ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಧುರತೆ ತುಂಬಿದ ಕನ್ನಡ ಭಾಷೆಯ ಶಬ್ದಗಳನ್ನು, ಆಧುನಿಕತೆಯ ಗುಂಗಿನಲಿ ಎಂದಿಗೂ ಅಪಭ್ರಂಶಗೊಳಿಸಬೇಡಿ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್. ನಾರಾಯಣ ರಾವ್ ಹೇಳಿದರು.
ನಗರದ ಕುವೆಂಪು ರಂಗಮಂದಿರದಲ್ಲಿ ಮಂಗಳವಾರ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು ಹಾಗೂ ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನ ಕನ್ನಡ ವಿಭಾಗಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ 70 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಾಜ್ಯೋತ್ಸವ ನಮ್ಮ ಅಸ್ಮಿತೆಯ ಹಬ್ಬ. ನಾಡಿನ ಬಗ್ಗೆ ಅಭಿಮಾನಕ್ಕಿಂತ, ನಿತ್ಯದ ನಡೆಯಲ್ಲಿ ಕನ್ನಡತನ ಕಾಣಬೇಕು. ಕನ್ನಡ ಕಟ್ಟುವ ಕೆಲಸ ಆಗಬೇಕು. ಭಾಷೆಗೆ ತಾಯಿಯ ಸ್ಥಾನ ನೀಡಲಾಗಿದೆ. ಮಾತೃಭಾಷೆ ನಮ್ಮೊಳಗಿನ ಆತ್ಮಶಕ್ತಿಯನ್ನು ಸದಾ ಉನ್ನತಿಕರಿಸುತ್ತದೆ. ಸಂಬಂಧಗಳ ಹೆಸರುಗಳು ಆಂಗ್ಲ ಭಾಷೆಯ ಜಾಡ್ಯತನಕ್ಕೆ ಸಿಲುಕಿ ನಲುಗಿದಿರಲಿ.

ಕನ್ನಡಕ್ಕೆ ರಾಜ ಮಹಾರಾಜರ ಕೊಡುಗೆ ಅಪಾರ. ಭಾಷೆಯ ಮೂಲಕ ಅದ್ಭುತ ಸಂದೇಶ ಸಾರುತ್ತಿದ್ದ ಕನ್ನಡ ಹಾಡುಗಳು, ಚಿತ್ರಕಥೆಗಳು ಎಂದೆಂದಿಗೂ ಅಜರಾಮರ. ಕನ್ನಡದ ಚಿತ್ರಗೀತೆಗಳು ಪುಸ್ತಕವಾಗಿ ಪ್ರಕಟಗೊಂಡಾಗ, ಅದನ್ನು ಖರೀದಿಸುವಾಗ ಇರುತ್ತಿದ್ದ ಕುತೂಹಲ ಈಗಿಲ್ಲ. ಕನ್ನಡ ಪುಸ್ತಕಗಳನ್ನು ಅಧ್ಯಯನ ಮಾಡಿ. ಭಾಷೆಯ ಬಗೆಗೆ ಯಾವುದೇ ಕೀಳರಿಮೆ ಬೇಡ ಎಂದು ಹೇಳಿದರು.
ಖ್ಯಾತ ಹಾಸ್ಯ ಭಾಷಣಕಾರ ಉಮೇಶ್ ಗೌಡ ಮಾತನಾಡಿ, ಕನ್ನಡ ಭಾಷೆಗೆ ವಿವಿಧತೆಯನ್ನು ಏಕತೆಗೊಳಿಸುವ ಶಕ್ತಿ ಹೊಂದಿದೆ. ಕನ್ನಡದ ಅಭಿವೃದ್ಧಿಗೆ ಸರಿಯಾದ ಓದು,ಬರಹ, ಮಾತಿನ ಸ್ಪಷ್ಟತೆಯಿರಬೇಕು. ತರಗತಿಗಳಲ್ಲಿ ನಡೆಯುತ್ತಿದ್ದ ಹಾಸ್ಯ ಪ್ರಸಂಗ, ಅನುಭವಗಳು ಶಿಕ್ಷಕ ವೃತ್ತಿಯಲ್ಲಿ ನಿಜವಾದ ಕಲಿಕೆಗೆ ಸಾಧ್ಯ ಮಾಡಿಕೊಡಲಿದೆ ಎಂದು ಹೇಳಿದರು.

ರಾಷ್ಟ್ರಕವಿ ಕುವೆಂಪು ರಚಿತ ‘ಜಯ ಭಾರತ ಜನನಿಯ ತನುಜಾತೆ’ ನಾಡಗೀತೆಯು 100 ವರ್ಷಗಳನ್ನು ಪೂರೈಸಿರುವ ಸಂಭ್ರಮದಲ್ಲಿ, ಕಮಲಾ ನೆಹರು ಮಹಿಳಾ ಕಾಲೇಜು ಮತ್ತು ಎ.ಟಿ.ಎನ್.ಸಿ ಕಾಲೇಜಿನ 100 ಜನ ವಿದ್ಯಾರ್ಥಿಗಳಿಂದ ವೇದಿಕೆಯಲ್ಲಿ ನಾಡಗೀತೆ ಪ್ರಸ್ತುತ ಪಡಿಸಲಾಯಿತು. ಕನ್ನಡದ ಶಲ್ಯದಲ್ಲಿ ಕಂಗೊಳಿಸುತ್ತಿದ್ದ ವಿದ್ಯಾರ್ಥಿಗಳ ತಂಡದೊಂದಿಗೆ ನೆರೆದಿದ್ದ ವಿದ್ಯಾರ್ಥಿಗಳು, ಅತಿಥಿಗಳು ದನಿಗೂಡಿಸಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ನಿರ್ದೇಶಕ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಪಿ.ಆರ್.ಮಮತ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕಿ ಗಾಯತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post