ಕಲ್ಪ ಮೀಡಿಯಾ ಹೌಸ್ | ಆಗುಂಬೆ(ತೀರ್ಥಹಳ್ಳಿ) |
ಮನೆಯಲ್ಲಿ ಒಂಟಿಯಾಗಿದ್ದ ವೃದ್ಧೆಯ ಕೈ ಕಟ್ಟಿ, ಬಾಯಿಗೆ ಬಟ್ಟೆ ತುರುಕಿದ ದುಷ್ಕರ್ಮಿಗಳು ಸುಮಾರು 18 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದರೋಡೆ ಮಾಡಿರುವ ಘಟನೆ ತಾಲೂಕಿನ ಆಗುಂಬೆ ಬಳಿಯ ಲಕ್ಕುಂದದಲ್ಲಿ ನಡೆದಿದೆ.
ಇಲ್ಲಿನ ವಿಶಾಲಾಕ್ಷಿ(74) ಎನ್ನುವವರ ಮನೆಯಲ್ಲಿ ಎಪ್ರಿಲ್ 21ರಂದು ನಸುಕಿನ 3 ಗಂಟೆ ವೇಳೆಗೆ ಈ ಭಾರೀ ದರೋಡೆ ನಡೆದಿದೆ.
Also Read>> ಮೈಸೂರು | ಭಕ್ತಿ ಭಾವದ ಕ್ಷೇತ್ರ-ಶ್ರೀ ವೆಂಕಟೇಶ್ವರ ಧ್ಯಾನ ಕೇಂದ್ರ | 23ರಿಂದ 8ನೇ ವಾರ್ಷಿಕೋತ್ಸವ ಸಂಭ್ರಮ
ವಿಶಾಲಾಕ್ಷಿ ಅವರ ಪತಿ 15 ವರ್ಷದ ಹಿಂದೆ ನಿಧನರಾಗಿದ್ದರು. ಹಾಗಾಗಿ ಮನೆಯಲ್ಲಿ ಒಬ್ಬರೇ ವಾಸವಿದ್ದರು. ಮೊನ್ನೆ ನಸುಕಿನಲ್ಲಿ ವಿಶಾಲಾಕ್ಷಿ ಅವರು ಮನೆಯಲ್ಲಿ ಮಲಗಿದ್ದಾಗ ಯಾರೋ ಬಾಗಿಲು ತಟ್ಟಿದ ಶಬ್ದ ಕೇಳಿಸಿತು. ಕಿಟಕಿಯ ಮೂಲಕ ನೋಡಿದಾಗ ಮೂವರು ಅಪರಿಚಿತರು ನಿಂತಿದ್ದರು.
ಮೂವರು ಅಪರಿಚಿತರು ಕುಡಿಯಲು ನೀರು ಕೊಡಿ ಎಂದು ವಿಶಾಲಾಕ್ಷಿ ಅವರನ್ನು ಕೇಳಿದ್ದರು. ಬಾಗಿಲು ತೆರೆಯದ ವಿಶಾಲಾಕ್ಷಿ ಅವರು ಕಿಟಕಿಯ ಮೂಲಕವೇ ನಲ್ಲಿಯಲ್ಲಿದ್ದ ನೀರು ಕುಡಿಯಿರಿ ಎಂದು ತಿಳಿಸಿದ್ದರು.
ಮೂವರು ಅಪರಿಚಿತರು ಅಲ್ಲೆ ಮರೆಯಾಗಿ ನಿಂತಿದ್ದರು. ಕೆಲವು ನಿಮಿಷದ ಬಳಿಕ ಅನುಮಾನಗೊಂಡ ವೃದ್ಧೆ ಹಿತ್ತಲ ಬಾಗಿಲು ತೆರೆದು ಪರಿಶೀಲಿಸಿದರು. ಆಗ ಮೂವರು ಒಮ್ಮೆಲೆ ಮನೆಯೊಳಗೆ ನುಗ್ಗಿದ್ದಾರೆ ಎಂದು ವರದಿಯಾಗಿದೆ.
