ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪರಿಶಿಷ್ಟರಿಗೆ ಮೀಸಲಾಗಿಟ್ಟಿದ್ದ ಹಣವನ್ನು ಇತರೆ ಯೋಜನೆಗಳಿಗೆ ವರ್ಗಾಯಿಸಿರುವುದನ್ನು ವಿರೋಧಿಸಿ ಮತ್ತು ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಮುಖಂಡರು ಇಂದು ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ (ಎಸ್‍ಸಿ ಮತ್ತು ಎಸ್‍ಟಿ) ಸಮುದಾಯಗಳ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ ಸುಮಾರು 42,000 ಕೋಟಿಯಷ್ಟು ಬೃಹತ್ ಮೊತ್ತದಲ್ಲಿ 25 ಸಾವಿರ ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸುವ ಮೂಲಕ ರಾಜ್ಯ ಸರ್ಕಾರವು ಸಾಮಾಜಿಕ ನ್ಯಾಯದ ವಿರುದ್ಧವಾಗಿ ನಡೆದುಕೊಂಡಿದೆ. ಅಷ್ಟೇ ಅಲ್ಲ ತಾನೇ ರೂಪಿಸಿರುವ ಕಾಯ್ದೆಯನ್ನು ಇಂತಹ ಅನುಚಿತ ಕ್ರಮದ ಮೂಲಕ ಅದು ಉಲ್ಲಂಘಿಸಿದೆ ಎಂದು ಆರೋಪಿಸಿದರು.
ಇತ್ತೀಚಿಗೆ ಹುಬ್ಬಳ್ಳಿ ಸಮೀಪದ ಇನಾಂ ವೀರಾಪುರ ಗ್ರಾಮದ ದಲಿತ ಯುವಕ ಅದೇ ಗ್ರಾಮದ ಮೇಲ್ಜಾತಿಯ ಮಾನ್ಯ ಎಂಬ ಯುವತಿಯನ್ನ ಪ್ರೀತಿಸಿದ್ದೆ ತಪ್ಪಾಗಿ ಹೋಯ್ತು. ಜಾತಿವಂತರ ಕ್ರೌರ್ಯ ಎಷ್ಟು ಮಡಗಟ್ಟಿದೆ ಎಂದರೆ ಹುಡುಗಿಯ ಅಪ್ಪನೇ ಖುದ್ದು ನಿಂತು ದಲಿತ ಯುವಕನನ್ನು ಪ್ರೀತಿ ಮಾಡಿದ ಒಂದೇ ಕಾರಣಕ್ಕಾಗಿ ತಾನು ಹೆತ್ತ 7 ತಿಂಗಳ ಗರ್ಭಿಣಿ ಮಗಳನ್ನೇ ಬರ್ಬರವಾಗಿ ಕೊಂದು ಹಾಕಿದ. ಇನಾಮ್ ವೀರಾಪುರದಲ್ಲಿ ನಡೆದದ್ದು ಒಂದು ಬಿಡಿ ಘಟನೆಯಲ್ಲ. ಅದು ಇಡೀ ದೇಶದ ಸ್ಥಿತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
2026-27ರ ರಾಜ್ಯ ಬಜೆಟ್ ನಲ್ಲಿ ದಲಿತರ ಜನಸಂಖ್ಯೆಗನುಗುಣವಾಗಿ ಶೇ. 24.1 ರಷ್ಟು ಅನುದಾನ ಮೀಸಲಿರಿಸಬೇಕು. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕರಾದ ಪೆÇ್ರ.ಬಿ.ಕೃಷ್ಣಪ್ಪನವರಿಗೆ ಸರ್ಕಾರ “ಕರ್ನಾಟಕ ರತ್ನ” ಪ್ರಶಸ್ತಿ ಘೋಷಣೆ ಮಾಡಬೇಕು. ಪರಿಶಿಷ್ಟ ಜಾತಿ-ವರ್ಗಗಳ ಭೂ ಪರಭಾರೆ ನಿಷೇಧ ಕಾಯ್ದೆ (ಪಿಟಿಸಿಎಲ್) ಸೆಕ್ಷನ್ 3(1) (ಬಿ)ನಲ್ಲಿರುವ ಉಖಂಓಖಿಇಆ ಐಂಓಆ ಎಂಬ ಪದವನ್ನು ಬದಲಾಯಿಸಿ ಅಇಖಖಿಂIಓ ಐಂಓಆ ಎಂದು ತಿದ್ದುಪಡಿ ಮಾಡಬೇಕು ಎಂದು ಮನವಿದಾರರು ತಿಳಿಸಿದರು.
