ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಪೇಸ್ ಪಿಯು ಕಾಲೇಜಿನ ಸಂಸ್ಕೃತ ಉಪನ್ಯಾಸಕಿ ಡಾ. ಮೈತ್ರೇಯಿ ಆದಿತ್ಯಪ್ರಸಾದ್ ರಚಿಸಿದ ಶ್ರೀ ವಾದಿರಾಜ ತೀರ್ಥಪ್ರಬಂಧ ಸಂಶೋಧನಾ ಲೇಖನವು ಕರ್ನಾಟಕ ಸಂಸ್ಕೃತ ವಿವಿಯಿಂದ ನೀಡಲಾಗುವ ಸಂಸ್ಕೃತ ಗ್ರಂಥ ಪುರಸ್ಕಾರಕ್ಕೆ ಆಯ್ಕೆಯಾಗಿದೆ.
ಸಂಸ್ಕೃತದಲ್ಲಿ ವಿರಳ. ಆದರಲ್ಲೂ ತಾತ್ವಿಕ ಹಿನ್ನೆಲೆಯುಳ್ಳ ಕೃತಿ ಎಂದರೆ ಆದು ದುರ್ಲಭವೇ ಸರಿ. ಅಂತಹ ತಾತ್ವಿಕ ಹಿನ್ನೆಲೆಯುಳ್ಳ ಸಂಸ್ಕೃತ ಪ್ರವಾಸ ಸಾಹಿತ್ಯ ಕೃತಿ ಎಂದರೆ ಅದು ಈ “ತೀರ್ಥಪ್ರಬಂಧ”. ಅದನ್ನು ಶ್ರೀವಾದಿರಾಜರು ನೂರಾರು ವರ್ಷಗಳ ಹಿಂದೆ ಭಾರತೀಯ ಇತಿಹಾಸದಲ್ಲಿ ಪ್ರಥಮವಾಗಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ಅದ್ಭುತವಾದ ಗ್ರಂಥ ‘ರಚಿಸಿದ್ದಾರೆ. ಈ ಗ್ರಂಥದಲ್ಲಿ ವಾದಿರಾಜರು ಬೇರೆಬೇರೆ ಕ್ಷೇತ್ರಗಳ ಮಹತ್ವದ ಬಗ್ಗೆ ಹೇಳಿದ್ದಾರೆ.
ಮಾನವ ತನ್ನ ಜೀವಮಾನದಲ್ಲಿ ಯಾತ್ರೆ ಮಾಡಬೇಕು ಎಂಬುದಿದೆ. ಅದು ಭಗವಂತನ ಸನ್ನಿಧಾನವನ್ನು ನೋಡುವ ತವಕದಿಂದ ಮಾಡುವ ಯಾತ್ರೆಯಾಗಿರಬೇಕು. ಅಲ್ಲಿ ಭಗವಂತನ ಮಹಿಮೆಯನ್ನ ತಿಳಿಯುವುದು ಮುಖ್ಯವಾಗುತ್ತವೆ. ಈ ತೀರ್ಥಪ್ರಬಂಧದಲ್ಲಿ ಶ್ರೀವಾದಿರಾಜರು ಭಗವಂತನ ಮಹಿಮೆಯನ್ನು ತಿಳಿಯುವ ಶ್ಲೋಕಗಳ ಮೂಲಕ ತಿಳಿಸಿಕೊಟ್ಟಿದ್ದಾರೆ. ಯಾತ್ರಿಕ ಆಯಾಯ ಕ್ಷೇತ್ರಗಳ ಮಹಿಮೆಯನ್ನು ತಿಳಿದು ಯಾತ್ರೆ ಮಾಡುವುದರಿಂದ ಭಗವಂತನಲ್ಲಿ ಅನುಸಂಧಾನ ಹೊಂದಲು ಬಹಳ ಅನುಕೂಲವಾಗುತ್ತದೆ ಎಂಬುದು ಶಾಸ್ತ್ರವಚನ. ಈ ದೊಡ್ಡ ಕೆಲಸವನ್ನು ಮಾಡಿದವರು ಶ್ರೀವಾದಿರಾಜರು.