ತಕ್ಷಣವೇ ಒಳ ನುಗ್ಗಿದ ದರೋಡೆಕೋರರು ವಿಶಾಲಾಕ್ಷಿ ಅವರ ಬಾಯಿಯನ್ನು ಒತ್ತಿ ಹಿಡಿದು ಬೆದರಿಸಿದ್ದರು. ಬಳಿಕ ಅವರ ಕೈಗಳನ್ನು ಸೀರೆಯಿಂದ ಕಟ್ಟಿ ಹಾಕಿ, ಬಾಯಿಗೆ ಬಟ್ಟೆ ತುರುಕಿ ಅಡುಗೆ ಮನೆಯಲ್ಲಿ ಕೂಡಿ ಹಾಕಿದ್ದರು. ಈ ವೇಳೆ ವೃದ್ಧೆಯ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
Also Read>> ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಕಾಯಿಲೆಯಿಂದ ನಾಲ್ಕು ಸಾವು : ಸಚಿವ ಮಧುಬಂಗಾರಪ್ಪ
ಏನೆಲ್ಲಾ ದರೋಡೆ ಮಾಡಲಾಗಿದೆ?
ದರೋಡೆಕೋರರು ಮನೆಯಲ್ಲಿದ್ದ ಬೀರುವನ್ನು ಒಡೆದು ಅದರಲ್ಲಿದ್ದ ಆಭರಣಗಳನ್ನು ದೋಚಿದ್ದಾರೆ. ವಿಶಾಲಾಕ್ಷಿ ಅವರ ಮೈಮೇಲಿದ್ದ ಚಿನ್ನದ ಸರ, ಎರಡು ಕೈಬಳೆ, ಕಿವಿ ಓಲೆ ಸೇರಿದಂತೆ ಒಟ್ಟು 146 ಗ್ರಾಂ ತೂಕದ ವಿವಿಧ ಚಿನ್ನಾಭರಣ ಕಸಿದುಕೊಂಡಿದ್ದಾರೆ. ಇವುಗಳ ಮೌಲ್ಯ ಅಂದಾಜು 17.52 ಲಕ್ಷ ಎನ್ನಲಾಗಿದೆ.
ಇದಲ್ಲದೆ ಬೀರುವಿನಲ್ಲಿದ್ದ 50,000 ನಗದು ಹಾಗೂ ಟೇಬಲ್ ಮೇಲಿದ್ದ ಪರ್ಸ್’ನಲ್ಲಿದ್ದ 1,000 ಹಣ ಮತ್ತು ಒಂದು ಮೊಬೈಲ್ ಫೋನ್ ಅನ್ನು ದೋಚಿದ್ದಾರೆ. ಬಳಿಕ ಹಿತ್ತಲ ಬಾಗಿಲಿನ ಮೂಲಕ ಪರಾರಿಯಾಗಿದ್ದಾರೆ.
ದರೋಡೆಕೋರರು ಹೋದ ನಂತರ ವಿಶಾಲಾಕ್ಷಿ ಅವರು ಕೈಕಟ್ಟುಗಳನ್ನು ಬಿಡಿಸಿಕೊಂಡಿದ್ದಾರೆ. ನಂತರ ಚಾಕುವಿನಿಂದ ಬಾಗಿಲಿಗೆ ತೂತು ಮಾಡಿ ಚಿಲಕ ತೆಗೆದು ಹೊರಬಂದಿದ್ದಾರೆ.
ಬಳಿಕ ಗ್ರಾಮದ ಅನಿತಾ ಎಂಬುವವರಿಗೆ ವಿಷಯ ತಿಳಿಸಿದ್ದಾರೆ. ಆನಂತರ ಅಳಿಯನಿಗೆ ವಿಷಯ ತಿಳಿದು ಸ್ಥಳಕ್ಕೆ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪಕ್ಕದ ಮನೆಯವರಿಗೆ ವಿಷಯ ತಿಳಿಸಿದ ನಂತರ ಅವರ ಸಂಬಂಧಿಕರು ಆಗಮಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆಗುಂಬೆ ಪೊಲೀಸ್ ಠಾಣೆಯ ಪಿಎಸ್‌ಐ ಜಿ. ಪಾರ್ವತಮ್ಮ #BNS ಕಾಯ್ದೆ 329(4), 127(2), 309(6), 3(5) ಅಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಲ್ ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತನಿಖೆ ಆರಂಭವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news






















