ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಾಲಾ ಶಿಕ್ಷಣದ ಇತಿಹಾಸದಲ್ಲಿಯೇ ದಾಖಲೆ ನಿರ್ಮಿಸಿದ ಈ ಬಾರಿಯ ಫಲಿತಾಂಶದ ಬಗ್ಗೆ ಬಿಜೆಪಿ ಸಂಸದ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕ, ಮಾಜಿ ಶಿಕ್ಷಣ ಸಚಿವ ಎಚ್.ವಿಶ್ವನಾಥ್ ಮತ್ತಿತರ ಬಿಜೆಪಿ ಮುಖಂಡರು ವಿದ್ಯಾರ್ಥಿಗಳಿಗೆ ನಕಲು ಮಾಡಲು ಅವಕಾಶ ನೀಡಿದ್ದರಿಂದ ಈ ದಾಖಲೆ ಆಯಿತು ಎಂದು ನೀಡಿದ ಹೇಳಿಕೆಗಳಿಗೆ ಶಾಲಾ ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ Minister Madhu Bangarappa ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಅವರು ಇಂದು ತಮ್ಮ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಶಿಕ್ಷಕರ, ಪಾಲಕರ, ಪೋಷಕರ ಮತ್ತು ವಿದ್ಯಾರ್ಥಿಗಳ ಅವಿರತ ಪ್ರಯತ್ನದಿಂದ ಈ ಬಾರಿಯ ಎಸ್.ಎಸ್.ಎಲ್.ಸಿ. ಫಲಿತಾಂಶ SSLC Result ಶಾಲಾ ಶಿಕ್ಷಣ ಇತಿಹಾಸದಲ್ಲಿಯೇ ದಾಖಲೆ ಬರೆದಿದೆ. ವಿದ್ಯಾರ್ಥಿಗಳಿಗೆ ನಕಲು ಮಾಡಲು ಅವಕಾಶ ಕೊಟ್ಟಿದ್ದರಿಂದ ಇಷ್ಟೊಂದು ಗರಿಷ್ಟ ಪ್ರಮಾಣದಲ್ಲಿ ಫಲಿತಾಂಶ ಏರಿಕೆಯನ್ನು ಕಂಡಿತು ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿಕೆ ನೀಡಿದ್ದು, ಅವರಿಗೆ ವಯಸ್ಸಾಗಿದೆ. ಅವರಿಗೂ ಮಕ್ಕಳಿದ್ದಾರೆ. ಅವರನ್ನೂ ನಕಲು ಮಾಡಿ ಪಾಸು ಮಾಡಿಸಿದ್ದಾರಾ ಎಂದು ಕುಟುಕಿದ ಅವರು ತಾವೆಲ್ಲಿದ್ದೇವೆ ಎಂಬುದೇ ಅವರಿಗೆ ಅರಿವಿಲ್ಲ. ಅವರನ್ನು ಕ್ಷಮಿಸಿದ್ದೇನೆ ಎಂದು ಲೇವಡಿ ಮಾಡಿದರು.
ಬಿಜೆಪಿಗರು ಹೊಟ್ಟೆಕಿಚ್ಚಿಗೆ ಮಕ್ಕಳ ಭವಿಷ್ಯವನ್ನು ಹಾಳು ಮಾಡುತ್ತಿದ್ದಾರೆ. ಹೆಚ್.ವಿಶ್ವನಾಥ್ ಮತ್ತು ಬಸವರಾಜ್ ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರು ಬಾಯಿಮುಚ್ಚಿಕೊಂಡು ಕುಳಿತುಕೊಳ್ಳಿ ಎಂದು ಆಕ್ರೋಶ ವ್ಯಕ್ತಪಡಿಸಿ, ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಆರಂಭವಾಗಿದೆ ಎಂದು ಈ ಬಾರಿ ರಾಜ್ಯದ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ, ಮಕ್ಕಳನ್ನು ಆಕರ್ಷಿಸುತ್ತಿದ್ದೇವೆ. ಇದು ಶಾಲಾ ಶಿಕ್ಷಣದ ಇತಿಹಾಸದಲ್ಲೇ ಪ್ರಥಮವಾಗಿದೆ. ಒಳಮೀಸಲಾತಿಗೆ ಸಂಬಂಧಿಸಿದಂತೆ ಪ್ರಕರಣ ಸರ್ವೋಚ್ಚ ನಾಯಾಲಯದಲ್ಲಿ ಇದ್ದರೂ ಅದರ ಸೂಚನೆ ಮೇರೆಗೆ ಸಂವಿಧಾನ ಮತ್ತು ನ್ಯಾಯಾಲಯದ ಸೂಚನೆಗೆ ಧಕ್ಕೆ ಬರದಂತೆ ಕ್ಯಾಬಿನೆಟ್‌ನಲ್ಲಿ ನಿರ್ಣಯ ತೆಗೆದುಕೊಂಡಿದ್ದೇವೆ. ಆ ಪ್ರಕಾರ ಎಲ್ಲಾ ವರ್ಗದವರಿಗೂ ಸಾಮಾಜಿಕ ನ್ಯಾಯ ಒದಗಿಸಲಾಗಿದೆ. 56 ಸಾವಿರ ಹುದ್ದೆಗಳನ್ನು ತುಂಬಿಕೊಳ್ಳಲು ಪ್ರಕ್ರಿಯೆ ಆರಂಭಿಸಲಾಗುವುದು. ರಾಜ್ಯದ ಅನುದಾನಿತ ಶಾಲೆಗಳಲ್ಲಿ ಇರುವ 5800 ಹುದ್ದೆಗಳ ಭರ್ತಿಗೂ ಕ್ರಮ ಕೈಗೊಳ್ಳಲಾಗುವುದು. ಶಾಲಾ ಮಕ್ಕಳಿಗೆ ದಿನನಿತ್ಯದ ಆಗುಹೋಗುಗಳ ಬಗ್ಗೆ ಮಾಹಿತಿ ಇರಲೆಂದು ಪ್ರತಿನಿತ್ಯ ಶಾಲೆಯಲ್ಲಿ ಬೆಳಿಗ್ಗೆ ವೃತ್ತ ಪತ್ರಿಕೆಗಳಲ್ಲಿನ ಪ್ರಮುಖ ಸುದ್ದಿಗಳನ್ನು ಓದುವ ರೂಢಿ ಆರಂಭಿಸಲಾಗಿದೆ ಎಂದರು.
