ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇತ್ತೀಚಿನ ಅಕಾಲಿಕ ಗಾಳಿ ಮಳೆಯಿಂದಾಗಿ ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಮತ್ತು ಹಾರನಹಳ್ಳಿ ಹೋಬಳಿಗಳಲ್ಲಿ ಸಾವಿರಾರು ಹೆಕ್ಟೆರ್ ಅಡಿಕೆ ತೋಟಗಳಿಗೆ, ಬೆಳೆಗಳಿಗೆ ಹಾನಿಯಾಗಿದ್ದು ಪ್ರತಿ ಹೆಕ್ಟೆರ್ ತೋಟಕ್ಕೆ 1ಲಕ್ಷ ರೂ.ವಿಶೇಷ ಪರಿಹಾರದ ಪ್ಯಾಕೇಜ್ ಘೋಷಿಸಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ MP Raghavendra ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ವಿಶೇಷ ಅಧಿಕಾರ ಬಳಸಿ ರಾಜ್ಯದ ರೈತರು ಪ್ರಕೃತಿ ವಿಕೋಪಗಳ ಹಾನಿಗೆ ಒಳಗಾದಾಗ ವಿಶೇಷ ಪರಿಹಾರದ ಪ್ಯಾಕೇಜ್ ಘೋಷಣೆ ಮಾಡಿದ್ದರು. ಈಗ ರೈತರಿಗೆ ಪ್ರತಿ ಹೆಕ್ಟೆರ್‍ಗೆ ನೀಡುವ ಪರಿಹಾರದ ಮೊತ್ತ ಕೇವಲ 31 ಸಾವಿರ ರೂ.ಮಾತ್ರವಿದ್ದು ಅದು ಯಾತಕ್ಕೂ ಸಾಕಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪರಿಹಾರ ಮೊತ್ತವನ್ನು ಹೆಕ್ಟೆರ್ ಗೆ ಒಂದು ಲಕ್ಷ ರೂ. ನಿಗಧಿಮಾಡಬೇಕು ಎಂದು ಪುನರಾಗ್ರಹಿಸಿದರು.
ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಹೋಬಳಿಯಲ್ಲಿ 50ಕ್ಕೂ ಹೆಚ್ಚು ಗ್ರಾಮಗಳ ಅಡಿಕೆ ತೋಟ, ಮನೆಗಳಿಗೆ ಮೊನ್ನೆಯ ಗಾಳಿ ಮಳೆಯಿಂದ ಹಾನಿಯಾಗಿದೆ. ಶಿವಮೊಗ್ಗ ತಾಲೂಕಿನ ಹೊಳಲೂರು, ಹಾರನಹಳ್ಳಿ ಹೋಬಳಿಯ 25ಕ್ಕೂ ಹೆಚ್ಚು ಗ್ರಾಮಗಳಿಗೆ ಹಾನಿಯಾಗಿದೆ. ಮಾಜಿ ಶಾಸಕ ಕೆ.ಬಿ.ಅಶೋಕ ನಾಯ್ಕ ಅವರ ನೇತೃತ್ವದಲ್ಲಿ ಹಾನಿ ಅಂದಾಜು ಮಾಡಲು ಸಮಿತಿಯೊಂದನ್ನು ರಚಿಸಲಾಗಿತ್ತು. ಸುಮಾರು 10 ಸಾವಿರ ಹೆಕ್ಟೇರ್ ಪ್ರದೇಶದ ಅಡಿಕೆ ತೋಟದಲ್ಲಿ 5-6 ಸಾವಿರ ಹೆಕ್ಟೇರ್ ಅಡಿಕೆ ತೋಟ ನಾಶವಾಗಿದೆ. ಧರೆಗುರುಳಿದ ಅಡಿಕೆ ಮರಗಳನ್ನು ನೋಡಿದರೆ ಯುದ್ಧ ಭೂಮಿಯಲ್ಲಿ ಹೆಣಗಳ ರಾಶಿಯಂತೆ ಗೋಚರವಾಗುತ್ತಿವೆ. 350-400 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಮನೆಯ ಹಂಚುಗಳು, ತಗಡಿನ ಶೀಟುಗಳು, ಟಾರ್ಪಾಲುಗಳು ಹಾರಿಹೋಗಿವೆ. ಮೇಘ ಸ್ಪೋಟದಿಂದ ಜನಜೀವನ ಅಸ್ತವ್ಯಸ್ತವಾಗಿವೆ ಎಂಬ ವರದಿ ನೀಡಿದ್ದಾರೆ ಎಂದರು.
