ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಆಧುನಿಕ ಸೌಲಭ್ಯಗಳು ಹೆಚ್ಚಾದಂತೆ ಮನುಷ್ಯನ ಜೀವನಶೈಲಿ ದುರ್ಬಲಗೊಳ್ಳುತ್ತಿದ್ದು, ಆರೋಗ್ಯದ ಸಮತೋಲನ ಕಾಪಾಡಿಕೊಳ್ಳುವುದು ಅತ್ಯಗತ್ಯ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿಯ ಸಹ ಕಾರ್ಯದರ್ಶಿ ಡಾ. ಪಿ. ನಾರಾಯಣ್ ಅಭಿಪ್ರಾಯಪಟ್ಟರು.
ನಗರದ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಗುರುವಾರ ಮತ್ತೂರಿನಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ 2025-26 ಉದ್ಘಾಟಿಸಿ ಮಾತನಾಡಿದರು.
ಮನುಷ್ಯನಲ್ಲಿ ಕಾಡುತ್ತಿರುವ ಅತಿದೊಡ್ಡ ರೋಗವೆಂದರೆ ಸೋಮಾರಿತನ. ಆಧುನಿಕ ಜೀವನಶೈಲಿಯಲ್ಲಿ ದೇಹ ದಂಡಿಸಿ ಕೆಲಸ ಮಾಡುವ ಅನಿವಾರ್ಯತೆ ನಿರ್ಮಾಣವಾಗುತ್ತಿಲ್ಲ. ಇದರ ಪರಿಣಾಮವಾಗಿ, ಸಾವಿರಾರು ಯುವ ಸಮೂಹ ರೋಗಗ್ರಸ್ತರಾಗಿ ಬದಲಾಗುತ್ತಿದ್ದಾರೆ. ಬದುಕುವ ರೀತಿಯು ಪ್ರಕೃತಿಯ ನಿಯಮ ಮೀರಿದೆ. ಜಂಕ್ ಆಹಾರಗಳನ್ನು ತಿನ್ನುವ ಪ್ರವೃತ್ತಿ ಬೆಳೆಸಿಕೊಂಡಿದ್ದೇವೆ ವಿನಃ, ಶ್ರಮವಹಿಸಿ ಕೆಲಸ ಮಾಡುವ ಪ್ರವೃತ್ತಿ ಬಿಟ್ಟಿದ್ದೇವೆ.
ಜ್ಞಾನದ ವಿಕಸನದ ಜೊತೆಗೆ, ದೇಹ ದಂಡನೆಗೂ ಆದ್ಯತೆ ನೀಡಿ. ಪ್ರತಿದಿನ ಕನಿಷ್ಟ ಇಪ್ಪತ್ತು ನಿಮಿಷದ ನಡಿಗೆಯು ಹೃದಯದ ಆಯಸ್ಸನ್ನು ಜಾಸ್ತಿ ಮಾಡುತ್ತದೆ. ಬೆಳಗಿನ ಸೂರ್ಯನ ಕಿರಣಗಳು ನೀಡುವ ಪ್ರಕಾಶತೆಗೆ ದೇಹ ಒಗ್ಗಿಕೊಂಡಾಗ, ಚರ್ಮದ ಮೂಲಕ ವಿಟಮಿನ್ ಡಿ ಸಿಗುತ್ತದೆ. ಒತ್ತಡಗಳನ್ನು ನಿರ್ವಹಿಸುವ ವಿಹಾರ ಅಳವಡಿಸಿಕೊಳ್ಳಿ. ಬದುಕುವ ವಿಧಾನಗಳನ್ನು ಸುಧಾರಿಸಿಕೊಂಡಾಗ, ಕೃತಕ ಔಷಧಗಳಿಂದ ದೂರಾಗುತ್ತೇವೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ.ಎನ್.ಕೆ.ಚಿದಾನಂದ ಮಾತನಾಡಿ, ಮನುಷ್ಯ ಸಮಾಜಕ್ಕೆ ಅಭಿಮುಖವಾಗಿ ಚಲಿಸುತ್ತಿದ್ದಾನೆ. ಸಮಾಜದ ಒಡನಾಟದಿಂದ ದೂರಾಗಿ ಅವಲೋಕನದ ಶಕ್ತಿಯನ್ನು ಕಳೆದುಕೊಂಡಿದ್ದೇವೆ. ಇಂತಹ ಸಂದರ್ಭದಲ್ಲಿ ಎನ್ಎಸ್ಎಸ್ ಶಿಬಿರಗಳು ಸಾಮಾಜಿಕ ಅಭಿಯಂತರರಾಗಿ ಕಾರ್ಯನಿರ್ವಹಿಸಲು ಪೂರಕ ವೇದಿಕೆಯಾಗಿದೆ ಎಂದು ಹೇಳಿದರು.
ಶಾರದಾ ವಿಲಾಸ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಸುದೀಂದ್ರ.ಎಸ್ ಮಾತನಾಡಿದರು. ಶಿಬಿರದ ಸಂಯೋಜನಾಧಿಕಾರಿ ಮಂಜುನಾಥ.ಡಿ.ಎಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 





















