ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಧ್ಯಯನದಲ್ಲಿ ಏನು ಓದುತ್ತೇವೆ ಎಂಬುದಕ್ಕಿಂತ ಹೇಗೆ ಅರ್ಥಮಾಡಿಕೊಳ್ಳುತ್ತೇವೆ ಎಂಬುದು ಮುಖ್ಯವಾಗಿದ್ದು, ಪರಿಕಲ್ಪನೆಗಳ ಮೇಲೆ ಹಿಡಿತ ಸಾಧಿಸಿದರೆ ಯಶಸ್ಸು ಸುಲಭವಾಗುತ್ತದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್ ಹೇಳಿದರು.
ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಸಂಜೆ ಕಾಲೇಜಿನಲ್ಲಿ ಸೋಮವಾರ ಸಂಜೆ ಚಂದನ ಸಭಾಂಗಣದಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಬೀಳ್ಕೊಡುಗೆ ಸಮಾರಂಭ ಉದ್ದೇಶಿಸಿ ಮಾತನಾಡಿದರು.
ಸಿಎ ಪರೀಕ್ಷೆಗೆ ತಯಾರಾಗುವ ವಿದ್ಯಾರ್ಥಿಗಳು ಪಠ್ಯಕ್ರಮದ ಕುರಿತು ಆಳವಾದ ತಿಳುವಳಿಕೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ದಿನನಿತ್ಯದ ಓದಿಗೆ ಸಮರ್ಪಕವಾದ ವೇಳಾಪಟ್ಟಿಯನ್ನು ರೂಪಿಸಿಕೊಳ್ಳುವುದು ಅಗತ್ಯ. ದೀರ್ಘಕಾಲದ ಓದಿನ ನಡುವೆ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ನಿರ್ಲಕ್ಷಿಸಬಾರದು.
ಸಿಎ ಪರೀಕ್ಷೆ ಎಂಬುದು ಕೇವಲ ಬುದ್ಧಿವಂತಿಕೆಯ ಪರೀಕ್ಷೆಯಲ್ಲ. ಇದು ಸಹನೆ ಮತ್ತು ಸ್ಥಿರತೆಯ ಪರೀಕ್ಷೆಯಾಗಿದೆ. ಸೋಲು ಬಂದಾಗ ಎದೆಗುಂದದೆ, ತಪ್ಪುಗಳಿಂದ ಪಾಠ ಕಲಿತು ಮುಂದೆ ಸಾಗಬೇಕು. ನಿರಂತರ ಪ್ರಯತ್ನವೇ ಯಶಸ್ಸಿನ ಸೂತ್ರ ಎಂದು ಹೇಳಿದರು.
ನಿವೃತ್ತ ಪ್ರಾಂಶುಪಾಲರಾದ ಬಿ.ಆರ್.ದಯಾನಂದ ಮಾತನಾಡಿ, ಸಂಜೆ ಕಾಲೇಜಿನ ವಿದ್ಯಾರ್ಥಿಗಳಲ್ಲಿ ವಿಶೇಷ ಜ್ಞಾನದ ಹಸಿವಿದೆ. ಹಗಲಿನಲ್ಲಿ ಜವಾಬ್ದಾರಿಗಳನ್ನು ನಿಭಾಯಿಸಿ, ಸಂಜೆ ಓದಲು ಬರುತ್ತಿರುವ ನಿಮ್ಮ ಛಲ ಅದ್ಭುತ. ಕಷ್ಟಪಟ್ಟು ಓದುವುದಕ್ಕಿಂತ ಇಷ್ಟಪಟ್ಟು ಓದಿದರೆ ಸಾಧನೆ ಇನ್ನಷ್ಟು ಸುಲಭವಾಗುತ್ತದೆ,” ಎಂದು ಹೇಳಿದರು.
ಎನ್ಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಶಿವಪ್ರಸಾದ್, ಸಿಎ ಸಂಜನ ಮತ್ತು ಅಚ್ಯುತ್ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಘನಶ್ಯಾಮ್ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 





