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಗೆ ರಾಜ್ಯ ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ ಅವರು ಇತ್ತೀಚಿನ ಗಾಳಿ ಮಳೆ ಎಚ್ಚರಿಕೆಯ ಸಂದೇಶವಾಗಿದೆ. ರಾಷ್ಟ್ರೀಯ ಪ್ರಕೃತಿ ವಿಕೋಪ ಪರಿಹಾರ ನಿಧಿ (ಎನ್ ಡಿಆರ್ ಎಫ್)ಯಿಂದ ರೈತರಿಗಾದ ಹಾನಿಯ ಅಂದಾಜು ಮಾಡಲಾಗುತ್ತದೆ. ಅದೇ ರೀತಿ ರಾಜ್ಯ ಪ್ರಕೃತಿ ವಿಕೋಪ ಪರಿಹಾರ ನಿಧಿ (ಕೆಡಿಆರ್ ಎಫ್) ಯೂ ಸರಿಯಾಗಿ ಕೆಲಸ ನಿರ್ವಹಿಸಬೇಕು. ಭೂಮಿ ಸಾಪ್ಟ್ ವೇರ್ ಮೂಲಕ ಹಾನಿಯನ್ನು ಅಂದಾಜಿಸಬಹುದು. ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಬೆಳೆ ಹಾನಿ ಕುರಿತು ಮಾಹಿತಿ ಒದಗಿಸುವಂತಾಗಬೇಕು ಎಂದು ಸಲಹೆ ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್ ಮಾತನಾಡಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಜೀವನಕ್ಕೆ 50 ವರ್ಷ ತುಂಬಿದ ಸವಿ ನೆನಪಿಗಾಗಿ ಮೇ.9ರಂದು ಚಿತ್ರದುರ್ಗದಲ್ಲಿ ಅಲ್ಲಿಯ ಸಂಸದ ಗೋವಿಂದ ಕಾರಜೋಳ ಅಧ್ಯಕ್ಷತೆಯಲ್ಲಿ “ಅಭಿಮಾನೋತ್ಸವ” ಆಯೋಜಿಸಲಾಗಿದೆ. ಸಂಸದ ಬಿ.ವೈ.ರಾಘವೇಂದ್ರ ಅವರ ನೇತೃತ್ವದಲ್ಲಿ, ಜಿಲ್ಲೆಯ ಎಲ್ಲ ಬಿ.ಜೆ.ಪಿ.ಶಾಸಕರ ಮುಂದಾಳತ್ವದಲ್ಲಿ ಜಿಲ್ಲೆಯಿಂದ ಸುಮಾರು 50 ಸಾವಿರ ಕಾರ್ಯಕರ್ತರು ಸಮಾವೇಶಕ್ಕೆ ತೆರಳಲಿದ್ದಾರೆ. ಎಂದರು.
ಇದೇ ಸಂದರ್ಭದಲ್ಲಿ ಬಿಎಸ್ ವೈ ಅಭಿಮಾನೋತ್ಸವದ ಸ್ಟಿಕ್ಕರ್ ಬಿಡುಗಡೆಗೊಳಿಸಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಡಾ.ಧನಂಜಯ ಸರ್ಜಿ, ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಮಾಜಿ ಶಾಸಕ ಕೆ.ಬಿ.ಅಶೋಕ್ ನಾಯ್ಕ್, ಪ್ರಮುಖರಾದ ಎಸ್.ದತ್ತಾತ್ರಿ, ಸಿ.ಎಚ್.ಮಾಲತೇಶ್, ಸುರೇಖಾ ಮುರಳೀಧರ್, ಎಂ.ಬಿ.ಹರಿಕೃಷ್ಣ, ನವುಲೆ ಮಂಜುನಾಥ, ರಾಜೇಶ್ ಕಾಮತ್, ಎಸ್.ಚಂದ್ರಶೇಖರ್, ಸುಧಾಕರ, ಹರೀಶ್‍ನಾಯ್ಕ, ಮಲ್ಲೇಶಪ್ಪ, ಮಂಜುನಾಥ್, ಶಾಂತಾ ಸುರೇಂದ್ರ ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















