ಕಲ್ಪ ಮೀಡಿಯಾ ಹೌಸ್ | ಚಾಮರಾಜನಗರ |
ಭಾರತೀಯ ಸಂಸ್ಕೃತಿ ಪುರಾಣಗಳಲ್ಲಿ ಅಪಾರವಾದ ಮಹತ್ವವನ್ನು ನೀರಿಗೆ ನೀಡಲಾಗಿದೆ. ನೀರನ್ನು ಜೀವಧಾರೆ ತಾಯಿ ಎಂದು ಕರೆಯಲಾಗಿದೆ. ಶಿವ ಪುರಾಣ, ಮತ್ಸ್ಯ ಪುರಾಣ ರಾಮಾಯಣ ಮಹಾಭಾರತ ಹಾಗೂ ವೇದವ್ಯಾಸರು ನೀರನ್ನು ತ್ಯಾಗದ ಸಂಕೇತ ಎಂದಿದ್ದಾರೆ ಎಂದು ಸಂಸ್ಕೃತಿ ಚಿಂತಕ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ್ ಎನ್. ಋಗ್ವೇದಿ ತಿಳಿಸಿದರು.
ಜೈಹಿಂದ್ ಪ್ರತಿಷ್ಠಾನ ಹಾಗೂ ಋಗ್ವೇದಿ ಯೂತ್ ಕ್ಲಬ್ ಹರದನಹಳ್ಳಿ ಕಲ್ಯಾಣಿಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜಲ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಶ್ವ ಜಲ ದಿನವನ್ನು ಪ್ರತಿ ವರ್ಷ ಮಾರ್ಚ್ 22 ರಂದು ಆಚರಿಸಲಾಗುತ್ತಿದೆ. 1993 ರಿಂದ ವಿಶ್ವ ಸಂಸ್ಥೆ ಪ್ರಪಂಚದ ಎಲ್ಲಾ ದೇಶಗಳಲ್ಲೂ ನೀರಿನ ಜಾಗೃತಿ, ಶುದ್ಧ ನೀರು ನೈರ್ಮಲ್ಯ ಹಾಗೂ ಸುಸ್ಥಿರ ಅಭಿವೃದ್ಧಿಗಾಗಿ ಪ್ರತಿ ವರ್ಷ ಒಂದೊಂದು ಪರಿಕಲ್ಪನೆಯ ಮಾಲಕ ಜನರಲ್ಲಿ ಜಾಗೃತಗೊಳಿಸುವ ಮತ್ತು ನೀರನ್ನು ವ್ಯರ್ಥ ಮಾಡಡಿರುವ ಹಾಗೂ ಸದ್ಬಳಕೆ, ಜಾಗೃತಿಯನ್ನು ನಿರಂತರವಾಗಿ ನೆರವೇರಿಸಿಕೊಂಡು ಬರುತ್ತಿದೆ ಎಂದರು.
ವಿಶ್ವಸಂಸ್ಥೆಯ ಈ ಕಾರ್ಯ ಮಹತ್ತರವಾದ ಕಾರ್ಯ. ಜಲ ನಮ್ಮ ಬ್ರಹ್ಮಾಂಡದ ಮೂಲ. ಭಾರತೀಯ ಸಂಸ್ಕೃತಿಯಲ್ಲಿ ನೀರಿಗೆ ಪ್ರಮುಖ ಸ್ಥಾನಮಾನವನ್ನು ನೀಡಲಾಗಿದೆ. ಪ್ರತಿ ಕಾರ್ಯದ ಮೊದಲು ಶುದ್ಧೀಕರಣದ ಮೂಲಕ ಕಳಶ ಪೂಜೆಯನ್ನು ಮಾಡಿ ಪ್ರತಿ ಮನೆಯಲ್ಲಿ ಕಳಶ ಪ್ರತಿಷ್ಠಾಪನೆಯ ಮೂಲಕ ಗಂಗೆಯನ್ನು ಸಂರಕ್ಷಿಸುವ, ಮಹತ್ವ ಸಾರುವ ಜವಾಬ್ದಾರಿ ರೂಢಿಗೆ ಬಂದಿದೆ. ಭಾರತೀಯ ಎಲ್ಲಾ ನದಿಗಳ ಹೆಸರುಗಳು ತಾಯಿ ಸ್ವರೂಪದಲ್ಲಿದ್ದು ಎಲ್ಲ ನದಿಗಳ ಸಂರಕ್ಷಣೆ, ಕೊಳ, ಕಲ್ಯಾಣಿಗಳ ಅಭಿವೃದ್ಧಿ ಮಾಡಬೇಕಾಗಿದೆ ಎಂದರು.
ಗ್ರಾಮ ವಿಕಾಸ ಸಂಸ್ಥೆಯ ಸಂಯೋಜಕರಾದ ಚಂದ್ರ ಮೋಹನ್ ಕಟ್ಟೆಪುರ ಮಾತನಾಡಿ, ಹರದನಹಳ್ಳಿ ಐತಿಹಾಸಿಕ ಗ್ರಾಮ. ಇಲ್ಲಿನ ಕಲ್ಯಾಣಿ 2017ರಲ್ಲಿ ಬಹಳ ಶಿಥಿಲಗೊಂಡು ಬಳಸಲು ಯೋಗ್ಯವಾಗಿ ಇರಲಿಲ್ಲ. ಗ್ರಾಮಸ್ತರು, ಯುವಕರು, ಸರ್ಕಾರ ಗ್ರಾಮಪಂಚಾಯ್ತಿ ಇಂದು ಪುನರ್ನಿರ್ಮಾಣ ಮಾಡಿ ರಾಜ್ಯಕ್ಕೆ ಆದರ್ಶವಾಗಿದೆ. ಕಲ್ಯಾಣಿ ಸಂಗ್ರಹಣೆಯಿಂದ ವಾತಾವರಣ ಬಹಳ ಅತ್ಯುತ್ತಮವಾಗಿದೆ ಎಂದರು.
ಹರದನಹಳ್ಳಿಯ ಸಮಾಜ ಸೇವಕರಾದ ಗಿರೀಶ್ ಮಾತನಾಡಿ ಹರದನಹಳ್ಳಿಯ ಕಲ್ಯಾಣ ನಿರ್ಮಾಣದ ಹಿಂದೆ ಬಹಳಷ್ಟು ಜನರ ಸೇವೆ ಇದೆ. ಕಲ್ಯಾಣಿಯಲ್ಲಿ ದೇವರ ಕಾರ್ಯ, ತೆಪ್ರೋತ್ಸವ ನಡೆಯುತ್ತಿದ್ದು ಜನರಿಗೆ ಆನಂದವನ್ನು ತಂದಿದೆ. ಕಲ್ಯಾಣಿಯಲ್ಲಿ ಯಡಿಯೂರು ಸಿದ್ದಲಿಂಗೇಶ್ವರರು ದೇವತಾ ಕಾರ್ಯಕ್ಕೆ ಜಲವನ್ನು ಬಳಸುತ್ತಿದ್ದರು ಎಂದು ನಂಬಿಕೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಹಸಿರುಪಡೆಯ ಡಾ. ಅಕ್ಷತಾ ಜೈನ್, ಸತೀಶಕುಮಾರ್, ಗ್ರಾಮ ವಿಕಾಸ ಸಂಸ್ಥೆಯ ಮಂಜುನಾಥ್, ವಿವೇಕಾನಂದ ಪಾಠಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















