ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭದ್ರಾ ಚಾನೆಲ್‌ನಲ್ಲಿ ಈಜಲು ಹೋದ 13 ವರ್ಷದ ಬಾಲಕನೊಬ್ಬ ನೀರಿನ ಸೆಳೆತಕ್ಕೆ ಸಿಲುಕಿ ಸಾವನ್ನಪ್ಪಿರುವ ಘಟನೆ ಮಲವಗೊಪ್ಪದಲ್ಲಿ ನಡೆದಿದೆ.
ಮೃತನನ್ನು ಹರಿಗೆ ನಿವಾಸಿ ಶಂಕರ್ ಎಂದು ಗುರುತಿಸಲಾಗಿದೆ. , ಎಂಟನೇ ತರಗತಿ ವಿದ್ಯಾರ್ಥಿ ಈತ ಶನಿವಾರ ಮಧ್ಯಾಹ್ನ ತನ್ನ ಐವರು ಸ್ನೇಹಿತರೊಂದಿಗೆ ಮಲವಗೊಪ್ಪದ ಚನ್ನಬಸವೇಶ್ವರ ದೇವಸ್ಥಾನದ ಸಮೀಪವಿರುವ ಭದ್ರಾ ಚಾನೆಲ್‌ಗೆ ಈಜಲೆಂದು ತೆರಳಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಗೆಳೆಯರೆಲ್ಲರೂ ನೀರಿನಲ್ಲಿ ಆಟವಾಡಿ ದಡಕ್ಕೆ ಮರಳಿದರೂ, ಶಂಕರ್ ಮಾತ್ರ ಮೇಲೆ ಬರಲಿಲ್ಲ. ಇದರಿಂದ ಗಾಬರಿಗೊಂಡ ಸಹಪಾಠಿಗಳು ತಾವೇ ಹುಡುಕಾಟ ನಡೆಸಿದ್ದಾರೆ. ಆದರೆ ಸಂಜೆಯಾದರೂ ಆತ ಪತ್ತೆಯಾಗದಿದ್ದಾಗ ಮನೆಯವರಿಗೆ ವಿಷಯ ತಿಳಿಸಿದ್ದಾರೆ.
ಬಾಲಕ ನಾಪತ್ತೆಯಾದ ಸ್ಥಳದಿಂದ ಶೋಧ ಕಾರ್ಯ ಆರಂಭಿಸಲಾಗಿತ್ತು. ಆದರೆ ನಿನ್ನೆ ಘಟನೆ ನಡೆದ ಜಾಗದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ಚಾನೆಲ್ ಟ್ಯೂಬ್ ಬಳಿ ಶಂಕರ್‌ನ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















