ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹೊಸನಗರದ ಶ್ರೀ ವೀರಶೈವ ಪತ್ತಿನ ಸಹಕಾರ ಸಂಘದ ಕಾನೂನು ಪ್ರಕಾರ ಕೂಡಲೇ ವಿಶೇಷಾಧಿಕಾರಿಗಳನ್ನು ನೇಮಿಸಿ ಮುಂದಿನ ಹೊಸ ಆಡಳಿತ ಮಂಡಳಿ ರಚನೆಗೆ ಚುನಾವಣಾ ಪ್ರಕ್ರಿಯೆ ನಡೆಸುವಂತೆ ಆಗ್ರಹಿಸಿ ಸಂಘದ ಠೇವಣಿದಾರರು, ಸದಸ್ಯರು ಮತ್ತು ಮಾಜಿ ಆಡಳಿತ ಮಂಡಳಿಯ ಸದಸ್ಯರುಗಳು ಇಂದು ಶಿವಮೊಗ್ಗದ ಸಹಕಾರ ಇಲಾಖೆಯ ಉಪನಿಬಂಧಕರ ಕಛೇರ ಮುಂದೆ ಧರಣಿ ನಡೆಸಿದರು.
ಕಳೆದ ಹಲವು ವರ್ಷಗಳಿಂದ ಈ ಸಹಕಾರ ಸಂಸ್ಥೆಯಲ್ಲಿ ವ್ಯವಹಾರ ಮಾಡಿಕೊಂಡು ಬಂದಿದ್ದೇವೆ. ಇದು ತಾಲ್ಲೂಕು ಮಟ್ಟದ ಸಂಸ್ಥೆಯಾಗಿದ್ದು, ಆಡಳಿತ ಮಂಡಳಿಯಲ್ಲಿ 15 ಸದಸ್ಯ ಬಲವಿದ್ದು 13 ಸದಸ್ಯರು 2021 ರಿಂದ 5 ವರ್ಷದವರೆಗೆ ಆಯ್ಕೆಯಾಗಿದ್ದು, ಇದರಲ್ಲಿ ಎರಡು ನಿರ್ದೇಶಕರು ಮರಣ ಹೊಂದಿದ್ದು, ಉಳಿದ 11 ನಿರ್ದೇಶಕರ ಪೈಕಿ 4 ನಿರ್ದೇಶಕರು ರಾಜೀನಾಮೆ ನೀಡಿದ್ದು ಆಡಳಿತ ಮಂಡಳಿಯ ಒಲವು 7ಕ್ಕೆ ಕುಸಿದಿದ್ದು ಕೋರಂ ಕೊರತೆಯಿಂದ ಸಹಕಾರ ಸಂಘಗಳ 1959 ಕಲಂ-31(1)ರ ಪ್ರಕಾರ ಅಧಿಕಾರ ಹೋಗಿದ್ದು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ಈ ಸಂಬಂಧ 2-12-2025ರಂದು ಉಪನಿಬಂಧಕರ ಕಛೇರಿಗೆ ಲಿಖಿತಮಾಹಿತಿ ನೀಡಿ, ವಿಶೇಷಾಧಿಕಾರಿಗಳನ್ನು ನೇಮಿಸಲು ತಿಳಿಸಿದ್ದಾರೆ.
ಆದರೂ ಕೂಡ ಇದೂವರೆಗೆ ಸಂಘಕ್ಕೆ ಕಾನೂನು ಪ್ರಕಾರ ವಿಶೇಷಾಧಿಕಾರಿಗಳ ನೇಮಕವಾಗಿದೆ ಇರುವ ಕಾರಣ ಸಂಘದ ಸದಸ್ಯರಿಗೆ ಸಾಲ ಪಡೆಯಲು, ಠೇವಣಿ ಪಡೆಯಲು, ಛಾಪಾ ಕಾಗದ ಪಡೆಯಲು, ಇನ್ನಿತರ ಕೆಲಸಕ್ಕೆ ತೊಂದರೆಯಾಗಿದ್ದು ಸಂಘದೊಳಗೆ ಆಂತರಿಕ ಸಂಘರ್ಷದಿಂದಾಗಿ ಬೆಳವಣಿಗೆ ಕುಂಠಿತವಾಗಿದೆ. ಆದ್ದರಿಂದ ಸಂಘದ ಸದಸ್ಯರೆಲ್ಲರೂ ಇಂದು ನಿಬಂಧಕರ ಕಛೇರಿಗೆ ಹಾಜರಾಗಿ ಸತ್ಯಾಗ್ರಹ ಮಾಡುತ್ತಿದ್ದು ಕೂಡಲೇ ಆಡಳಿತ ಮಂಡಳಿ ಜಾಗಕ್ಕೆ ವಿಶೇಷಾಧಿಕಾರಿ ನೇಮಿಸುವಂತೆ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಹೆಚ್.ಪಿ. ನಂಜುಂಡಪ್ಪ, ಡಿ.ವಿ. ರೇವಣಪ್ಪ, ಚನ್ನಬಸಪ್ಪ, ತೀರ್ಥೇಶ್, ಶರತ್, ವೈ.ಬಿ. ಮಹೇಶ್ವರಪ್ಪ, ಸಿ.ವಿ. ನಾಗರಾಜ್ ಮತ್ತಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















