ಕಲ್ಪ ಮೀಡಿಯಾ ಹೌಸ್ | ಪುತ್ತೂರು |
ಕಲೆ, ಸಂಸ್ಕೃತಿ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಬೀಡಾಗಿರುವ ಪುತ್ತೂರಿನ #Puttur ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಪರೂಪದೊಂದು ಕಾರ್ಯಕ್ರಮ ಜ.11ರ ಆದಿತ್ಯವಾರದಂದು ನಡೆಯಲಿದೆ.
ಹೌದು… ಭರತನಾಟ್ಯದಲ್ಲಿ #Bharatanatyam ರಾಜ್ಯದಲ್ಲೇ ಖ್ಯಾತಿ ಪಡೆದಿರುವ ಪುತ್ತೂರಿನ ವಿದ್ವಾನ್ ಬಿ. ದೀಪಕ್ ಕುಮಾರ್ ಅವರ `ನೃತ್ಯೋತ್ಕ್ರಮಣ` ಎಂಬ ಶೀರ್ಷಿಕೆಯಡಿಯಲ್ಲಿ ವಿಶೇಷ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಆಯೋಜಿಸಿದೆ.
ವಿದ್ವಾನ್ ದೀಪಕ್ ಕುಮಾರ್ ಅವರು ಭರತನಾಟ್ಯ ರಂಗ ಪ್ರವೇಶ ಮಾಡಿ 30 ವರ್ಷ ಸಲ್ಲುತ್ತಿರುವ ಹಿನ್ನೆಲೆಯಲ್ಲಿ ಮೂರು ದಶಕದ ಹಿಂದೆ ನಡೆದ ಕಾರ್ಯಕ್ರಮದ ಮರುಸೃಷ್ಠಿ ಈಗ ಮತ್ತೆ ನಡೆಯಲಿದೆ. ಇಂತಹ ಕಾರ್ಯಕ್ರಮ ಬಹುತೇಕ ರಾಜ್ಯದಲ್ಲೇ ಪ್ರಥಮ ಎನ್ನಬಹುದಾಗಿದೆ.
ಜ.11ರ ಆದಿತ್ಯವಾರ ಪುತ್ತೂರು ತೆಂಕಿಲದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಸಂಜೆ 5 ಗಂಟೆಯಿಂದ ಈ ರಂಗಪ್ರವೇಶ ಸ್ಮೃತಿ ಸಂಧ್ಯಾ ವಿಶೇಷ ಕಾರ್ಯಕ್ರಮ ನಡೆಯಲಿದೆ.
ಬೆಂಗಳೂರಿನ ಶ್ರೀ ರಾಜರಾಜೇಶ್ವರಿ ಕಲಾನಿಕೇತನದ ನೃತ್ಯ ಕಲಾವಿದರು ಮತ್ತು ಗುರುಗಳಾದ ಡಾ. ವೀಣಾ ಮೂರ್ತಿ ವಿಜಯ್, ಮಂಗಳೂರು ಕೊಲ್ಯದ ನಾಟ್ಯ ನಿಕೇತನದ ನೃತ್ಯ ಕಲಾವಿದರು ಮತ್ತು ಗುರುಗಳಾದ ವಿದುಷಿ ರಾಜಶ್ರೀ ಉಳ್ಳಾಲ, ಪುತ್ತೂರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಸದಸ್ಯರಾದ ಡಾ.ಆಶಾ ಅವರುಗಳು ಅಭ್ಯಾಗತರಾಗಿ ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ಪುತ್ತೂರಿನ ಪತ್ರಕರ್ತರಾದ ಲೋಕೇಶ್ ಬನ್ನೂರು ಅವರಿಗೆ ಗೌರವಾರ್ಪಣೆ ಸಲ್ಲಿಸಲಾಗುತ್ತದೆ.
ನಟುವಾಂಗ ಮತ್ತು ಹಾಡುಗಾರಿಕೆಯಲ್ಲಿ ಪುತ್ತೂರಿನ ವಿದುಷಿ ಪ್ರೀತಿಕಲಾ, ಮೃದಂಗದಲ್ಲಿ ಬೆಂಗಳೂರಿನ ವಿದ್ವಾನ್ ಜಿ. ಗುರುಮೂರ್ತಿ, ಕೊಳಲಿನಲ್ಲಿ ಮಂಗಳೂರಿನ ಕು. ಮೇಧಾ ಉಡುಪ ಹಾಗೂ ಪಿಟೀಲಿನಲ್ಲಿ ಉಪ್ಪಂಗಳದ ಕು. ತನ್ಮಯಿ ಅವರುಗಳು ಹಿಮ್ಮೇಳದಲ್ಲಿ ಸಹಕಾರ ನೀಡಲಿದ್ದಾರೆ.
ಪುತ್ತೂರಿನಲ್ಲಿ ನಡೆಯುತ್ತಿರುವ ಅಪರೂಪದ ಈ ವಿಭಿನ್ನ ಪ್ರಯತ್ನದ ಕಾರ್ಯಕ್ರಮಕ್ಕೆ ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸಾಕ್ಷಿಯಾಗಬೇಕು ಎಂದು ಕೋರಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