ಒಬ್ಬ ಮನುಷ್ಯ ಭೌತಿಕವಾಗಿ ಒಮ್ಮೆ ಯಾತ್ರೆ ಹೋದರೆ ಮುಂದೆ ದಿನನಿತ್ಯವೂ ಮಾನಸಿಕವಾಗಿ ಕ್ಷಣಮಾತ್ರದಲ್ಲಿ ಯಾತ್ರೆ ಹೋಗಲು ಸಾಧ್ಯ. ಹಾಗಾಗಿ ಪ್ರತಿನಿತ್ಯವೂ ಈ ಮಾನಸ ಯಾತ್ರೆಯನ್ನು ಮಾಡಲೂ ಈ ಗ್ರಂಥ ಪೂರಕವಾಗಿದೆ. ಶ್ರೀವಾದಿರಾಜರು ಇದನ್ನು ಕೇವಲ ಮನೋರಂಜನೆಗಾಗಿರದೇ ಆಧ್ಯಾತ್ಮಿಕವಾದ ಮಹತ್ವವನ್ನು ಹೇಳುವುದರ ಮೂಲಕ ಸಾಮಾಜಿಕವಾಗಿ, ಆಧ್ಯಾತ್ಮಿಕವಾಗಿ ಮನುಷ್ಯ ತನ್ನ ಜೀವನದಲ್ಲಿ ಯಾತ್ರೆಯನ್ನು ಹೇಗೆ ಸಫಲಗೊಳಿಸುವುದು ಎಂದು ತಿಳಿಸಲು ಉದಾಹರಣೆಯಾಗಿ ಇರುವಂತಹುದು ಈ ತೀರ್ಥಪ್ರಬಂಧ. ತೀರ್ಥಕ್ಷೇತ್ರಗಳಲ್ಲಿ ಸಂಚರಿಸುತ್ತಾ ಈ ಅತ್ಯುತ್ತಮವಾದ ಕೃತಿಯನ್ನು ರಚಿಸಿ, ತೀರ್ಥಕ್ಷೇತ್ರಗಳನ್ನು ಸಾಧಕ ಭಕ್ತವರ್ಗಕ್ಕೆ ಈ ಮೂಲಕ ತೋರಿ ದೊಡ್ಡ ಉಪಕಾರವನ್ನು ಮಾಡಿದ್ದಾರೆ. ಕೇವಲ ತೀರ್ಥಕ್ಷೇತ್ರಗಳಲ್ಲಿ ಸಂಚರಿಸಿ ಮಿಂದೇಳುವುದಕ್ಕಿಂತ ಅಲ್ಲಿಯ ತೀರ್ಥಾಭಿಮಾನಿ ಹಾಗೂ ಕ್ಷೇತ್ರಾಭಿಮಾನಿ ದೇವತೆಗಳ ಮಹತ್ವ ಮತ್ತು ಪೌರಾಣಿಕ ಹಿನ್ನೆಲೆಯನ್ನರಿತಾಗ ಅಧಿಕವಾದ ಪುಣ್ಯವನ್ನು ಸಂಪಾದಿಸಬಹುದು. ಇದು ಇಷ್ಟಕ್ಕೇ ಸೀಮಿತವಾಗದೆ ಯಾರು ಅಶಕ್ತರೋ ಅಂತಹವರು ಈ ಕೃತಿಯ ಪಠಣ ಮಾತ್ರದಿಂದ ತೀರ್ಥಕ್ಷೇತ್ರಗಳ ಸಂಚಾರದ ಪುಣ್ಯವನ್ನು ಸಂಪಾದಿಸಬಹುದೆಂದು ಸಜ್ಜನ ಸಮೂಹದ ಮೇಲೆ ಅಪಾರವಾದ ಕರುಣೆಯನ್ನು ತೋರಿದವರು ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರು.
ಇಂತಹ ಈ ಅದ್ಭುತ ಕೃತಿಯು ಸಾಮಾಜಿಕವಾಗಿಯೂ ಮತ್ತು ಸಾಂಸ್ಕೃತಿಕವಾಗಿಯೂ ಅತ್ಯಂತ ಮಹತ್ವವನ್ನು ಪಡೆಯುತ್ತದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ರಾಜರ ತೀರ್ಥಪ್ರಬಂಧದ ಕೊಡುಗೆಯನ್ನು ನಿರೂಪಿಸುವ ಕಾರ್ಯ ಈ ಗ್ರಂಥದಲ್ಲಿ ಅಡಗಿದೆ.
ಸಜ್ಜನ ಸಮೂಹಕ್ಕೆ ಉಪಕರಿಸುವ ಬುದ್ಧಿಯಿಂದ ‘ವಾದಿರಾಜರ ತೀರ್ಥಪ್ರಬಂಧ’ ಎಂಬ ಶೀರ್ಷಿಕೆಯಲ್ಲಿ ಡಾ. ಮೈತ್ರೇಯಿ ಆದಿತ್ಯಪ್ರಸಾದ್ ಅವರು ಪುಸ್ತಕವನ್ನು 2022ರಲ್ಲಿ ಪ್ರಕಟಿಸಿರುತ್ತಾರೆ.
ಡಾ. ಮೈತ್ರೇಯಿ ಅವರ ಇಂತಹ ಅದ್ಭುತವಾದ ತೀರ್ಥಪ್ರಬಂಧಕ್ಕೆ ಕರ್ನಾಟಕ ಸಂಸ್ಕೃತ ವಿವಿಯಿಂದ 2022ನೇ ಸಾಲಿನಲ್ಲಿ ಪ್ರೊ. ವಿ. ಎಸ್. ಉಪಾಧ್ಯ ಹೆಸರಿನಲ್ಲಿ ಪುರಸ್ಕಾರ ನೀಡುತ್ತಿದ್ದು, 10 ಸಾವಿರ ರೂ. ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ. ಕರ್ನಾಟಕ ಸಂಸ್ಕೃತ ವಿವಿಯಿದಂದ 2022, 23 ಹಾಗೂ 24ನೇ ಸಾಲಿಗೆ ಸಂಬಂಧಿಸಿ ಒಟ್ಟು 19 ಲೇಖಕರಿಗೆ ಈ ಪುರಸ್ಕಾರ ನೀಡಿ ಗೌರವಿಸುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