ಇತ್ತೀಚಿನ ಗಾಳಿ, ಮಳೆಗೆ ಹೊಳೆಹೊನ್ನೂರು ಭಾಗದಲ್ಲಿ ಹಾಗೂ ತಮ್ಮದೇ ಸ್ವಕ್ಷೇತ್ರ ಸೊರಬದಲ್ಲಿ ಅಪಾರ ಮನೆಗಳು, ಅಡಿಕೆ ತೋಟಗಳು, ಜನಜಾನುವಾರುಗಳು ಹಾನಿಗೊಳಗಾಗಿದ್ದು ಅವುಗಳ ವೀಕ್ಷಣೆಗೆ ತಕ್ಷಣ ತೆರಳಲು ಸಿಇಓ ಸಂಬಂಧಿಸಿದ ತಹಶೀಲ್ದಾರ್ ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇಲ್ಲಿಯವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕೆಲವರಿಗೆ ವೈಯಕ್ತಿಕವಾಗಿ ಸಹಾಯ ಮಾಡಿದ್ದೇನೆ ಎಂದ ಅವರು, ಉಳವಿ ಮತ್ತಿತರ ಭಾಗಗಳಲ್ಲಿ ಇಂದೇ ತಾವು ಭೇಟಿನೀಡಿ, ಪರಿಶೀಲನೆ ನಡೆಸುತ್ತೇನೆ ಎಂದ ಅವರು, ಕಡಿತವಾಗಿರುವ ವಿದ್ಯುತ್ ಪೂರೈಕೆಗೆ ತಕ್ಷಣ ಕ್ರಮಕೈಗೊಳ್ಳುವಂತೆ ಮೆಸ್ಕಾಂಗೆ ಸೂಚಿಸಿದ್ದೇನೆ. ಡಿಹೆಚ್‌ಓ ಅವರಿಗೂ ಸೂಚಿಸಲಾಗಿದೆ. ಜಿಲ್ಲಾಡಳಿತದಿಂದ ವರದಿ ಬಂದ ಬಳಿಕ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದರು.
ಇತ್ತೀಚಿನ ಸಿಇಟಿ ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಪ್ರಕರಣ ಕಾನೂನುಬಾಹಿರವಾಗಿದ್ದು ಕಾನೂನು ಉಲ್ಲಂಘಿಸಿದವರ ವಿರುದ್ಧ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು. ಜನಿವಾರ ತೆಗೆಸಿದ ಕ್ರಮಕ್ಕೆ ನಾನು ಧಿಕ್ಕಾರ ಹೇಳುತ್ತೇನೆ. ಯಾವುದೇ ಜಾತಿ, ಧರ್ಮದವರಿರಲಿ ಅವರ ರೀತಿ-ರಿವಾಜುಗಳಿಗೆ ಗೌರವ ಕೊಡಲೇಬೇಕು. ಈ ಕುರಿತು ತನಿಖೆಗೆ ಆದೇಶಿಸಲಾಗಿದೆ. ತಪ್ಪೆಸಗಿದವರಿಗೆ ಶಿಕ್ಷೆಯಾಗಲೇ ಬೇಕು ಎಂದು ಪುನರುಚ್ಚರಿಸಿದರು.
ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಅತೀ ಹೆಚ್ಚು ಅಂಕಪಡೆದು ಸಾಧನೆಗೈದ ಪ್ರೌಢಶಾಲಾ ವಿದ್ಯಾರ್ಥಿಗಳನ್ನು ಸಚಿವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಕ, ಶಾಸಕಿ ಬಲ್ಕೀಶ್‌ಬಾನು, ಮಾಜಿ ಶಾಸಕ ಆಯನೂರು ಮಂಜುನಾಥ್, ಡಿಡಿಪಿಐ ಮಂಜುನಾಥ್, ಬಿಇಓ ರಮೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ರಾಜ್ಯ ಜವಳಿನಿಗಮದ ಅಧ್ಯಕ್ಷ ಚೇತನ್‌ಗೌಡ, ಪ್ರಮುಖರಾದ ಸಿ.ಎಸ್.ಚಂದ್ರಭೂಪಾಲ್, ರಮೇಶ್‌ಶೆಟ್ಟಿ, ಕಲೀಂಪಾಷಾ, ಅಬ್ದುಲ್‌ವಾಹಿದ್ ಅಡ್ಡು, ಕಲಗೋಡು ರತ್ನಾಕರ, ಎನ್.ರಮೇಶ್ ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















