ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪೊಲೀಸರೆಂದು ಹೇಳಿಕೊಂಡು ಉದ್ಯಮಿಯೊಬ್ಬರ ಮನೆಗೆ ನುಗ್ಗಿ ಲಕ್ಷಾಂತರೂ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿರುವ #Businessman’s house robbed ಘಟನೆ ನಗರದ ಬಿಇಎಲ್ ಲೇಔಟ್‌ನಲ್ಲಿ ನಡೆದಿದೆ.
ರಿಯಲ್ ಎಸ್ಟೇಟ್ ಉದ್ಯಮಿ ಮತ್ತು ಸಿವಿಲ್ ಗುತ್ತಿಗೆದಾರ ಹೊಂಬಾಳೆ ಗೌಡ ಅವರ ಮನೆಯಲ್ಲಿ ಈ ಘಟನೆ ನಡೆದಿದ್ದು, ನಾಲ್ವರು ದರೋಡೆಕೋರರ ಗ್ಯಾಂಗ್, 20 ಲಕ್ಷ ರೂ. ನಗದು ಮತ್ತು ಸುಮಾರು 500 ಗ್ರಾಂ ಚಿನ್ನಾಭರಣಗಳನ್ನು ದೋಚಿದ್ದಾರೆ.
ನಾಲ್ವರು ಆರೋಪಿಗಳಲ್ಲಿ ಇಬ್ಬರು ತಾವು ಯಲಹಂಕ ಪೊಲೀಸ್ ಠಾಣೆಗೆ ಸೇರಿದ ಪೊಲೀಸರು ಎಂದು ಹೇಳಿಕೊಂಡಿದ್ದು, ಈ ಪ್ರದೇಶದಲ್ಲಿ ಕಳ್ಳತನಗಳು ಹೆಚ್ಚು ನಡೆಯುತ್ತಿವೆ. ಹೀಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವುದಾಗಿ ಹೇಳಿ ಮನೆ ಪ್ರವೇಶಿಸಿ, 20 ಲಕ್ಷ ರೂ. ನಗದು, 500 ಗ್ರಾಂ ಚಿನ್ನ ದರೋಡೆ ಮಾಡಿದ್ದಾರೆ.
ಹೊಂಬಾಳೆ ಗೌಡ ಮತ್ತು ಅವರ ಪತ್ನಿ ಮಂಗಳಮ್ಮ ಹಾಗೂ ಅವರ ಎರಡೂವರೆ ವರ್ಷದ ಮೊಮ್ಮಗಳು ಮನೆಯಲ್ಲಿದ್ದರು. ಅವರ ಮಗ ಮತ್ತು ಸೊಸೆ ಹೊರಗೆ ಹೋಗಿದ್ದ ವೇಳೆ ಪೊಲೀಸ್ ವೇಷ ಧರಿಸಿದ್ದ ದರೋಡೆಕೋರರು, ಬಾಗಿಲು ತೆರೆದ ಹೊಂಬಾಳೆ ಗೌಡ ಅವರಿಗೆ ಚಾಕು ತೋರಿಸಿ ಬೆದರಿಸಿ, ದಂಪತಿಗಳ ಕೈಕಾಲುಗಳನ್ನು ಕಟ್ಟಿ ಹಾಕಿ, ಅವರ ಬಾಯಿಯನ್ನು ಬಟ್ಟೆಯಿಂದ ಕಟ್ಟಿ, ಆರೋಪಿಗಳು 20 ನಿಮಿಷಗಳಲ್ಲಿ ದರೋಡೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳ್ಳರು ಹೊಂಬಾಳೆ ಗೌಡ ಅವರ ಮೊಬೈಲ್‌ಗಳು ಮತ್ತು ಸಿಸಿಟಿವಿ ಡಿವಿಆರ್ ಅನ್ನು ಸಹ ತೆಗೆದುಕೊಂಡು ಹೋಗಿದ್ದಾರೆ. ಆಶ್ಚರ್ಯಕರವೆಂದರೆ, ಮಂಗಳಮ್ಮನ ಮಂಗಳಸೂತ್ರವನ್ನು ತೆಗೆದುಕೊಂಡಿಲ್ಲ. ಆರೋಪಿಗಳು ಬಾಲಕಿಯನ್ನು ಮುಟ್ಟಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ದರೋಡೆಕೋರರ ಬಂಧನಕ್ಕೆ ಬಲೆ ಬೀಸಿದ್ದಾರೆ. ಆರೋಪಿಗಳ ಬಂಧನಕ್ಕೆ ಎರಡು ತಂಡಗಳನ್ನು ರಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

”

