ಡಾ.ಬಾಬುಜಗಜೀವನ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ಲಿಡ್ಕರ್ ನಿಗಮಕ್ಕೆ ರೂ 500 ಕೋಟಿ ಅನುದಾನ ಬಿಡುಗಡೆ ಮಾಡಬೇಕು. ಸಮಾಜ ಕಲ್ಯಾಣ ಇಲಾಖೆ ಅದೀನದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಆರ್ಥಿಕ ಅಭಿವೃದ್ಧಿಗಾಗಿ ಅನುಷ್ಠಾನಗೊಳಿಸುತ್ತಿರುವ ಗಂಗಾ ಕಲ್ಯಾಣ, ಭೂ ಒಡೆತನ, ನೇರಸಾಲ, ಉದ್ಯಮಶೀಲತಾ, ಸ್ವಾವಲಂಬಿ ಸಾರಥಿ ಯೋಜನೆ ಸಾಲ ಸೌಲಭ್ಯ ಯೋಜನೆಗಳ ಘಟಕ ವೆಚ್ಚ ದ್ವಿಗುಣಗೊಳಿಸಿ ಗುರಿ ಹೆಚ್ಚಳ ಮಾಡಬೇಕು.
ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ನಡೆಯುತ್ತಿರುವ ವಸತಿ ಶಾಲೆಗಳನ್ನು ವಸತಿ ಕಾಲೇಜುಗಳನ್ನಾಗಿ ಮೇಲ್ ದರ್ಜೆಗೇರಿಸಬೇಕು. ಬೆಲೆ ಏರಿಕೆಗೆ ತಕ್ಕಂತೆ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಮಾಸಿಕ ಭೋಜನ ವೆಚ್ಚ 3000 ರೂ.ಗಳ ವರೆಗೆ ಹೆಚ್ಚಳ ಮಾಡಬೇಕು.
ಸಮಾಜ ಕಲ್ಯಾಣ ಇಲಾಖೆ ಅದೀನದಲ್ಲಿ ಬರುವ ಶಾಲೆ ಮತ್ತು ವಸತಿ ನಿಲಯಗಳಲ್ಲಿ ಕಳೆದ 5 ವರ್ಷಗಳಿಗೂ ಮೇಲ್ಪಟ್ಟು ನಿರಂತರವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಗುತ್ತಿಗೆ-ಹೊರಗುತ್ತಿಗೆ ನೌಕರರನ್ನು ಕಾಯಂ ಗೊಳಿಸಬೇಕು. ಚುನಾಯಿತ ಪ್ರತಿನಿಧಿಗಳಿಗೆ ಹೆಚ್ಚಿಸಿದಂತೆ ದೇವದಾಸಿ,ವಿಧವಾ ಮಹಿಳೆಯರು, ವೃದ್ಧರು, ಹಾಗೂ ವಿಕಲಚೇತನರಿಗೆ ನೀಡುತ್ತಿರುವ ಮಾಸಿಕ ವೇತನವನ್ನು 05 ಸಾವಿರ ರೂಗಳವರೆಗೆ ಹೆಚ್ಚಿಸಬೇಕು ಎಂಬುದೂ ಸೇರಿದಂತೆ ಸುಮಾರು 17ಕ್ಕೂ ಹೆಚ್ಚು ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮನವಿ ನೀಡುವ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ, ಜಿಲ್ಲಾ ಸಂಚಾಲಕ ಏಳುಕೋಟಿ, ಪ್ರಮುಖರಾದ ಶಿವಬಸಪ್ಪ, ಹರಿಗೆ ರವಿ, ಚಂದ್ರಪ್ಪ ಜೋಗಿ, ಕೃಷ್ಣ ಬೊಮ್ಮನಕಟ್ಟೆ, ಎಂ. ರಮೇಶ್ ಚಿಕ್ಕಮರಡಿ, ನಾಗರಾಜ್ ಕಾಚಗೊಂಡನಹಳ್ಳಿ, ಜಗದೀಶ್ ಚರ್ಚಿಗುಂಡಿ, ಬಸವರಾಜ್ ಹಸ್ವಿ, ನಾಗರಾಜ್, ಯಡವಾಲ ಹನುಮಂತಪ್ಪ, ಮನ್ಸೂರ್ ಲಕ್ಕವಳ್ಳಿ, ಚೇತನ್‍ಕುಮಾರ್ ಹಸೂಡಿ, ಸೇರಿದಂತೆ ಹಲವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















