ಕಲ್ಪ ಮೀಡಿಯಾ ಹೌಸ್ | ಕಾನೂನು ಕಲ್ಪ – ಪ್ರಶ್ನೋತ್ತರ ಅಂಕಣ |
ಪ್ರಶ್ನೆ: ನನ್ನ ಹೆಸರು ಸರಸ್ವತಿ, ವಯಸ್ಸು 54, ಶಿವಮೊಗ್ಗ ನಿವಾಸಿ. ನನ್ನ ತವರು ಬಾಗಲಕೋಟೆ ಜಿಲ್ಲೆ. ನಮ್ಮ ತಂದೆ ಸಗಟು ಧವಸ-ಧಾನ್ಯ ವ್ಯಾಪಾರ ನಡೆಸುತ್ತಿದ್ದರು. ಅವರಿಗೆ ನಾನು ಸೇರಿದಂತೆ ಮೂವರು ಹೆಣ್ಣು ಮಕ್ಕಳು ಹಾಗು ಇಬ್ಬರು ಗಂಡು ಮಕ್ಕಳು. ತಂದೆಯ ಮರಣದ ನಂತರ ಕುಟುಂಬದ ಆಸ್ತಿ ಹಂಚಿಕೆಯ ವಿಚಾರವಾಗಿ ನನ್ನ ಕಿರಿಯ ಸಹೋದರ ನ್ಯಾಯಾಲಯದಲ್ಲಿ ಅಸಲು ದಾವೆ ಹೂಡಿರುತ್ತಾನೆ. ಆ ದಾವೆಯಲ್ಲಿ ನಾವು ಮೂವರು ಸಹೋದರಿಯರನ್ನು ಪಾರ್ಟಿ ಮಾಡಲಾಗಿದೆ. ಆಗಸ್ಟ್ 2023ರಲ್ಲಿ ನನಗೆ ಪ್ರಕರಣದ ನೋಟೀಸ್ ಬಂದಿತ್ತಾದರೂ, ತೀವ್ರ ಬೆನ್ನು ನೋವು ಹಾಗು ಇತರೆ ಅರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ನಾನು ನೋಟೀಸ್ ಸ್ವೀಕರಿಸಿದರೂ ನ್ಯಾಯಾಲಯದ ಕಲಾಪಕ್ಕೆ ಹಾಜರಾಗಲಿಲ್ಲ. ಹಾಗಾಗಿ ನನ್ನ ಗೈರು ಹಾಜರಿಯನ್ನು ex-parte ಎಂದು ಪರಿಗಣಿಸಿ, ನನ್ನ ಅನುಪಸ್ಥಿತಿಯಲ್ಲಿ ಕೇಸ್ ಮುಂದುವರೆದು ಈಗ ವಾದಿಯ ಪಾಟೀಸವಾಲು ಹಂತಕ್ಕೆ ತಲುಪಿದೆ ಎಂದು ತಿಳಿದು ಬಂದಿದೆ. ಈಗ ನನ್ನ ಆರೋಗ್ಯದಲ್ಲಿ ಸುಧಾರಣೆಯಾಗಿದ್ದು, ನಾನು ಈ ಹಂತದಲ್ಲಿ ಪ್ರಕರಣದಲ್ಲಿ ಭಾಗವಹಿಸಲು ಅವಕಾಶವಿದೆಯೇ?
