ಕಲ್ಪ ಮೀಡಿಯಾ ಹೌಸ್ | ಮೈಸೂರು |
ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ, ಕೋಲಾರ ಜಿಲ್ಲೆ ಮುಳಬಾಗಿಲು ಶ್ರೀಪಾದರಾಜರ ಮಠದ ಪರಂಪರೆಯ 24ನೇ ಯತಿಗಳಾದ ಶ್ರೀ ಗುಣನಿಧಿ ತೀರ್ಥ ಸ್ವಾಮೀಜಿ ಆರಾಧನಾ ಮಹೋತ್ಸವ, ಸಮಗ್ರ ರಾಮಾಯಣ ಮಂಗಳ ಮಹೋತ್ಸವ ಭಾನುವಾರ ವಿಜೃಂಭಣೆಯಿಂದ ನೆರವೇರಿತು.
ತಿ. ನರಸೀಪುರ ತಾಲೂಕಿನ ತಾಯೂರು ಗ್ರಾಮದ ಕಪಿಲಾ ನದಿ ತೀರದಲ್ಲಿರುವ ಶ್ರೀಗಳ ಮೂಲ ವೃಂದಾವನ ಸನ್ನಿಧಾನದಲ್ಲಿ ಬೆಳಗ್ಗೆ 8ಕ್ಕೆ ವೃಂದಾವನಕ್ಕೆ ಅಭಿಷೇಕ, ಪಂಚಾಮೃತ, ವಿಶೇಷ ಅಲಂಕಾರ ನೆರವೇರಿತು. ಈ ಸಂದರ್ಭ ಅನುಗ್ರಹ ಸಂದೇಶ ನೀಡಿದ ಮುಳಬಾಗಿಲು ಶ್ರೀಪಾದರಾಜರ ಮಠದ ಶ್ರೀ ಸುಜಯನಿಥಿ ತೀರ್ಥ ಸ್ವಾಮೀಜಿ, ಮಾಧ್ವ ವೇದಾಂತ ಸಾಮ್ರಾಜ್ಯಕ್ಕೆ ಶ್ರೀ ಗುಣನಿಧಿ ತೀರ್ಥ ಸ್ವಾಮೀಜಿ ಕೊಡುಗೆ ಅನನ್ಯವಾಗಿದೆ ಎಂದರು.
ಪೂರ್ವಾಶ್ರಮದಲ್ಲೂ ಮೈಸೂರು ಆಸ್ಥಾನದಲ್ಲಿ ವಿದ್ವಾಂಸರಾಗಿ ಅವರು ಕೀರ್ತಿ ಗಳಿಸಿದ್ದರು. ಸನ್ಯಾಸ ಸ್ವೀಕಾರ ನಂತರ ಮೈಸೂರು ಮಹಾರಾಜರಿಂದ ಗೌರವಾದರ ಪಡೆದ ಮಾಧ್ವಯತಿಗಳಾಗಿದ್ದರು ಎಂದರು. ಶ್ರೀ ಮಠದ ಪರಂಪರೆಯಯಲ್ಲಿ 1798-1804ರವರೆಗೆ ಸಂಸ್ಥಾನವನ್ನು ಆಳಿ, ನೂರಾರು ವಿದ್ವಾಂಸರನ್ನೂ ಶ್ರೀ ಗುಣನಿಧಿ ತೀರ್ಥರು ಪ್ರೋತ್ಸಾಹಿಸಿ ಬೆಳೆಸಿದ್ದರು ಎಂದರು.
ಸಂಸ್ಥಾನ ಪೂಜೆ:
ಶ್ರೀ ಸುಜಯನಿಧಿ ತೀರ್ಥ ಸ್ವಾಮೀಜಿ ಇದೇ ಸಂದರ್ಭ ಸಂಸ್ಥಾನ ಪ್ರತಿಮಾ ರಂಗವಿಠಲ ದೇವರ ಮಹಾಪೂಜೆ ನೆರವೇರಿಸಿದರು. ಶ್ರೀ ಗೋಪಾಲಕೃಷ್ಣ ದೇವರು, ಜನಮೇಜಯ ಪ್ರತಿಷ್ಠಿತ ಪ್ರಾಣದೇವರು, ಶ್ರೀಪಾದರಾಜರ ಮೃತ್ತಿಕಾ ವೃಂದಾವನಗಳಿಗೂ ವಿಶೇಷ ಪೂಜಾರತಿ ಮಾಡಿದರು. ಸೋಸಲೆ ವ್ಯಾಸರಾಜ ಮಠದ ದಿವಾನರಾದ ಪಂಡಿತ ಬ್ರಹ್ಮಣ್ಯಾಚಾರ್ಯ, ಬೆಮ್ಮತ್ತಿ ವೆಂಕಟೇಶ ಆಚಾರ್ಯ, ವಿಜೇಂದ್ರ ಆಚಾರ್ಯ, ನಾಗಸಂಪಿಗೆ ಆಚಾರ್ಯ ಇತರರು ಪ್ರವಚನ ನೀಡಿದರು.
ಪಂಡಿತ ಬದರಿ ಆಚಾರ್ಯ ಮತ್ತು 40 ಜನ ಶಿಷ್ಯರು ಸಮಗ್ರ ರಾಮಾಯಣ ಪಾಠದ ಮಂಗಳ ಮಹೋತ್ಸವ ಸಮರ್ಪಣೆ ಮಾಡಿದ್ದು ವಿಶೇಷವಾಗಿತ್ತು. ಶ್ರೀ ಹರಿ ವಾಯುಸ್ತುತಿ ಪಾರಾಯಣ, ಅಲಂಕಾರ ಪಂಕ್ತಿ, ತೀರ್ಥ ಪ್ರಸಾದ ವಿತರಣೆ ನೆರವೇರಿತು.
ತಾಯೂರು ವಂಶಸ್ಥರಾದ ಟಿ.ಎನ್. ಮಾಧವ ಮೂರ್ತಿ, ಟಿ.ಎನ್. ವೇಣುಗೋಪಾಲ, ಟಿ.ಎನ್. ರಂಗನಾಥ, ಕೇಶವಮೂರ್ತಿ, ಟಿ.ಜಿ. ರಾಘವೇಂದ್ರ, ಪ್ರಧಾನ ಅರ್ಚಕ ಗೋಪಿನಾಥಾಚಾರ್ ಮತ್ತು ರಿಸರ್ವ್ ಬ್ಯಾಂಕ್ ಸಹಾಯಕ ಪ್ರಧಾನ ವ್ಯವಸ್ಥಾಪಕ ಡಾ. ಗಿರಿಧರ ವಿ. ತಾಯೂರು ಉಪಸ್ಥಿತಿಯಲ್ಲಿ ಧಾರ್ಮಿಕ ಕಾರ್ಯ ನೆರವೇರಿದವು. ನೂರಾರು ಭಕ್ತರು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















