ಕಲ್ಪ ಮೀಡಿಯಾ ಹೌಸ್ | ಉಡುಪಿ |
ಶ್ರೀಕೃಷ್ಣ ಮಠಕ್ಕೆ ಪ್ರಧಾನಿ ನರೇಂದ್ರ ಮೋದಿಯವರು #NarendraModi ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಹೆಜ್ಜೆ ಹೆಜ್ಜೆಗೂ ಹದ್ದಿನ ಕಣ್ಣಿಡಲಾಗಿದ್ದು, ಹಲವು ರೀತಿಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಈ ಕುರಿತಂತೆ ಜಿಲ್ಲಾಧಿಕಾರಿ ಟಿ.ಕೆ. ಸ್ವರೂಪ ಅವರು ಹಲವು ರೀತಿಯ ಕ್ರಮಗಳನ್ನು ಕೈಗೊಂಡು ಆದೇಶ ಹೊರಡಿಸಿದ್ದು, ಸಾರ್ವಜನಿಕರು ಇವುಗಳನ್ನು ಪಾಲಿಸುವುದು ಕಡ್ಡಾಯವಾಗಿರುತ್ತದೆ.
ಪ್ರಮುಖವಾಗಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಸೆಕ್ಷನ್ 163 ಅನ್ವಯ ಈ ಆದೇಶ ಜಾರಿಗೊಳಿಸಲಾಗಿದೆ. ಪ್ರಧಾನಿಗಳ ಸಂಚಾರ ಮತ್ತು ಭೇಟಿ ಪ್ರದೇಶದಲ್ಲಿ ಭದ್ರತಾ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಹೆಲಿಪ್ಯಾಡ್ #Helipad ವಠಾರ, ಶ್ರೀ ಕೃಷ್ಣ ಮಠ #SriKrishnaMatha ವಠಾರ ಹಾಗೂ ಪ್ರವಾಸಿ ಮಂದಿರದ ಸುತ್ತಮುತ್ತ ಇರುವ ಅಂಗಡಿ-ಮುಂಗಟ್ಟುಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಸೂಚಿಸಲಾಗಿದೆ.

ಡ್ರೋನ್ ಹಾರಾಟ ನಿಷೇಧ
ಪ್ರಮುಖವಾಗಿ, ನವೆಂಬರ್ 26 ಬೆಳಿಗ್ಗೆ 6 ಗಂಟೆಯಿಂದಲೇ ಜಾರಿಗೆ ಬರುವಂತೆ ನವೆಂಬರ್ 28 ಸಂಜೆ 6 ಗಂಟೆಯವರೆಗೆ ನಗರದ 5 ಕಿಮೀ ವ್ಯಾಪ್ತಿಯಲ್ಲಿ ಡ್ರೋನ್ ಹಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ನೋ ಫ್ಲೈ ಜೋನ್ ಎಂದು ಘೋಷಿಸಲಾಗಿದೆ.
ಸಾರ್ವಜನಿಕರಿಗೆ ಕಡ್ಡಾಯವಾಗಿ ಪಾಲಿಸಬೇಕಾದ್ದು?
ಪ್ರಧಾನಿಯವರ ವೀಕ್ಷಣೆಗೆ ಬರುವ ಸಾರ್ವಜನಿಕರು ಬ್ಯಾಗ್, ನೀರಿನ ಬಾಟಲ್, ಧ್ವಜ, ಸ್ಟಿಕರ್, ಬಲೂನು, ಪಟಾಕಿ, ಲೂಸ್ ಪಾಲಿಥಿನ್ ವಸ್ತುಗಳನ್ನು ತರದಂತೆ ಸೂಚಿಸಲಾಗಿದೆ. ಆದೇಶ ಉಲ್ಲಂಘನೆ ಮಾಡಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಆದಿ ಉಡುಪಿ ಹೆಲಿಪಾಡ್’ನಿಂದ ಕೃಷ್ಣಮಠದವರೆಗೆ ಎರಡು ಹಂತದ ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿದ್ದು, ಡಿವೈಡರ್’ಗಳ ಮೇಲೆ ಕೇಸರಿ ಪತಾಕೆಗಳನ್ನು ಸಾಲು ಸಾಲಾಗಿ ಅಲಂಕರಿಸಲಾಗಿದೆ. ಕೃಷ್ಣಮಠ ಕೂಡ ಪ್ರಧಾನಿಯ ಸ್ವಾಗತದ ಸಿದ್ಧತೆಗಳಲ್ಲಿ ತೊಡಗಿದ್ದು, ಸಂಪೂರ್ಣ ರೋಡ್ ಶೋ ಸುಮಾರು 15 ನಿಮಿಷಗಳವರೆಗೆ ಮುಂದುವರೆಯಲಿದೆ ಎನ್ನಲಾಗಿದೆ.
ಹೇಗಿದೆ ಭದ್ರತಾ ವ್ಯವಸ್ಥೆ?
ಇನ್ನು ಪ್ರಧಾನಿಯವರ ಭೇಟಿ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆಗೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ದಾವಣಗೆರೆ, ಮೈಸೂರು, ಬೆಂಗಳೂರು ಶಿವಮೊಗ್ಗ ಜಿಲ್ಲೆಗಳಿಂದ 3000ಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಲಾಗಿದೆ.
10 ಎಸ್ಪಿ, 27 ಡಿವೈಎಸ್ಪಿ, 49 ಇನ್ಸ್ಪೆಕ್ಟರ್, 127 ಎಸ್’ಐ, 232 ಎಎಸ್’ಐ, 1608 ಪಿಸಿ, 39 ಡಬ್ಲ್ಯೂಪಿಸಿ , 48 ಬಿಡಿಡಿಎಸ್ ಟೀಂ, ಆರು ಕೆಎಸ್’ಆರ್‌ಪಿ, ಆರು ಕ್ಯೂಆರ್’ಟಿ ಟೀಂ ನಿಯೋಜನೆ ಮಾಡಲಾಗಿದೆ. ರೋಡ್ ಶೋ ಮಾರ್ಗದುದ್ದಕ್ಕೂ ಪೊಲೀಸರಿಂದ ನಿರಂತರ ತಪಾಸಣೆ ನಡೆಯಲಿದ್ದು, ನಗರದ ಎಲ್ಲಾ ಕಡೆ ಬಾಂಬ್ ಸ್ಕ್ವಾಡ್’ಗಳಿಂದ ಪರಿಶೀಲನೆ ನಡೆಯುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post