ಉತ್ತರ: ಈ ಹಂತದಲ್ಲಿ ನೀವು ಪ್ರಕರಣದಲ್ಲಿ ಭಾಗವಹಿಸಲು ಅವಕಾಶವಿದೆ. ನೋಟೀಸ್ ಸ್ವೀಕರಿಸಿದಾಗ ನೀವು ಖುದ್ದಾಗಿ ಅಥವಾ ನಿಮ್ಮ ವಕೀಲರ ಮೂಲಕ ಪ್ರಕರಣದಲ್ಲಿ ಭಾಗವಹಿಸಿ ನಿಮ್ಮ ಆಕ್ಷೇಪಣೆಗಳು ಹಾಗು ಪ್ರತಿವಾದ ಪತ್ರವನ್ನು ಸಲ್ಲಿಸಬೇಕಿತ್ತು. ಈ ಹಂತದಲ್ಲಿ ನೀವು ಪ್ರಕರಣದಲ್ಲಿ ಭಾಗವಹಿಸಲು ಸಿವಿಲ್ ಪ್ರಕ್ರಿಯಾ ಸಂಹಿತೆಯ (CPC) ಆರ್ಡರ್ 9 ರೂಲ್ 7 ರ ಅಡಿಯಲ್ಲಿ ಮಧ್ಯಂತರ ಅರ್ಜಿಯನ್ನು ಸಲ್ಲಿಸಿ ನಿಮ್ಮನ್ನು ಪ್ರಕರಣದಲ್ಲಿ ಮುಂದುವರೆಯಲು ಅವಕಾಶ ನೀಡುವಂತೆ ಕೋರಬಹುದು. ಅರ್ಜಿಯೊಂದಿಗೆ ಸಲ್ಲಿಸುವ ಪ್ರಮಾಣಪತ್ರದಲ್ಲಿ ಗೈರುಹಾಜರಿಗೆ ಕಾರಣವಾದ ಅರೋಗ್ಯ ಸಮಸ್ಯೆಯ ಬಗ್ಗೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿ, ಪ್ರಕರಣದಲ್ಲಿ ಮುಂದುವರೆಯಲು ನ್ಯಾಯಾಲಯದಿಂದ ನಿಮ್ಮ ಪರವಾಗಿ ಆದೇಶ ಪಡೆಯಬಹುದು. ಆಗ ನೀವು ಪ್ರಕರಣದಲ್ಲಿ ಪಕ್ಷಗಾರರಾಗಿ(party) ಮುಂದುವರೆಯುವಿರಿ. ನಂತರ ನೀವು ಪ್ರತಿವಾದ ಪತ್ರವನ್ನು ಕೂಡ ಸಲ್ಲಿಸಬಹುದು.
ಆತ್ಮೀಯ ಓದುಗರೇ,
ಕಲ್ಪ ಮೀಡಿಯಾ ಹೌಸ್(ರಿ.) ಅಡಿಯಲ್ಲಿ ಪ್ರಕಟವಾಗುತ್ತಿರುನ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದಲ್ಲಿ ನಮ್ಮ ಓದುಗರಿಗಾಗಿ `ಕಾನೂನು ಕಲ್ಪ’ ಎಂಬ ಹೊಸ ಅಂಕಣವನ್ನು ಆರಂಭಿಸಲಾಗಿದ್ದು, ಪ್ರತಿ ಶುಕ್ರವಾರ ಪ್ರಕಟವಾಗಲಿದೆ. ಶಿವಮೊಗ್ಗ-ಭದ್ರಾವತಿಯ ಖ್ಯಾತ ವಕೀಲರು ಹಾಗೂ ಹಿರಿಯ ಪತ್ರಕರ್ತರೂ ಆಗಿರುವ ಶ್ರೀ ವೀರೇಂದ್ರ ಪಿ.ಎಂ. ಅವರು ಯಾವುದೇ ರೀತಿಯ ಕಾನೂನು ಸಮಸ್ಯೆಗಳು, ಕಾನೂನಿನ ಕುರಿತಾಗಿನ ಮಾರ್ಗದರ್ಶನ ಮಾಡಲಿದ್ದಾರೆ. ಸಾರ್ವಜನಿಕರು ತಮಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದರೆ ನಮಗೆ ಕಳುಹಿಸಬಹುದು. ಆ ಪ್ರಶ್ನೆಗಳಿಗೆ ವಕೀಲರಾದ ಶ್ರೀ ವೀರೇಂದ್ರ ಪಿ.ಎಂ. ಅವರು ಉತ್ತರ ನೀಡಲಿದ್ದಾರೆ. ನಿಮ್ಮ ಪ್ರಶ್ನೆಗಳು ಸ್ಪಷ್ಟ, ಸ್ಪುಟ, ನೇರವಾಗಿರಲಿ.
ನಿಮ್ಮ ಪ್ರಶ್ನೆಗಳನ್ನು ಈ ಕೆಳಗಿನ ವಾಟ್ಸಪ್ ಸಂಖ್ಯೆ 9481252093 (ವಾಟ್ಸಪ್ ಮಾತ್ರ) ಅಥವಾ ಇ-ಮೇಲ್ info@kalpa.news ಗೆ ಕಳುಹಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















