ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಾತ್ಸಲ್ಯ ಮರೆತ ಆಧುನಿಕ ಪ್ರಪಂಚದಲ್ಲಿ, ಉತ್ತಮ ವ್ಯಕ್ತಿತ್ವವುಳ್ಳ ವಿದ್ಯಾವಂತ ಸಮೂಹ ಬೇಕಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್. ನಾರಾಯಣ ರಾವ್ ಅಭಿಪ್ರಾಯಪಟ್ಟರು.
ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಂಸಿಎ ವಿಭಾಗದ ವತಿಯಿಂದ ಸೋಮವಾರ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಪ್ರಥಮ ವರ್ಷದ ಎಂಸಿಎ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಅಭಿವಿನ್ಯಾಸ (ಓರಿಯಂಟೇಷನ್) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂಪಾದನೆ ಎಂದರೆ ಹಣದ ಜೊತೆಗೆ ವಿಶ್ವಾಸ, ಸಂಸ್ಕಾರ, ಸಮಾಜದ ಕಳಕಳಿ ಎಲ್ಲವೂ ಸಂಪಾದನೆಯೆ ಆಗಿದೆ. ಮನುಷ್ಯನಲ್ಲಿ ಶ್ರೀಮಂತಿಕೆ ಎಂಬುದು, ಅರ್ಧ ಹಣದ ರೂಪದಲ್ಲಿ ನೀಡಿದರೆ, ಇನ್ನೂ ಅರ್ಧ ಗುಣದ ರೂಪದಲ್ಲಿ ಇರುತ್ತದೆ. ಕಳೆದು ಹೋದ ಸಮಯದ ಬಗ್ಗೆ ಚಿಂತಿಸುವುದಕ್ಕಿಂತ, ಉಳಿದಿರುವ ಸಮಯಕ್ಕೆ ಜೀವ ತುಂಬುವ ಕಾರ್ಯ ನಡೆಯಲಿ. ಮನಸ್ಸುಗಳನ್ನು ಒಡೆಯದಂತಹ ಸ್ನೇಹಿತರನ್ನು ಆರಿಸಿಕೊಳ್ಳಿ. ಕತ್ತಲೆಯು ಭಯ ಮೂಡಿಸಿದರೆ, ಬೆಳಕು ಭರವಸೆ ಮೂಡಿಸುತ್ತದೆ. ಸಮಾಜಕ್ಕೆ ಭರವಸೆ ಮೂಡಿಸುವ ವ್ಯಕ್ತಿತ್ವಗಳು ನೀವಾಗಿ ಎಂದು ಹಾರೈಸಿದರು.
18 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಎನ್ಇಎಸ್ ಸಂಸ್ಥೆಯಲ್ಲಿ, 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಧ್ಯಯನ ನಡೆಸುತ್ತಿರುವುದು ಸಂತಸದ ವಿಷಯವಾಗಿದೆ. ಮಾನವೀಯ ಮೌಲ್ಯಗಳನ್ನು ಬಿತ್ತುವ ಕಾರ್ಯವನ್ನು ಎನ್ಇಎಸ್ ಸಂಸ್ಥೆ ಸದಾ ಮಾಡುತ್ತಿದೆ ಎಂದು ಹೇಳಿದರು.

ಸವಾಲುಗಳನ್ನು ಎದುರಿಸಲು ಪ್ರೋಗ್ರಾಮಿಂಗ್ ಭಾಷೆ, ಡೇಟಾಬೇಸ್ ನಿರ್ವಹಣೆ, ಸೈಬರ್ ಭದ್ರತೆ, ಕ್ಲೌಡ್ ಕಂಪ್ಯೂಟಿಂಗ್ ನಂತಹ ನಾವೀನ್ಯಯುತ ವಿಷಯಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಿ. ತಂತ್ರಜ್ಞಾನದ ಜೊತೆಗೆ ಕೌಶಲ್ಯತೆಗಳನ್ನು ಬಳೆಸಿಕೊಳ್ಳಲು ಆದ್ಯತೆ ನೀಡಿ. ಕಲಿಕೆಯ ವಿಚಾರದಲ್ಲಿ ಗೊಂದಲುಗಳು ಬೇಡ. ಯಾವಾಗ ನಮ್ಮ ಆದ್ಯತೆ ಸ್ಪಷ್ಟವಾಗಿರುತ್ತದೆ, ಆಗ ಯಾವುದೇ ದ್ವಂದ್ವಗಳಿರುವುದಿಲ್ಲ.
ಉತ್ಸಾಹವಿಲ್ಲದೆ ಸ್ನಾತಕೋತ್ತರ ಪದವಿ ಕಷ್ಟ. ನಿರಂತರವಾಗಿ ಕಲಿಯಬೇಕಾದ ಅನಿವಾರ್ಯ ಪರಿಸ್ಥಿತಿಯಿರುವ ಪೀಳಿಗೆಯಲ್ಲಿ ನಾವಿದ್ದೇವೆ. ಶೈಕ್ಷಣಿಕ ಕ್ರಿಯಾಶೀಲತೆಯಲ್ಲಿ ಯುವ ಸಮೂದಿಂದ ಪೋಷಕರು, ವಿದ್ಯಾಸಂಸ್ಥೆ ಮತ್ತು ಸಮಾಜ ಅಪಾರ ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಅಂತಹ ನಿರೀಕ್ಷೆಗಳನ್ನು ಎಂದಿಗೂ ಹುಸಿಗೊಳಿಸಬೇಡಿ. ಸಮಾಜಕ್ಕೆ ಬೇಕಾದ ಮೌಲ್ಯಯುತ, ಶ್ರದ್ಧೆಯುಳ್ಳ ಜ್ಞಾನವನ್ನು ಪಡೆಯಲು ಪ್ರಯತ್ನಿಸಿ.

ಕಾರ್ಯಕ್ರಮದಲ್ಲಿ ಎನ್ಇಎಸ್ ನಿರ್ದೇಶಕರಾದ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ಎಚ್.ಸಿ.ಶಿವಕುಮಾರ್, ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್, ಸಂಶೋಧನಾ ಡೀನ್ ಡಾ.ಎಸ್.ವಿ.ಸತ್ಯನಾರಾಯಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಎಂಸಿಎ ವಿಭಾಗದ ಮುಖ್ಯಸ್ಥರಾದ ಡಾ.ಹೇಮಂತ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕರಾದ ಡಾ.ರಾಘವೇಂದ್ರ.ಎಸ್.ಪಿ ಸ್ವಾಗತಿಸಿ, ಆದರ್ಶ.ಎಂ.ಜೆ ವಂದಿಸಿ, ಅಮೃತ ನಿರೂಪಿಸಿ, ವಿದ್ಯಾರ್ಥಿನಿ ಶುಭಾನ್ವಿತ ಪ್ರಾರ್ಥಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post