ದೆಹಲಿಯ ಕೆಂಪು ಕೋಟೆ ಪ್ರದೇಶದ ಬಳಿ ನಡೆದ ಮಾರಕ ದಾಳಿಯ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉನ್ನತ ಮಟ್ಟದ ಭದ್ರತಾ ಪರಿಶೀಲನಾ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್, ಗುಪ್ತಚರ ಬ್ಯೂರೋ ನಿರ್ದೇಶಕರು, ಎನ್’ಐಎ ಮಹಾನಿರ್ದೇಶಕರು, ದೆಹಲಿ ಪೊಲೀಸ್ ಆಯುಕ್ತರು ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಇಲ್ಲಿನ ಕೆಂಪು ಕೋಟೆಯ #RedFort ಬಳಿಯಲ್ಲಿ ಭೀಕರ ಸ್ಪೋಟದ ಹಿಂದಿರುವ ಪ್ರತಿಯೊಬ್ಬರನ್ನೂ ಹುಡುಕಿ ಬೇಟೆಯಾಡಿ ಎಂದು ಗೃಹ ಸಚಿವ ಅಮಿತ್ ಶಾ #AmitShah ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.
ಘಟನೆಯ ಹಿನ್ನೆಲೆಯಲ್ಲಿ ಉನ್ನತ ಮಟ್ಟದ ಸಭೆಯ ನಂತರ X ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅಮಿತ್ ಶಾ, ದೆಹಲಿ ಕಾರು ಸ್ಫೋಟದ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆಗಳನ್ನು ನಡೆಸಿದ್ದೇನೆ. ಈ ಘಟನೆಯ ಹಿಂದಿನ ಪ್ರತಿಯೊಬ್ಬ ಅಪರಾಧಿಯನ್ನು ಬೇಟೆಯಾಡಲು ಅವರಿಗೆ ಸೂಚನೆ ನೀಡಿದ್ದೇನೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರೂ ನಮ್ಮ ಏಜೆನ್ಸಿಗಳ ಸಂಪೂರ್ಣ ಕೋಪವನ್ನು ಎದುರಿಸಬೇಕಾಗುತ್ತದೆ. ಇಂತಹ ಕೃತ್ಯಕ್ಕೆ ಕಾರಣರಾದವರ ಒಬ್ಬೊಬ್ಬರನ್ನೂ ಬೇಟೆಯಾಡುವವರೆಗೂ ವಿರಮಿಸುವುದಿಲ್ಲ ಎಂದು ಗುಡುಗಿದ್ದಾರೆ.

ದೆಹಲಿ ಪೊಲೀಸರು ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ), ಸ್ಫೋಟಕ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೇರಿದಂತೆ ವಿವಿಧ ಕಠಿಣ ನಿಬಂಧನೆಗಳ ಅಡಿಯಲ್ಲಿ ಸ್ಫೋಟಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿದ್ದಾರೆ.
ದೆಹಲಿ ಕಾರು ಸ್ಫೋಟ ಪ್ರಕರಣದಲ್ಲಿ ನಿನ್ನೆಯಿಂದ ಸ್ಥಳೀಯ ಪೊಲೀಸರೊಂದಿಗೆ ಸಂಬಂಧ ಹೊಂದಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್’ಐಎ), ಗೃಹ ಸಚಿವಾಲಯವು ಪ್ರಕರಣದ ತನಿಖೆಯನ್ನು ಸಂಸ್ಥೆಗೆ ಹಸ್ತಾಂತರಿಸುವ ಆದೇಶಗಳನ್ನು ಹೊರಡಿಸಿದ ನಂತರ ಪ್ರಕರಣವನ್ನು ಔಪಚಾರಿಕವಾಗಿ ವಹಿಸಿಕೊಳ್ಳುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಎಂದು ಅವರು ಹೇಳಿದ್ದಾರೆ.
ದೆಹಲಿಯ ಕೆಂಪು ಕೋಟೆ ಬಳಿಯಲ್ಲಿ ನಿನ್ನೆ ಸಂಜೆ ಸಂಭವಿಸಿದ ಭೀಕರ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಈ ಕುರಿತಂತೆ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದು, ದೆಹಲಿ ಸ್ಫೋಟ ಪ್ರಕರಣದಲ್ಲಿ ಅಮೀರ್, ಉಮರ್ ಮತ್ತು ತಾರಿಕ್ ಅವರನ್ನು ಈಗ ಔಪಚಾರಿಕವಾಗಿ ಬಂಧಿಸಲಾಗಿದೆ ಎನ್ನಲಾಗಿದೆ.
ಇನ್ನು, ಸ್ಫೋಟಕ್ಕೆ ಬಳಸಲಾದ ಕಾರಿನ ಮಾಲೀಕತ್ವ ಮತ್ತು ಜಾಡಿನ ಬಗ್ಗೆ ತನಿಖೆ ನಡೆಸಿದ ನಂತರ ಬಂಧನಗಳು ನಡೆದಿವೆ ಎಂದು ವರದಿಯಾಗಿದೆ.
ಇನ್ನು ಇದೇ ವೇಳೆ, ದೆಹಲಿ ಸ್ಪೋಟದ ತನಿಖೆ ವ್ಯಾಪಕವಾಗಿರುವ ಬೆನ್ನಲ್ಲೇ ಜಮ್ಮು ಕಾಶ್ಮೀರ ಪೊಲೀಸರೂ ಸಹ ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದಾರೆ.
ಮುಜಾಮಿಲ್’ಗೆ ಸಂಬಂಧಿಸಿದ ಹಾಗೂ ಅಲ್ ಫಲಾಹ್ ವಿಶ್ವವಿದ್ಯಾಲಯದ ಮಾಡ್ಯೂಲ್’ಗೆ ಭಾಗವಾಗಿರುವ ಅನುಮಾನದಲ್ಲಿ ಜಮ್ಮು ಕಾಶ್ಮೀರದ ಪೊಲೀಸರು ಲಕ್ನೋದಲ್ಲಿ ಡಾ. ಶಹೀನಾ ಎನ್ನುವವರನ್ನು ಬಂಧಿಸಲಾಗಿದೆ. ಈ ಮೂಲಕ ದೇಶದಲ್ಲಿ ವಿಧ್ವಂಸಕ ಕೃತ್ಯ ಎಸಗುವ ಸಂಚಿನಲ್ಲಿ ಮಹಿಳೆಯರೂ ಸಹ ಭಾಗಿಯಾಗಿದ್ದಾರೆ ಎಂಬ ಅನುಮಾನಗಳಿಗೆ ಪುಷ್ಟಿ ದೊರಕುತ್ತಿದೆ.
ಅಲ್ಲದೇ, ದೆಹಲಿ ಸ್ಪೋಟಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳ ತಂಡ ಇನ್ನೊಬ್ಬ ವೈದ್ಯನನ್ನು ಬಂಧಿಸಿದ್ದು, ತನಿಖೆಗೆ ಒಳಪಡಿಸಿದ್ದಾರೆ. ಮಾತ್ರವಲ್ಲ, ಸ್ಪೋಟದ ಹಿಂದೆ ಜೈಷ್ ಉಗ್ರ ಸಂಘಟನೆಯ ಮೂಲಭೂತವಾದದ ಜಾಡು ಹಿಡಿದು ತನಿಖೆ ಚುರುಕುಗೊಂಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post