ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸ್ನೇಹಿತರ ನಡುವೆ ನಡೆದ ಸಣ್ಣ ಜಗಳ ಅಪ್ರಾಪ್ತ ಬಾಲಕನ ಭೀಕರ ಕೊಲೆಯಲ್ಲಿ #Murder ಅಂತ್ಯವಾಗಿರುವ ಘಟನೆ ನಗರದಲ್ಲಿ ನಡೆದಿದೆ.
ಮೃತ ಬಾಲಕನನ್ನು ಸಂಕೇತ್(16) ಎಂದು ಗುರುತಿಸಲಾಗಿದೆ.
ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದ ವಿದ್ಯಾರ್ಥಿ ಸಂಕೇತ್ ಈ ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ. ಪರೀಕ್ಷೆ ಹತ್ತಿರವಿರುವ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಆಯೋಜಿಸಲಾಗಿದ್ದ ವಿಶೇಷ ತರಗತಿ ಮುಗಿಸಿ ಮನೆಗೆ ವಾಪಸ್ ಹೋಗುತ್ತಿದ್ದಾಗ, ಶಾಲೆಯಿಂದ ಸ್ವಲ್ಪ ದೂರದಲ್ಲಿ ಮೂರ್ನಾಲ್ಕು ಬಾಲಕರು ಆತನನ್ನು ತಡೆದು ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಶಾಲೆಯನ್ನು ಅರ್ಧಕ್ಕೆ ಬಿಟ್ಟಿದ್ದ ಕೆಲವು ಬಾಲಕರು ಈ ಕೃತ್ಯ ಎಸಗಿದ್ದಾರೆ ಎಂದು ಶಂಕಿಸಲಾಗಿದೆ.
ಹಲ್ಲೆಯಿಂದಾಗಿ ತೀವ್ರವಾಗಿ ಅಸ್ವಸ್ಥಗೊಂಡ ಬಾಲಕನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಯಿತಾದರೂ, ಆತ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾನೆ.
ವಿಷಯ ತಿಳಿಯುತ್ತದ್ದಂತೆಯೇ ಶಿವಮೊಗ್ಗ ಎಸ್’ಪಿ ನಿಖಿಲ್ ಅವರು ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಘಟನೆ ಕುರಿತು ಪ್ರತಿಕ್ರಿಯಿಸಿದ ಅವರು, ಸ್ನೇಹಿತರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಕೈಯಿಂದ ಗುದ್ದಿದ ಪರಿಣಾಮ ಬಾಲಕ ಕುಸಿದು ಬಿದ್ದಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಅಪ್ರಾಪ್ತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಮೃತರ ಕುಟುಂಬದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದು, ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















