ಕಲ್ಪ ಮೀಡಿಯಾ ಹೌಸ್ | ಕೊಪ್ಪಳ |
ಕೆಲವೇ ದಿನಗಳಲ್ಲಿ ವಿವಾಹವಾಗಿ ಹೊಸ ಜೀವನ ಆರಂಭಿಸಬೇಕಿದ್ದ ಭಾವಿ ದಂಪತಿ ಪ್ರೀ ವೆಡ್ಡಿಂಗ್ ಶೂಟ್ #PreWeddingShoot ಮುಗಿಸಿ ತೆರಳುತ್ತಿದ್ದ ವೇಳೆ ರಸ್ತೆ ಅಪಘಾತದಲ್ಲಿ ದುರ್ಮರಣವನ್ನಪ್ಪಿರುವ ಘಟನೆ ಗಂಗಾವತಿ ತಾಲೂಕಿನ ಚಿಕ್ಕಬೆಣಕಲ್ ಗ್ರಾಮದಲ್ಲಿ ನಡೆದಿದೆ.
ಮೃತ ಭಾವಿ ದಂಪತಿಯನ್ನು ಕೊಪ್ಪಳ #Koppal ತಾಲೂಕಿನ ಹನುಮನಹಟ್ಟಿ ಗ್ರಾಮದ ಕರಿಯಪ್ಪ ಮಡಿವಾಳ ಹಾಗೂ ಕಾರಟಗಿ ತಾಲೂಕಿನ ಮುಷ್ಟೂರು ಗ್ರಾಮದ ಕವಿತಾ ಎಂದು ಗುರುತಿಸಲಾಗಿದೆ.
ಈ ಯುವ ಜೋಡಿಯ ವಿವಾಹ ಡಿ.20 ರಂದು ನಡೆಯುವುದಿತ್ತು. ಇದಕ್ಕೂ ಮುನ್ನ ಇಬ್ಬರೂ ಪ್ರೀ ವೆಡ್ಡಿಂಗ್ ಶೂಟ್’ಗಾಗಿ ತೆರಳಿದ್ದರು. ಮುನಿರಾಬಾದ್ ಪಂಪಾವನ, ಕೂಕನಪಳ್ಳಿಯ ಬೂದೇಶ್ವರ ದೇವಸ್ಥಾನ ಬಳಿ ಪ್ರೀ-ವೆಡ್ಡಿಂಗ್ ಫೋಟೋಶೂಟ್ ಮಾಡಿಸಿಕೊಂಡಿದ್ದರು.
ಪ್ರೀ ವೆಡ್ಡಿಂಗ್ ಶೂಟ್ ಬಳಿಕ ಕರಿಯಪ್ಪ, ಕವಿತಾಳನ್ನು ಬೈಕ್ ಮೇಲೆ ಮುಷ್ಟೂರಿಗೆ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಚಿಕ್ಕಬೆಣಕಲ್ ಗ್ರಾಮದ ಬಳಿ ಲಾರಿಯನ್ನು ಓವರ್ ಟೆಕ್ ಮಾಡುವಾಗ ಎದುರಿಗೆ ಬಂದ ಲಾರಿಯೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಕವಿತಾ ಸ್ಥಳದಲ್ಲೇ ಸಾವನ್ನಪ್ಪಿದ್ದು, ಕರಿಯಪ್ಪ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ಗಂಗಾವತಿ ಗ್ರಾಮೀಣ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸದ್ಯ ಈ ಸಂಬಂಧ ಪ್ರಕರಣ ದಾಖಲು ಮಾಡಿ, ತನಿಖೆ ಆರಂಭಿಸಿದ್ದಾರೆ.
ಕರಿಯಪ್ಪ ಹಾಗೂ ಕವಿತಾ ಮನೆಯವರಿಬ್ಬರು ಮದುವೆಗೆ ಎಲ್ಲಾ ತಯಾರಿ ಮಾಡಿಕೊಂಡಿದ್ದರು. ಆದರೆ ವಿಧಿಯಾಟ ಮಾತ್ರ ಇಬ್ಬರನ್ನು ಹಸೆಮಣೆಗೆ ಏರಿಸುವ ಬದಲು ಮಸಣವನ್ನು ಸೇರಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















