಿಗಳಾದ ಎ.ಜಿ. ಕಾರ್ಯಪ್ಪ, ರಮೇಶ್ ಕುಮಾರ್ ಹಾಗೂ ಶಿವಮೊಗ್ಗ ಜಿಲ್ಲೆಯ ಎಲ್ಲಾ ಪೊಲೀಸ್ ಉಪಾಧ್ಯಕ್ಷಕರು ಮತ್ತು ಪೊಲೀಸ್ ನಿರೀಕ್ಷಕರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post