ಕಲ್ಪ ಮೀಡಿಯಾ ಹೌಸ್ | ಮಣಿಪಾಲ |
ಈಜಲು ಹೋದ ರಿಕ್ಷಾ ಚಾಲಕರೊಬ್ಬರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಇಲ್ಲಿನ ಸಮೀಪದ ಹೆರ್ಗಾ ಗ್ರಾಮದ ಹೊಳೆಬಾಗಿಲು ನದಿಯಲ್ಲಿ ನಡೆದಿದೆ.
ಮೃತರನ್ನು ಹೆರ್ಗಾ ಗ್ರಾಮದ ನಿವಾಸಿ ನಾರಾಯಣ ಪೂಜಾರಿ ಎಂಬವರ ಪುತ್ರ ಸುಜಿತ್ ಕುಮಾರ್ (42) ಎಂದು ಗುರುತಿಸಲಾಗಿದೆ.
ವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿದ್ದ ಇವರು, ಎಂದಿನಂತೆ ಕೆಲಸದ ನಿಮಿತ್ತ ಮನೆಯಿಂದ ರಿಕ್ಷಾದಲ್ಲಿ ಹೊರಟಿದ್ದರು. ಮಾರ್ಗಮಧ್ಯೆ ಹೊಳೆಬಾಗಿಲು ನದಿಗೆ ಈಜಲೆಂದು ಇಳಿದಿದ್ದ ಸಂದರ್ಭದಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ಆಕಸ್ಮಿಕವಾಗಿ ಮುಳುಗಿ ನಾಪತ್ತೆಯಾಗಿದ್ದರು.ಸುಜಿತ್ ಕುಮಾರ್ ಅವರು ಮನೆಗೆ ಹಿಂತಿರುಗದಿದ್ದಾಗ ಮತ್ತು ನಾಪತ್ತೆಯಾದ ಹಿನ್ನೆಲೆಯಲ್ಲಿ ಸ್ಥಳೀಯರು ಹಾಗೂ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಇಂದು ಮುಂಜಾನೆ ಸುಮಾರು 7 ಗಂಟೆಯ ವೇಳೆಗೆ ನದಿಯ ಕಿನಾರೆಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 






















