ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬೇರೆ ಕಂಪೆನಿಯ ಕಬ್ಬಿಣದ ಶೀಟ್ ಗಳಿಗೆ ಜಿಎಸ್’ಡಬ್ಲ್ಯೂ ಕಂಪನಿಯ ಶೀಟ್ ಎಂದು ನಕಲಿ ಪ್ರಿಂಟ್ ಹಾಕಿಸಿ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ, ಶೀಟ್ ಮಾರಾಟ ಅಂಗಡಿಯ ಮಾಲೀಕನ ವಿರುದ್ದ ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗದ ಹೊರವಲಯ ಗುರುಪುರದಲ್ಲಿರುವ ಕಬ್ಬಿಣದ ಶೀಟ್ ಟ್ರೇಡಿಂಗ್ ಮಾಲೀಕನ ವಿರುದ್ದ ದೂರು ದಾಖಲಾಗಿದೆ. ಜಿಎಸ್’ಡಬ್ಲ್ಯೂ ಎಂದು ಪ್ರಿಂಟ್ ಮಾಡಲು ಬಳಸುತ್ತಿದ್ದ ಪ್ರಿಂಟರ್ ಯಂತ್ರವನ್ನು ವಶಕ್ಕೆ ಪಡೆಯಲಾಗಿದೆ.

ಶಿವಮೊಗ್ಗದ ಜಯನಗರ 2 ನೇ ಕ್ರಾಸ್ ನಿವಾಸಿ ಪ್ರದೀಪ್ ಎಂಬುವರು ಈ ಕುರಿತಂತೆ ಪೊಲೀಸರಿಗೆ ದೂರು ನೀಡಿದ್ದರು. ಎಂಜಿನಿಯರಿಂಗ್ ವರ್ಕ್ಸ್ ನ ವ್ಯಕ್ತಿಯೋರ್ವರು, ಬೇರೆ ಕಂಪೆನಿಯ ಕಬ್ಬಿಣದ ಶೀಟ್ ಗಳಿಗೆ ಜಿಎಸ್’ಡಬ್ಲ್ಯೂ ಕಂಪೆನಿಯ ಶೀಟ್ ಎಂದು ನಕಲಿ ಪ್ರಿಂಟ್ ಹಾಕಿಸಿ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.
ಈ ಕುರಿತಂತೆ ಜಯನಗರ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ನ ವಿವಿಧ ಕಲಂಗಳು ಹಾಗೂ ಕಾಪಿರೈಟ್ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಎಂಜಿನಿಯರಿಂಗ್ ವರ್ಕ್ಸ್ ನ ವ್ಯಕ್ತಿಯು, ಶಿಕ್ಷಣ ಸಂಸ್ಥೆಯೊಂದರಲ್ಲಿ ರೂಪಿಂಗ್ ಕೆಲಸ ಮಾಡುತ್ತಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದರು.

ಇದರ ಆಧಾರದ ಮೇಲೆ ಪೊಲೀಸರು ಗುರುಪುರದ ಟ್ರೇಡಿಂಗ್ ಮಾಲೀಕನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ, ಅಕ್ರಮ ಪತ್ತೆ ಹಚ್ಚಿದ್ದರು. ಸದರಿ ಅಂಗಡಿ ಮಾಲೀಕನ ವಿರುದ್ದ ಕೇಸ್ ದಾಖಲಿಸಿದ್ದಾರೆ.
ಎಸ್ಪಿ, ಎಎಸ್ಪಿ, ಡಿವೈಎಸ್ಪಿ ಮಾರ್ಗದರ್ಶನದಲ್ಲಿ ಜಯನಗರ ಠಾಣೆ ಇನ್ಸ್’ಪೆಕ್ಟರ್ ಸಿದ್ದೇಗೌಡ, ಸಬ್ ಇನ್ಸ್’ಪೆಕ್ಟರ್ ಕೆ ಎನ್ ಹಳ್ಳಿಯವರ್ ರವರು ಪ್ರಕರಣದ ತನಿಖೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post