ಕಲ್ಪ ಮೀಡಿಯಾ ಹೌಸ್ | ಭರಮಸಾಗರ |
ಮಹಾಶಿವರಾತ್ರಿ ಅಂಗವಾಗಿ ಭರಮಸಾಗರದಲ್ಲಿ ಸ್ಥಾಪಿತವಾಗಿರುವ ಈಶ್ವರ ಸ್ವರೂಪದ ಶ್ರೀ ಸಿಬಾರ ಮೈಲಾರಲಿಂಗ ಸ್ವಾಮಿಗೆ ಭಕ್ತಿಭಾವಪೂರ್ಣ ವಿಶೇಷ ಪೂಜೆ ಹಾಗೂ ರುದ್ರಾಭಿಷೇಕ ಕಾರ್ಯಕ್ರಮಗಳು ವೈಭವದಿಂದ ನೆರವೇರಿದವು.
ಪ್ರತಿವರ್ಷದಂತೆ ಈ ವರ್ಷವೂ ನಾಡಿಗೇರ್ ಮನೆತನದವರಿಂದ ಭಕ್ತಿಪೂರ್ವಕವಾಗಿ ಸಾಂಗವಾಗಿ ಪೂಜಾ ಕೈಂಕರ್ಯಗಳನ್ನು ಆಯೋಜಿಸಲಾಗಿತ್ತು.
ಭರಮಸಾಗರದ ಐತಿಹಾಸಿಕ ಕೆರೆಯನ್ನು ಬಿಚ್ಚುಗತ್ತಿ ಭರಮಣ್ಣ ನಾಯಕರು ನಿರ್ಮಿಸಿದ್ದರೆಂದು ಪ್ರಸಿದ್ಧಿ ಹೊಂದಿದೆ. ಅದರ ತಟದಲ್ಲಿರುವ ಶ್ರೀ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ 2006ರಲ್ಲಿ ಈ ಪವಿತ್ರ ಸಿಬಾರ ಕಟ್ಟೆ ಪ್ರತಿಷ್ಠಾಪಿಸಲಾಯಿತು.
ಭರಮಸಾಗರದ ದಿವಂಗತ ಶ್ರೀ ಭೀಮರಾವ್ ನಾಡಿಗೇರ್ ಹಾಗೂ ದಿವಂಗತ ಶ್ರೀ ಮಾಲತೇಶರಾವ್ ನಾಡಿಗೇರ್ ಅವರು ಲೋಕಕಲ್ಯಾಣಾರ್ಥವಾಗಿ ಈ ದೇವರ ಪ್ರತಿಷ್ಠಾಪನೆ ಮಾಡಿರುವುದು ವಿಶೇಷವಾಗಿದೆ. ಅಂದಿನಿಂದಲೂ ಪ್ರತಿವರ್ಷ ಶಿವರಾತ್ರಿ ಸಂದರ್ಭದಲ್ಲಿ ವಿಶೇಷ ಪೂಜೆ, ರುದ್ರಾಭಿಷೇಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಯಿಂದ ನಡೆಯುತ್ತಿವೆ.
ಈ ವರ್ಷದ ಮಹಾಶಿವರಾತ್ರಿ ಸಂದರ್ಭದಲ್ಲಿ ಮುಂಜಾನೆಯಿಂದಲೇ ವೇದಘೋಷಗಳ ನಡುವೆ ಅಭಿಷೇಕ, ಅಲಂಕಾರ, ನೈವೇದ್ಯ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು.
ವಿಶೇಷವಾಗಿ ರುದ್ರಪಠಣದೊಂದಿಗೆ ನಡೆದ ರುದ್ರಾಭಿಷೇಕ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಆಶೀರ್ವಾದ ಪಡೆದರು.
ಮಲ್ಲಾರಿ ರಾವ್, ನಾಗಭೂಷಣ ರಾವ್, ವಿಜಯಕುಮಾರ, ಚಂದ್ರಶೇಖರ್ ಹಾಗೂ ಮುರುಳೀಧರ ನಾಡಿಗೇರ್ ಅವರು ಪೂಜಾ ವಿಧಿಗಳನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಭಕ್ತರು ಹಾಗೂ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.
ಸಂಜೆಯ ವೇಳೆಗೆ ಭಕ್ತರಿಗೆ ಪ್ರಸಾದ ವಿತರಣೆ ವ್ಯವಸ್ಥೆ ಮಾಡಲಾಗಿತ್ತು. ಶಿವನಾಮಸ್ಮರಣೆ ಹಾಗೂ ಭಜನೆಗಳೊಂದಿಗೆ ಭಕ್ತಿಭಾವದ ವಾತಾವರಣ ನಿರ್ಮಾಣಗೊಂಡಿದ್ದು, ಕಾರ್ಯಕ್ರಮವು ಶಾಂತಿಯುತವಾಗಿ ಹಾಗೂ ಭಕ್ತಿಯುತವಾಗಿ ಸಮಾಪ್ತಿಗೊಂಡಿತು.
ಶಿವರಾತ್ರಿಯ ಪವಿತ್ರ ಸಂದರ್ಭದಲ್ಲಿ ಭಕ್ತರ ಮನಸ್ಸಿನಲ್ಲಿ ಆಧ್ಯಾತ್ಮಿಕ ಚೈತನ್ಯ ಮೂಡಿಸುವ ಈ ಕಾರ್ಯಕ್ರಮ ಭರಮಸಾಗರದ ಧಾರ್ಮಿಕ ಪರಂಪರೆಯ ಪ್ರತೀಕವಾಗಿ ಮತ್ತೊಮ್ಮೆ ಬೆಳಗಿತು.
(ವರದಿ: ಮುರುಳೀಧರ ನಾಡಿಗೇರ್)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















